ರಾಜಸ್ಥಾನಿ ಮಾರವಾಡಿ ಯುವಕ ಚುನಾವಣೆ ಕಣಕ್ಕೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇರಿದೆ. ಪ್ರಸಕ್ತ ಚುನಾವಣೆಯ ವಿಶೇಷವೆಂದರೆ ಜೈಲಿನಲ್ಲಿದ್ದುಕೊಂಡು ಚುನಾವಣಾ ಕಣಕ್ಕಿಳಿದಿದ್ದಾರೆ, ರಾಜಕೀಯದ ಸಹವಾಸವೇ ಬೇಡವೆಂದು ದೂರು ಉಳಿದು ವ್ಯಾಪಾರ ವಹಿವಾಟು ಮಾಡಿಕೊಂಡಿರುವವರೂ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.
ನಿಜ, ಹುಬ್ಬಳ್ಳಿ ನಗರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ರಾಜಸ್ಥಾನಿ ಮಾರವಾಡಿ ಯುವಕನೋರ್ವ ಚುನಾವಣಾ ಕಣಕ್ಕಿಳಿಯುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಯುವ ಮುಖಂಡ ಧರ್ಮೇಂದ್ರ ಚೌಧರಿ 31ನೇ ವಾರ್ಡ್ನಿಂದ ಸ್ಪರ್ಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸವನ್ನು ಮೆಲುಕು ಹಾಕಿ ನೋಡಿದಾಗ ರಾಜಸ್ಥಾನಿ ಮಾರವಾಡಿಗಳು ಚುನಾವಣೆಯ ಕಣಕ್ಕಿಳಿದವರು ಒಂದಿಬ್ಬರು ಮಾತ್ರ. ಆದರೆ, ಅವರಾರೂ ಸ್ವಂತ ಆಸಕ್ತಿಯಿಂದ ಕಣಕ್ಕಿಳಿದವರಲ್ಲ. ಅಭ್ಯರ್ಥಿಗಳು ಸಿಗದಾದಾಗ ಪಕ್ಷದ ಒತ್ತಡಕ್ಕೆ ಕಾಟಾಚಾರಕ್ಕೆಂದು ಕಣಕ್ಕಿಳಿದವರು.
ಹೀಗಿರುವಾಗ ಇದೇ ಪ್ರಥಮ ಬಾರಿಗೆ ರಾಜಸ್ಥಾನಿ ಮಾರವಾಡಿ ಯುವಕ ಧರ್ಮೇಂದ್ರ ಅವರನ್ನು ಸಮಾಜದ ಮುಖಂಡರೇ ಚುನಾವಣಾ ಕಣಕ್ಕಿಳಿಸಿದಿದ್ದಾರೆ. ತನ್ಮೂಲಕ ಪಾಲಿಕೆಯಲ್ಲಿ ತಮ್ಮ ಸಮಾಜದ ಒಬ್ಬ ಸದಸ್ಯನನ್ನು ಪ್ರತಿನಿಧಿಯಾಗಿ ಕಳುಹಿಸುವ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಅಂದ ಹಾಗೆ, ರಾಜಸ್ಥಾನಿ ಮಾರವಾಡಿಗಳು ಮೂಲತ-ರಾಜಸ್ಥಾನದವರು. ವ್ಯಾಪಾರ ವೃತ್ತಿಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಇವರನ್ನು ದೇಶವ್ಯಾಪಿ ಕಾಣಬಹುದು. ಹುಬ್ಬಳ್ಳಿಯಲ್ಲಿಯೂ ಇವರ ಸಂಖ್ಯೆ ಅಪಾರವಾಗಿದೆ. ಅದರಲ್ಲಿಯೂ ಮುಖ್ಯವಾಗಿ ತಲೆ ತಲಾಂತರದಿಂದ ಅವರು ಇಲ್ಲಿನ ನಿವಾಸಿಗಳಾಗಿದ್ದಾರೆ. ಹುಬ್ಬಳ್ಳಿಯ ಮಟ್ಟಿಗೆ ರಾಜಸ್ಥಾನಿ ಮಾರವಾಡಿಗಳು ಹಳಬರಾದರೂ ರಾಜಕೀಯದಿಂದ ಇವರು ಮಾರುದ್ದ ದೂರ. ತಾವಾಯಿತು ತಮ್ಮ ವೃತ್ತಿಯಾಯಿತು ಎನ್ನುವ ಜಾಯಮಾನದವರಿವರು. ಹೀಗಿದ್ದಾಗಿಯೂ ಪಾಲಿಕೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ತಮ್ಮ ಸಮಾಜದ ಯುವಕನೋರ್ವನನ್ನು ಚುನಾವಣಾ ಕಣಕ್ಕಿಳಿಸುವ ಮೂಲಕ ರಾಜಕೀಯದಲ್ಲಿಯೂ ತಮ್ಮ ಅಸ್ಥಿತ್ವ ಸಾಬೀತು ಮಾಡಲು ಮುಂದಾಗಿದ್ದಾರೆ.
