ವಿಶೇಷ ಕೋರ್ಸ್ ಮೂಲಕ ರಾಜ್ಯ ವ್ಯಾಪ್ತಿಗೆ ಕವಿವಿ
ಧಾರವಾಡ: ಪ್ರಸ್ತುತ ಬರೀ ನಾಲ್ಕು ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗಿರುವ ಕರ್ನಾಟಕ ವಿಶ್ವವಿದ್ಯಾಲಯ ಇನ್ನು ಮುಂದೆ ಕೆಲವು ವಿಶೇಷ ಕೋರ್ಸ್ಗಳ ಮೂಲಕ ಇಡೀ ರಾಜ್ಯಕ್ಕೆ ತನ್ನ ಪರದಿ ವಿಸ್ತರಿಸಲು ಮುಂದಾಗಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ವಿವಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ, ಪ್ರಸ್ತುತ ರಾಜ್ಯದಲ್ಲಿ ಶಿಕ್ಷಣ ಪ್ರಸಾರದಲ್ಲಿ ತೊಡಗಿದ ಸಂಸ್ಥೆಗಳಿಗೆ ಕರ್ನಾಟಕ ವಿವಿ ಮಾನ್ಯತೆ ನೀಡಿ ಈ ಮೂಲಕ ಅಲ್ಲಿ ವಿಶೇಷ ಕೋರ್ಸ್ ಆರಂಭಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಬೇರೆ ವಿವಿಗಳಲ್ಲಿ ಇಲ್ಲದಿರುವ ಕೋರ್ಸ್ಗಳನ್ನು ಆರಂಭಿಸಲಾಗುತ್ತಿದ್ದು, ಅರ್ಹ ಸಂಸ್ಥೆಗಳಿಂದ ಅರ್ಜಿ ಕರೆದು ಈ ಮೂಲಕ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಕವಿವಿ ಮಾನ್ಯತೆ ನೀಡಲಾಗುವುದು. ಮಾನ್ಯತೆ ನೀಡುವಾಗ ಆಯಾ ಸಂಸ್ಥೆಯು ಕೋರ್ಸ್ ನಡೆಸುವಷ್ಟು ಮೂಲ ಸೌಕರ್ಯ, ಸಿಬ್ಬಂದಿ ಹೊಂದಿದಿಯೋ ಅಥವಾ ಇಲ್ಲವೋ ಎಂಬುದನ್ನು ಗಮನಿಸಿ ಮಾನ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಯಾವ ಕೋರ್ಸ್ಗಳವು: ಬಿಕಾಂ ಇನ್ ಕಂಪ್ಯೂಟರ್ ಅಪ್ಲಿಂಕೇಶನ್ ಅಂತಹ ಮೂರು ವರ್ಷದ ಪದವಿ ಎಂಟು ಕೋರ್ಸ್ಗಳು, ಎಂಬಿಎ ಇನ್ ಹ್ಯುಮನ್ ರಿಸೋರ್ಸ್ ಮ್ಯಾನೆಜ್ಮೆಂಟ್ ಅಂತಹ ಎರಡು ವರ್ಷದ ಎಂಟು ಸ್ನಾತಕೋತ್ತರ ಕೋರ್ಸ್ಗಳು, ಎರಡು ವರ್ಷ ಅವಧಿಯ ಒಂಭತ್ತು ಸ್ನಾತಕೋತ್ತರ ಕೋರ್ಸ್ಗಳು ಹಾಗೂ ಒಂದು ವರ್ಷದ, ಎರಡು ವರ್ಷದ ವಿವಿಧ ವಿಷಯಗಳ ಡಿಪ್ಲೋಮಾ ಕೋರ್ಸ್ಗಳು, ಆರು ತಿಂಗಳ ಮತ್ತು ಒಂದು ವರ್ಷದ ಅವಧಿಯ ಸರ್ಟಿಫಿಕೆಟ್ ಕೋರ್ಸ್ಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಪ್ರಕಟಣೆ ಸಹ ಹೊರಡಿಸಲಾಗುವುದು ಎಂದು ತಿಳಿಸಿದರು.
ಮಾಹಿತಿ ತಂತ್ರಜ್ಞಾನ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕರ್ನಾಟಕ ವಿವಿಗೆ ಸೋಫಿಸಿಕೇಟೆಡ್ ಎನಾಲಿಟಿಕಲ್ ಇನಸ್ಟ್ರುಮೆಂಟಲ್ ಫೆಸಿಲಿಟಿಗಾಗಿ ರು. 5 ಕೋಟಿ ನೀಡಿದ್ದು, ಈ ಮೂಲಕ ಉನ್ನತ ಮಟ್ಟದ ಸಂಶೋಧನೆ ಸಾಧ್ಯವಿದೆ ಎಂದ ಅವರು, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸ್ಥಾಪನೆಗೆ ಸರ್ಕಾರ ಕೇಳಿದ ವಿವಿ 50 ಎಕರೆ ಜಮೀನು ನೀಡಲಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ಕೂಡಲೇ ಸಂಸ್ಥೆ ಆರಂಭವಾಗಲಿದೆ. ಈ ಸಂಸ್ಥೆಯಿಂದ ವಿವಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಅನುಕೂಲವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಜಿ.ಬಿ. ನಂದನ ಇದ್ದರು.
ಪಿಎಚ್ಡಿಗೆ ಸಹಾಯ ಧನ
ವಿವಿಯ ವಿವಿಧ ವಿಭಾಗಗಳಿಗೆ 231 ಪಿಎಚ್.ಡಿ. ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಇವರಿಗೆ ಸಹಾಯ ಧನ ನೀಡಲು ಯುಜಿಸಿ ರು. 10 ಕೋಟಿ ನೀಡಿದೆ. ಈ ಹಣದಲ್ಲಿ ಮೂರು ವರ್ಷಗಳ ಕಾಲ ಅರ್ಹರಿಗೆ ಸಹಾಯ ಧನ ನೀಡಲಾಗುವುದು ಎಂದು ಕವಿವಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಹೇಳಿದರು.
ಈ ಹಣದಲ್ಲಿ ಎಂ.ಫಿಲ್ ವಿದ್ಯಾರ್ಥಿಗಳು ಸೇರಿದ್ದಾರೆ. 12ನೇ ವಾರ್ಷಿಕ ಯೋಜನೆಯಲ್ಲಿ ಕರ್ನಾಟಕ ವಿವಿಯು ಯುಜಿಸಿಗೆ ರು. 36 ಕೋಟಿ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಎರಡುವರೆ ಕೋಟಿ ರು. ಅನುದಾನ ಬಂದಿದ್ದು, ಅಗತ್ಯಕ್ಕೆ ತಕ್ಕಂತೆ ಈ ಹಣ ಬಳಕೆಯಾಗಲಿದೆ. ಇನ್ನೂ ರು. 14 ಕೋಟಿಯನ್ನು ಯುಜಿಸಿ ನೀಡುವ ಭರವಸೆ ನೀಡಿದ್ದು, ಸಂಶೋಧನೆ ಹಾಗೂ ತರಬೇತಿಗೆ ಹಣ ಉಪಯೋಗಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

