ವ್ಯಾಲೆಂಟೈನ್ಸ್ ಡೇ ನೋ? ಮಾತಾ ಪಿತರ ದಿನವೋ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 11
ವ್ಯಾಲೆಂಟೈನ್ಸ್ ಡೇ ಹತ್ತಿರ ಸುಳಿದಾಡುತ್ತಿದ್ದರೂ ಪ್ರೇಮ ನಿವೇದನೆಗೆ ಅಗತ್ಯವಾಗಿರುವ ಕೊಡುಗೆಗಳ ಮಾರಾಟ ಮತ್ತು ಖರೀದಿಯ ಭರಾಟೆ ನಗರದಲ್ಲಿ ಅಷ್ಟು ಜೋರು ಪಡೆದಿಲ್ಲ.
ಇಡೀ ನಗರ ಸುತ್ತಾಡಿದರೆ ಈಚಿನ ವರ್ಷಗಳಲ್ಲಿ ಪ್ರೇಮಿಗಳ ದಿನ ತನ್ನ ಖದರ್ ಕಳೆದುಕೊಳ್ಳುತ್ತಿದೆ ಏನೋ ಎಂದು ಭಾಸವಾಗುತ್ತಿದೆ. ಪ್ರೇಮಿಗಳ ದಿನಾಚರಣೆಗೆ ಕೇವಲ ಎರಡೇ ದಿನ ಬಾಕಿ ಇದ್ದರೂ ಇನ್ನೂ ನಗರದ ಪ್ರಮುಖ ರಸ್ತೆಗಳ ಅಂಗಡಿಗಳಲ್ಲಿ ವ್ಯಾಲೆಂಟೈನ್ಸ್ ಡೇಗೆ ಸಂಬಂಧಿಸಿದ ಗ್ರೀಟಿಂಗ್ಸ್ ಕಾರ್ಡ್ ಮತ್ತು ಗಿಫ್ಟ್ಗಳಿಲ್ಲದಿರುವುದು ಕೂಡ ಅಚ್ಚರಿಗೆ ಕಾರಣವಾದರೂ ಸತ್ಯ.
ಮೂರು ವರ್ಷಗಳ ಹಿಂದೆ ವ್ಯಾಲೆಂಟೈನ್ಸ್ ಡೇ ಒಂದು ವಾರವಿರುವಾಗಲೇ ಯುವ ಪ್ರೇಮಿಗಳ ಗ್ರೀಟಿಂಗ್ ಖರೀದಿ ಜೋರು ಪಡೆದಿರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರೇಮಿಗಳಿಗೆ ಶ್ರೀರಾಮ ಸೇನೆ ಭಯ ಶುರುವಾಗಿದೆ.
ಯುವ ಪ್ರೇಮಿಗಳ ಪಾಲಿಗೆ ಫೆ.14 ಸ್ಮರಣೀಯ. ಈ ದಿನ ತಮ್ಮ ಜೀವಮಾನದಲ್ಲಿ ಶಾಶ್ವತವಾಗಿರಲಿ ಎಂಬ ಆಶಯದ ಮುಖ ಹೊತ್ತು ಪ್ರೇಮ ನಿವೇದನೆಗೆ ಸಿದ್ಧವಾಗುವ ಯುವಕರಿಗೆ, ಯುವತಿಯರಿಗೆ ಮನಮುಟ್ಟುವ ಪ್ರೇಮ ನಿವೇದನೆಯೊಂದಿಗೆ ಸಣ್ಣ ಕೊಡುಗೆ ಪಡೆಯುವುದು ಅಥವಾ ಕೊಡುವುದು ಇಷ್ಟ. ಆದರೆ ಇದಕ್ಕೆ ಈ ಬಾರಿ ಕತ್ತರಿ ಬಿದ್ದಿದೆ. ಏಕೆಂದರೆ ಶ್ರೀರಾಮ ಸೇನೆಯ ಹೆದರಿಕೆ.
