ಖೊಟ್ಟಿ ಪ್ರಮಾಣ ಪತ್ರ: ಆರೋಪ (ಸುದ್ದಿ ಸಂಕ್ಷೇಪ)
ಹುಬ್ಬಳ್ಳಿ: ಮಹಾನಗರ ಪಾಲಿಕೆ ವಾರ್ಡ್ ನಂ. 47ರಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಲಕ್ಷ್ಮಣ ಮಲ್ಲೇಶಪ್ಪ ಗಂಡಗಾಳೆ (ಕಲಾಲ) ಖೊಟ್ಟಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಆರೋಪಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಅಭ್ಯರ್ಥಿ ಗಂಡಗಾಳೆ ಅವರ ಜಾತಿ ಕಾಲಂನಲ್ಲಿ ಕಲಾಲ ಎಂದಿದೆ. ಆದರೆ, ಶಾಲೆಯ ಪ್ರಮಾಣ ಪತ್ರದಲ್ಲಿ ಮರಾಠಿ ಕಲಾಲ ಎಂದು ಅನಧಿಕೃತವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ದೂರಿದ್ದಾರೆ. ತಿದ್ದುಪಡಿ ಮಾಡಿರುವ ಪ್ರಮಾಣಪತ್ರವನ್ನು ತಹಸೀಲ್ದಾರರಿಗೆ ನೀಡಿ ಕಾನೂನು ಪ್ರಕಾರ ಕಲಾಲ 2ಎ ಜಾತಿಗೆ ಸಂಬಂಧಿಸಿದ್ದರೂ ಅದನ್ನು ಮರೆಮಾಚಿ ತಿದ್ದುಪಡಿ ಮಾಡಿದ ಖೊಟ್ಟಿ ಪ್ರಮಾಣ ಪತ್ರ ಲಗತ್ತಿಸಿ 3ಬಿ ಪ್ರವರ್ಗಕ್ಕೆ ಸಿಗಬೇಕಿದ್ದ ಸೌಲಭ್ಯ ಕಬಳಿಸಿದ್ದಾರೆ ಎಂದೂ ಹಿಂಡಸಗೇರಿ ಆರೋಪಿಸಿದ್ದಾರೆ.
ರಾಷ್ಟ್ರೀಯ ವಿಚಾರ ಸಂಕಿರಣ
ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನಲ್ಲಿ ಫೆ. 27 ಹಾಗೂ 28ರಂದು 'ಎಮರ್ಜಿಗ್ ಟ್ರೆಂಡ್ಸ್ ಇನ್ ಮ್ಯಾಥಮೆಟಿಕ್ಸ್' ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ವಿವಿ ಕುಲಪತಿ ಡಾ. ಎಚ್.ಬಿ. ವಾಲಿಕಾರ ವಿಚಾರ ಸಂಕಿರಣ ಉದ್ಘಾಟಿಸುವರು. ಒಟ್ಟು ನಾಲ್ಕು ಗೋಷ್ಠಿಗಳು ನಡೆಯಲಿದ್ದು, ವಿವಿಧ ಕಾಲೇಜುಗಳ 15ಕ್ಕೂ ಹೆಚ್ಚು ಉಪನ್ಯಾಸಕರು ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ.
