ಧಾರವಾಡ

ಪಿಜೆಪಿಯಿಂದ ಮುಕ್ತವಾಗಲಿದೆ ಮಹಾನಗರ ಪಾಲಿಕೆ

Published On :

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ಬಾರಿ ಪಿಜೆಪಿ (ಪ್ರಹ್ಲಾದ ಜೋಶಿ ಪಾರ್ಟಿ)ಯಿಂದ ಮುಕ್ತವಾಗಲಿದ್ದು, ಕೆಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ಹೇಳಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಹಾಗೂ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜಿಲ್ಲೆಯ ಐದೂ ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 67 ವಾರ್ಡ್‌ಗಳಲ್ಲಿ 65 ವಾರ್ಡ್‌ಗಳಿಗೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.  ಧಾರವಾಡ ವಾರ್ಡ್ ನಂ. 3ರಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು, ಹುಬ್ಬಳ್ಳಿ ಕಿಲ್ಲಾದಲ್ಲಿ ಸಹ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಒಟ್ಟು ಏಳು ಮುಸ್ಲಿಂ ಅಭ್ಯರ್ಥಿಗಳು, ನಾಲ್ಕು ಕುರುಬ ಸಮಾಜದ ಅಭ್ಯರ್ಥಿಗಳು, ಎರಡು ಮರಾಠ, ಇನ್ನುಳಿದಂತೆ ಸಾಮಾನ್ಯ ಕ್ಷೇತ್ರಗಳಲ್ಲಿ ಎಲ್ಲ ಸಮಾಜದವರನ್ನು ಪರಿಗಣನೆಗೆ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಣತಿಯಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸೂತ್ರ ಅಳವಡಿಸಿಕೊಳ್ಳಲಾಗಿದೆ ಎಂದರು. ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಮತ್ತೆ ಬಿಜೆಪಿಯಿಂದ ಕೆಜೆಪಿಗೆ ಮರಳಿದ್ದು, ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕೆಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ವಾರ್ಡ್ ನಂ. 6ರಿಂದ ಮಹೇಶ ಹಿರೇಮಠ, 11ರಿಂದ ರೇಷ್ಮಾ ರೋಣದ, 15ರಿಂದ ಸಂತೋಷ ದೇವರೆಡ್ಡಿ, 16ರಿಂದ ಭಜಂತ್ರಿ, 17ರಿಂದ ಚಂದ್ರು ಪೂಜಾರ ಸೇರಿದಂತೆ ಅನೇಕರಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದರು. ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸಂಚಾಲಕ ಸುನೀಲ ಸರೂರು, ಗ್ರಾಮೀಣ ಭಾಗದ ಮುಖಂಡ ಸಂಗನಗೌಡ ರಾಮನಗೌಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.