ಪ್ರೇಮಿಗಳ ದಿನ ಎನ್ನುವುದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಎಂದು ವಿರೋಧಿಸುತ್ತಿರುವ ಸಂಘಟನೆಗಳಿಂದಾಗಿ ಗಿಫ್ಟ್ ಸೆಂಟರ್ಗಳಲ್ಲಿ ಕೂಡ ಅಷ್ಟಾಗಿ ಪ್ರೇಮ ಸಂದೇಶ ಹೊತ್ತ ಕೊಡುಗೆಗಳ ಮಾರಾಟ ಜೋರು ಪಡೆದಿಲ್ಲ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ ಇತ್ತ ಸುಳಿಯುವುದು ಅಪರೂಪವೆನ್ನುವಂತಾಗಿದೆ. ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಕೆಲವು ದಿನಗಳ ಹಿಂದೆ ಪ್ರೇಮಿಗಳ ದಿನವನ್ನು ಮಾತಾ ಪಿತೃ ಪೂಜನೀಯ ದಿನ ಎಂದು ಆಚರಿಸಿ ಎಂದು ಫರ್ಮಾನು ಹೊರಡಿಸಿದ ಬೆನ್ನಲ್ಲೆ ಯುವ ಪ್ರೇಮಿಗಳ ಮನಸ್ಸಿನಲ್ಲಿ ನಡುಕ ಹುಟ್ಟಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್ ಅವರು, ಲಾಭದ ಆಸೆಗೆ ಪ್ರೇಮಿಗಳ ದಿನದಂದು ಗಿಫ್ಟ್ಗಳನ್ನು ಮಾರಾಟ ಮಾಡಬೇಡಿ. ಇಂತಹ ವಸ್ತುಗಳ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಹೀಗಾಗಿ ಪುಣೆ, ಮುಂಬೈ, ದೆಹಲಿಗಳಿಂದ ವ್ಯಾಲಂಟೈನ್ ಡೇಗೆ ಸಂಬಂಧಿಸಿದ ಗಿಫ್ಟ್ಗಳನ್ನು ವ್ಯಾಪಾರಿಗಳು ತರಿಸಿ ಮಾರಾಟ ಮಾಡುತ್ತಿದ್ದರು. ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿರುವ ಆಚರಣೆ ಎಂದು ಹಿಂದೂಪರ ಸಂಘಟನೆಗಳು ಹೇಳಿದ್ದರಿಂದ ಮತ್ತು ದಾಳಿಯ ಭೀತಿಯಲ್ಲಿರುವ ಕಾರಣ ವ್ಯಾಪಾರಿಗಳಲ್ಲಿ ಆತಂಕ ಮನೆ ಮಾಡಿದೆ.
ಪ್ರೇಮಿಗಳ ದಿನದ ಹೆಸರಿನಲ್ಲಿ ನಡೆಯುವ ಅನೈತಿಕ ಚಟುವಟಿಕೆ ವಿರುದ್ಧ ಕೆಂಡ ಕಾರುವುದು ಈ ವಿರೋಧದ ಹಿಂದಿನ ಉದ್ದೇಶವಾದರೂ, ಯುವ ಪ್ರೇಮಿಗಳ ಪಾಲಿಗೆ ಶ್ರೀರಾಮ ಸೇನೆ ಎಚ್ಚರಿಕೆ ನೀಗಲಾರದ ಕಂಟಕವಾಗಿ ಪರಿಣಮಿಸಿದೆ. ಬಾರ್, ಪಬ್ಗಳಲ್ಲಿ ನಡೆಯುವ ಅಶ್ಲೀಲ ಕುಣಿತ, ಕುಡಿತಗಳು ಪ್ರೇಮಿಗಳ ದಿನದಂದು ಬಹುತೇಕ ಸ್ಥಳಗಳಲ್ಲಿ ನಡೆಯುವುದರಿಂದ ಸಂಘಟನೆಗಳು ಮತ್ತು ಶ್ರೀರಾಮ ಸೇನೆ ಇಡೀ ನಗರಾದ್ಯಂತ ಎಚ್ಚರಿಕೆ ವಹಿಸಿದೆ. ಕಾರಣ ನಗರದ ದುರ್ಗದ ಬೈಲ್, ಕೊಪ್ಪಿಕರ್ ರಸ್ತೆ, ದಾಜಿಬಾನ್ ಪೇಟ್ ಮುಂತಾದ ಪ್ರದೇಶಗಳಲ್ಲಿರುವ ಗಿಫ್ಟ್ ಸೆಂಟರ್ಗಳಲ್ಲಿ ವ್ಯಾಲಂಟೈನ್ ಡೇಗೆ ಸಂಬಂಧಿಸಿದ ಕೊಡುಗೆಗಳು ಅಷ್ಟಾಗಿ ಕಾಣುತ್ತಿಲ್ಲ.