ಮನುಷ್ಯನ ಜೀವನ ಪ್ರಕೃತಿಗೆ ವಿರುದ್ಧವಿದೆ
ಹುಬ್ಬಳ್ಳಿ: ಮನುಷ್ಯ ಪ್ರಕೃತಿದತ್ತವಾಗಿ ಬದುಕುತ್ತಿಲ್ಲ, ಪ್ರಕೃತಿಗೆ ವಿರುದ್ಧವಾಗಿ ತನ್ನ ಆಹಾರ, ನಿದ್ರೆ ಮುಂತಾದ ಆವಶ್ಯಕತೆಗಳನ್ನು ಪಡೆಯುತ್ತಿರುವುದರಿಂದ ಕಾಯಿಲೆಗಳು ಕಾಡುತ್ತಿವೆ ಎಂದು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಶನಿವಾರ ನಗರದಲ್ಲಿ ಸಹಜ ಸಮೃದ್ಧಿ ಮತ್ತು ದೇಶಪಾಂಡೆ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದೇಸಿ ಭತ್ತದ ತಳಿಗಳ ಪ್ರದರ್ಶನ ಮತ್ತು ಕೆಂಪಕ್ಕಿ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನನ್ನು ಹೊರತುಪಡಿಸಿ ಇತರೆ ಎಲ್ಲ ಪ್ರಾಣಿಗಳು ಪ್ರಕೃತಿದತ್ತವಾಗಿ ದೊರೆಯುತ್ತಿರುವ ಆಹಾರ ಸೇವಿಸಿ ಆರೋಗ್ಯಕರ ಜೀವನ ಮಾಡುತ್ತಿವೆ. ಮನುಷ್ಯ ಮಾತ್ರ ಅತಿಯಾಗಿ ಬೇಯಿಸಿದ, ಸುಟ್ಟ, ಹುರಿದ ಇತ್ಯಾದಿ ಪದಾರ್ಥ ಕೂಡಿದ ಆಹಾರ ಸೇವಿಸುತ್ತಿದ್ದಾನೆ. ಇದು ಪ್ರಕೃತಿಗೆ ವಿರುದ್ಧವಾದ ಆಹಾರ ಸೇವನೆ ನಿಯಮ. ಆರೋಗ್ಯಕರ ಬದುಕಿಗೆ ಪ್ರಕೃತಿದತ್ತ ಆಹಾರ ಸೇವನೆ ಮತ್ತು ಋತುಮಾನಕ್ಕೆ ಅನುಗುಣವಾಗಿ ಲಭ್ಯ ಆಹಾರಗಳ ಸೇವನೆ ಮುಖ್ಯ ಎಂದು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಸಹಜ ಸಮೃದ್ಧಿ ಸಂಸ್ಥೆ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಅವರು, ಬಿಳಿ ಅಕ್ಕಿ ಹೆಸರಿನಲ್ಲಿ ನಾವು ಇಂದು ಪ್ರತಿದಿನ ವಿಷ ಉಣ್ಣುತ್ತಿದ್ದೇವೆ. ಔಷಧೀಯ ಗುಣಗಳುಳ್ಳ ಅನ್ನ ಸೇವನೆಯಲ್ಲಿ ದೇಸಿ ಸಂಸ್ಕೃತಿ ಕಾಯ್ದುಕೊಂಡ ಮಲೆನಾಡು ಕೂಡ ಇಂದು ಫಾಲಿಷ್ ಮಾಡಿದ ಅಕ್ಕಿಗಳಿಗೆ ಮೊರೆ ಹೋಗುತ್ತಿದ್ದು, ಇದು ಭವಿಷ್ಯತ್ತಿನ ದಿನಗಳಲ್ಲಿ ಆಗಲಿರುವ ದೇಶಿ ಭತ್ತದ ತಳಿಗಳ ಅವನತಿಯ ಲಕ್ಷಣವಾಗಿದೆ. ಪಾಲಿಷ್ ಮಾಡಿದ ಅಕ್ಕಿಗಳ ಸೇವನೆಯಿಂದ ಬೆಂಗಳೂರು ಮತ್ತು ಹೈದ್ರಾಬಾದ್ಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ತೃಣ ಧಾನ್ಯ ಮತ್ತು ಜೋಳದ ರೊಟ್ಟಿ ಸೇವನೆ ಮುಂದುವರಿದಿರುವ ಕಾರಣ ಅಂತಹ ಅನಾರೋಗ್ಯಕರ ಪರಿಸ್ಥಿತಿ ಇಲ್ಲ ಎಂದರು. ಇದೇ ಸಮಯದಲ್ಲಿ ದೇಸಿ ಭತ್ತದ ತಳಿಗಳ ಕುರಿತು ಮಾಹಿತಿ ನೀಡುವ ಅನ್ನ ತಿನ್ನಿ ಎಂಬ ಕಿರು ಹೊತ್ತಿಗೆಯನ್ನು ದೇಶಪಾಂಡೆ ಫೌಂಡೇಷನ್ನ ನೀಲಂ ಮಹೇಶ್ವರಿ ಬಿಡುಗಡೆ ಮಾಡಿದರು. ಚನ್ನಬಸಪ್ಪ ಕೊಂಬಳಿ, ದೇಶಪಾಂಡೆ ಫೌಂಡೇಷನ್ನ ನೀಲಂ ಮಹೇಶ್ವರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