ವ್ಯಾಪಾರಿಗಳಿಗೆ ರಕ್ಷೆ: ಅಂದ ಹಾಗೆ ಸಮಾಜದ ಮುಖಂಡರು ಧರ್ಮೇಂದ್ರ ಅವರನ್ನು ಚುನಾವಣಾ ಕಣಕ್ಕಿಳಿಸುವ ಹಿಂದೆಯೂ ಒಂದಿಷ್ಟು ಅಭಿಲಾಷೆ ಹೊಂದಿದ್ದಾರೆ. ಅದೇನೆಂದರೆ, ವ್ಯಾಪಾರಿ ವೃತ್ತಿಯಲ್ಲಿರುವ ರಾಜಸ್ಥಾನಿ ಮಾರವಾಡಿಗಳು ನಿರುಪದ್ರವಿಗಳು. ಇದನ್ನು ಮನಗಂಡು ಕೆಲವರು ಅವರಿಗೆ ಉಪದ್ರವ ಮಾಡುವುದುಂಟು. ಅಧಿಕಾರಿಗಳಿಂದ ಹಿಡಿದು ಮರಿ ಪುಡಾರಿಗಳ ವರೆಗೆ ಕೆಲವರು ಅವರನ್ನು ಹಣಕ್ಕಾಗಿ ಪೀಡಿಸುವುದುಂಟು. ಇದನ್ನು ತಪ್ಪಿಸಬೇಕೆಂದರೆ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಒಬ್ಬ ವ್ಯಕ್ತಿ ಇರಬೇಕು ಎಂದು ಮನಗಂಡಿರುವ ಸಮಾಜದವರು ಧರ್ಮೇಂದ್ರ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಿದ್ದಾರೆ. ಜತೆಗೆ ತಾವು ಅನೇಕ ವರ್ಷಗಳಿಂದ ವಾಸವಾಗಿರುವ ಹುಬ್ಬಳ್ಳಿಯ ಅಭಿವೃದ್ಧಿಗೇನಾದರೂ ಕೊಡುಗೆ ನೀಡಬೇಕೆಂಬ ಇಚ್ಚೆ ಹೊಂದಿ, ರಾಜಕೀಯ ಅಸ್ಥಿತ್ವಕ್ಕೆ ಮುಂದಾಗಿದ್ದಾರೆ. ಯುವಕರಾಗಿರುವ ಧಮೇಂದ್ರ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರಿಗಾದರೂ ಅನ್ಯಾಯವಾದಲ್ಲಿ ಅವರ ಪರ ದನಿ ಎತ್ತಿ ಗಮನ ಸೆಳೆದಿದ್ದಾರೆ. ಇದನ್ನು ಕಂಡು ಸಮಾಜದ ಪ್ರಮುಖರು ಧರ್ಮೇಂದ್ರ ಅವರನ್ನು ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸಲು ತಿಳಿಸಿದ್ದಾರೆ.