ವ್ಯಾಲಂಟೈನ್ ಡೇ ಆಚರಿಸುವ ನೆಪದಲ್ಲಿ ಪ್ರೇಮಿಗಳು ಅಶ್ಲೀಲ ಚಟುವಟಿಕೆ ತೊಡಗಿಸಿಕೊಂಡಿದ್ದು ಕಂಡು ಬಂದರೆ ಸ್ಥಳದಲ್ಲಿಯೇ ಆ ಪ್ರೇಮಿಗಳ ತಂದೆ ತಾಯಿಗಳನ್ನು ಕರೆಸಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ನೆರವೇರಿಸಲಾಗುವುದು ಎಂದು ಎಚ್ಚರಿಸಿವೆ. ಈ ಹಿನ್ನೆಲೆಯಲ್ಲಿ ಫೆ. 1 4ರಿಂದ ಪ್ರೇಮಿಗಳು ದೂರಾಗಿರುವ ಸಾಧ್ಯತೆಗಳು ಇಲ್ಲದಿಲ್ಲ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ವ್ಯಾಪಾರಸ್ಥರೊಬ್ಬರು, ವ್ಯಾಲಂಟೈನ್ಸ್ ಡೇಗೆ ಸಂಬಂಧಿಸಿದ ಕೊಡುಗೆಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಅಂಗಡಿಗಳ ಮೇಲೆ ಕಾರ್ಯಕರ್ತರು ದಾಳಿ ಮಾಡುತ್ತೇವೆ ಎಂದು ಕೆಲ ಸಂಘಟನೆಗಳು ಎಚ್ಚರಿಸಿವೆ. ಲಕ್ಷಾಂತರ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿರುತ್ತೇವೆ. ಕಾರ್ಯಕರ್ತರು ದಾಳಿ ಮಾಡಿ ಇಡೀ ಅಂಗಡಿ ನಾಶ ಮಾಡಿದರೆ ಹಾನಿ ಆಗುವುದು ನಮಗೆ. ಏಕೆ ತೊಂದರೆ ಮೈಮೇಲೆ ಹಾಕಿಕೊಳ್ಳೋಣ? ಒಂದು ವೇಳೆ ಬೇಡಿಕೆ ಹೆಚ್ಚಾದರೆ ಕದ್ದು ಮುಚ್ಚಿ ಒಂದಿಷ್ಟು ವ್ಯಾಪಾರ ಮಾಡುವುದು ಇದ್ದೇ ಇದೆ ಎನ್ನುತ್ತಾರೆ ಅವರು. ಹಿಂದು ಪರ ಸಂಘಟನೆಗಳ ಎಚ್ಚರಿಕೆಯನ್ನು ಪ್ರತಿ ಬಾರಿ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಗದ್ದಲ ಮಾಡುತ್ತಿದ್ದ ಪ್ರಗತಿಪರ ಸಂಘಟನೆಗಳು ಕೂಡ ಧ್ವನಿ ಎತ್ತದಿರುವುದು ಆಶ್ಚರ್ಯಕರ ಸಂಗತಿ.
-ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

