ಧಾರವಾಡ

ವೇಮನರ ತತ್ವಾದರ್ಶ ಪಾಲಿಸಿ: ಮುನೇನಕೊಪ್ಪ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 23
ವಚನಗಳ ರಚನೆ, ವೈಚಾರಿಕ ಚಾರಿತ್ರ್ಯ, ಸಾಮಾಜಿಕ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತಿದ ಮಹಾಯೋಗಿ ವೇಮನರ ತತ್ವಾದರ್ಶಗಳನ್ನು ಪಾಲಿಸಬೇಕೆಂದು ನವಲಗುಂದ ಶಾಸಕ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನವಲಗುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಹಾಯೋಗಿ ವೇಮನರ 601ನೇ ಜಯಂತ್ಯುತ್ಸವ, ತತ್ವ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸೇವೆಗೈದ ವೇಮನರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ರಡ್ಡಿ ಸಮಾಜ ಬಾಂಧವರು ನಡೆಯಬೇಕೆಂದು ಶಾಸಕರು ಕರೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಯರೇಹೊಸಳ್ಳಿ ಯೋಗಿ ವೇಮನರ ಮಹಾಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿ, ಸಾರ್ವಜನಿಕರು ಅಹಂಭಾವ, ಕಾಮುಕತನ, ವರ್ಣ, ಜಾತಿ, ಮತ, ಪಂಥ, ಲಿಂಗ ಭೇದ ಮರೆತು ಸ್ವಚ್ಛ ಮನಸ್ಸಿನಿಂದ ಉತ್ತಮ ಕಾರ್ಯಗಳಲ್ಲಿ ತೊಡಗಬೇಕೆಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ವೇಮನರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಭಕ್ತರು ಶ್ರದ್ಧೆ, ಭಕ್ತಿಯಿಂದ ಅದ್ಧೂರಿಯಿಂದ ನಡೆಸುತ್ತಿರುವುದು ಸಂತಸದ ವಿಷಯ. ತೆಲುಗು ಭಾಷೆಯಲ್ಲಿದ್ದ ವೇಮನರ ವಚನಗಳನ್ನು ಕನ್ನಡಕ್ಕೆ ರೂಪಾಂತರಗೊಂಡಿದ್ದು, ಅವುಗಳನ್ನು ಎಲ್ಲರಿಗೂ ಮುಟ್ಟಿಸುವ ಕೆಲಸ ಸಮಾಜ ಬಾಂಧವರಿಂದ ಆಗಬೇಕಿದೆ. ನಲವಡಿಯಲ್ಲಿ ಮಹಾಯೋಗಿ ವೇಮನರ ದೇವಸ್ಥಾನ ಸ್ಥಾಪಿಸಿ ಅವರ ಜೀವನಾದರ್ಶಗಳನ್ನು ಎಲ್ಲೆಡೆ ಪಸರಿಸಬೇಕೆಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ವೇಮನರ ಜೀವನಾದರ್ಶಗಳ ಕುರಿತು ದಿ. ಎಸ್.ಆರ್. ಪಾಟೀಲ್ ಗ್ರಂಥ ರಚಿಸಿದ್ದರೂ ಅವುಗಳ ಪಾಲನೆ ಆಗುತ್ತಿಲ್ಲ. ವೇಮನಾನಂದ ಶ್ರೀಗಳು ಹೇಳಿದಂತೆ ಶಿಕ್ಷಣ, ಕೈಗಾರಿಕೆಗಳೊಂದಿಗೆ ವೇಮನರ ತತ್ವ ಪ್ರಚಾರವಾಗಲಿ ಎಂದರು.
ಕೃಷ್ಣಾಶಾಸ್ತ್ರೀ, ಜಯಶ್ರೀ ಹೊಸಮನಿ ವೇಮನರ ಜೀವನ, ಸಾಹಿತ್ಯ ಸಾಧನೆ ಕುರಿತು ಉಪನ್ಯಾಸ ನೀಡಿದರು. ಮಾಜಿ ಸಚಿವರಾದ ಕೆ.ಎನ್. ಗಡ್ಡಿ, ಬಿ.ಎಸ್. ಹೊರಟ್ಟಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಡಾ. ಪಾಂಡುರಂಗ ಪಾಟೀಲ್ ಮಾತನಾಡಿ, ನಲವಡಿ ಶ್ರೀಕಂಠಶಾಸ್ತ್ರಿಗಳು ಹೇಮರಡ್ಡಿ ಮಲ್ಲಮ್ಮ ನಾಟಕ ರಚಿಸಿದ್ದರೆಂದು ಸ್ಮರಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಟಿ.ವೈ. ಮುದರಡ್ಡಿ, ಡಾ. ವಿ.ಜಿ. ದೊಡ್ಡಗೌಡ್ರ, ತುಳಸಾ ಭೀ. ರಾಯನಗೌಡ್ರ, ಕೃಷ್ಣ ಮಂಟೂರ, ಶಿವಾನಂದ ಹಡಪದ ಅವರನ್ನು ವೇಮನಾನದ ಸ್ವಾಮೀಜಿ ಸನ್ಮಾನಿಸಿದರು. ರಡ್ಡಿ ಸಮಾಜ ಬಾಂಧವರು ಶ್ರೀಗಳಿಗೆ ಕಾಣಿಕೆ ನೀಡಿ ಗೌರವಿಸಿದರು. ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಟಿ.ಟಿ. ಮಂಟೂರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಚ್. ಕೋನರಡ್ಡಿ, ಕೆ.ವಿ. ಕುರಹಟ್ಟಿ, ಡಾ. ಅಮಾತೆಪ್ಪನವರ, ಎಚ್.ವಿ. ಮಾಢಳ್ಳಿ, ಸುಧಾ ಲಿಂಗರಡ್ಡಿ, ವಿ.ಡಿ. ಅಂದಾನಿಗೌಡರ, ಎಸ್.ಸಿ. ಗಾಣಿಗೇರ, ಸಾವಿತ್ರಿ ಕುರ್ಲಗೇರಿ, ಫಕ್ಕೀರಮ್ಮ ಕಲ್ಲಣ್ಣವರ, ಕೃಷ್ಟಪ್ಪ ನಾಗಾವಿ ಇತರರು ಇದ್ದರು.
ಶ್ರೀದೇವಿ ಪ್ರಾರ್ಥನಾ ಗೀತೆ ಹಾಡಿದರು. ಎಂ.ವಿ. ಪಾಟೀಲ್ ಸ್ವಾಗತಿಸಿದರು. ಪ್ರದೀಪ ಲೆಂಕಿನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಜಿ.ಆರ್. ಪಾಟೀಲ್ ನಿರೂಪಿಸಿದರು.
ರಘುನಾಥ ಪಾಟೀಲ್ ವಂದಿಸಿದರು. ಇದಕ್ಕೂ ಮುನ್ನ ವೇಮನಾನಂದ ಸ್ವಾಮೀಜಿಯನ್ನು ಗ್ರಾಮದ ಮಾರುತಿ ದೇವಸ್ಥಾನದಿಂದ ಕುಂಭ ಮೇಳ, ವಿವಿಧ ವಾದ್ಯಗಳ ತಂಡದೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆ ವೇದಿಕೆಗೆ ಕರೆ ತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.