ಬಿಜೆಪಿಗೆ ಪೆಟ್ಟು: ಪ್ರಸ್ತುತ ಧರ್ಮೇಂದ್ರ ಕಣಕ್ಕಿಳಿದಿರು ವಾರ್ಡ್ ನಂ. 31 ಬಿಜೆಪಿಯ ಹಿಡಿತದಲ್ಲಿತ್ತು. ಮಹೇಶ ಉಪ್ಪಿನ ಈ ವಾರ್ಡ್ನ ನಿರ್ಗಮಿತ ಸದಸ್ಯ. ಹಾಲಿ ಮಹೇಶ ಉಪ್ಪಿನ ಮಗ ಆದರ್ಶ ಉಪ್ಪಿನ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಆದರ್ಶ ಉಪ್ಪಿನಗೆ ಅಪ್ಪನ ಪರಿಚಯ ಬಿಟ್ಟರೆ ಸ್ವಂತ ಹೇಳಿಕೊಳ್ಳುವ ಅಸ್ಥಿತ್ವ ಹಾಗೂ ಪರಿಚಯವಿಲ್ಲ. ಮಹೇಶ ಉಪ್ಪಿನ ಕಾಲಾವಧಿಯಲ್ಲಿಯೂ ಹೇಳಿಕೊಳ್ಳುವಂತ ಕೆಲಸ ವಾರ್ಡ್ನಲ್ಲಾಗಲಿಲ್ಲ. ಅರಿಹಂತ ಕಾಲೋನಿ, ಆಕಾಶ ಪಾರ್ಕ್, ಶಬರಿ ನಗರದಂತಹ ಪ್ರದೇಶ ಪಕ್ಕಾ ಹಳ್ಳಿಯಂತಿದ್ದು ಮೂಲ ಸೌಕರ್ಯ ತಲುಪಿಲ್ಲ. ಇದು ವಾರ್ಡ್ನ ಮತದಾರರ ಕೆಂಗಣ್ಣಿಗೂ ಗುರಿಯಾಗಿದೆ.
ಇನ್ನು ಧರ್ಮೇಂದ್ರ ಅವರು ಈ ವಾರ್ಡ್ನಿಂದ ಸ್ಪರ್ಧಿಗಿಳಿದಿರುವುದು ಬಿಜೆಪಿ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ರಾಜಸ್ಥಾನಿ ಮಾರವಾಡಿಗಳು ಬಹುತೇಕ ಬಿಜೆಪಿಯತ್ತ ಒಲವು ಹೊಂದಿರುವವರು. ಸಮಾಜದ ವಿಷಯಕ್ಕೆ ಬಂದಾಗ ತಮ್ಮ ವ್ಯಕ್ತಿಯನ್ನು ಬಿಟ್ಟು ಕೊಡದ ಕಟ್ಟರವಾದಿಗಳು. ಹೀಗಿದ್ದಾಗ ತಮ್ಮದೇ ಸಮಾಜದ ವ್ಯಕ್ತಿಯಾಗಿರುವ ಧರ್ಮೇಂದ್ರ ಬೆಂಬಲಕ್ಕೆ ಇಡೀ ಸಮಾಜ ನಿಲ್ಲಲಿದೆ. ಸಾಲದ್ದಕ್ಕೆ ಈ ವಾರ್ಡ್ನಲ್ಲಿ ರಾಜಸ್ಥಾನಿ ಮಾರವಾಡಿಗಳು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. 2,200 ಮತದಾರರು ರಾಜಸ್ಥಾನಿ ಮಾರವಾಡಿಗಳೇ ಇದ್ದಾರೆ. ಈ ಮತಗಳೇ ಧರ್ಮೇಂದ್ರ ಪರವಾಗಿ ಬಂದರೆ ಅವರು ಗೆಲುವಿನ ದಡ ಸೇರುವುದು ಖಚಿತ. ಇನ್ನು ವಾರ್ಡ್ ಮತದಾರರ ಸಂಖ್ಯೆ 10 ಸಾವಿರ. ಇದಲ್ಲದೇ ಧರ್ಮೇಂದ್ರ ಅನ್ಯ ಸಮಾಜದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರ ಮತಗಳನ್ನೂ ಸೆಳೆದುಕೊಳ್ಳಲಿದ್ದಾರೆಂದು ಲೆಕ್ಕಿಸಲಾಗಿದೆ. ಇವೆಲ್ಲದರ ಮಧ್ಯೆ ಧರ್ಮೇಂದ್ರ ಅವರು ಕಣಕ್ಕಿಳಿದಿರುವುದು ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ಆರ್ ಪಕ್ಷದ ಅಭ್ಯರ್ಥಿಗಳಿಗೆ ಸಂಕಷ್ಟಕ್ಕೀಡು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

