ಧಾರವಾಡ

ಪರೀಕ್ಷಾ ಕೇಂದ್ರ ಸುತ್ತ ಪ್ರತಿಬಂಧಕಾಜ್ಞೆ

Published On :

ಗದಗ: ಪಪೂ ಶಿಕ್ಷಣ ಇಲಾಖೆಯು 2013ರ ಜುಲೈ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಜು.3ರಿಂದ 12ರ ವರೆಗೆ ಬೆಳಗ್ಗೆ 9ರಿಂದ ಸಂಜೆ 5.15ರ ವರೆಗೆ ನಡೆಸಲಿದೆ. ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿದೆ. ಈ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಜು. 3ರಿಂದ 12ರ ವರೆಗೆ ಬೆಳಗ್ಗೆ 8.30ರಿಂದ ಸಂಜೆ 5.30ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಸ್.ಟಿ. ಅಂಜನ್‌ಕುಮಾರ ಅವರು ಆದೇಶ ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಸ್ಪೀಟ್: ನಾಲ್ವರ ಬಂಧನ
ಗದಗ:  ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಪಟ್ಟಣದ ಸಮೀಪದ ಕೊಚಲಾಪುರ ಗ್ರಾಮದ ಬನಶಂಕರಿ ದೇವಸ್ಥಾನದ ಹತ್ತಿರ ಇಸ್ಪೀಟ್ ಆಡುತ್ತಿದ್ದ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿಗಳಾದ ಚನ್ನವೀರಯ್ಯ ಕಳಕಯ್ಯ ಮಾಲಗತ್ತಿಮಠ, ಬಸಯ್ಯ ವೀರಯ್ಯ ಯಲಬುರ್ಗಿ, ಶರಣಪ್ಪಗೌಡ ವೀರನಗೌಡ ಅಯ್ಯನಗೌಡ್ರ, ಖಾಜೇಸಾಬ ಇಮಾಮಸಾಬ್ ಹನುಮಸಾಗರ ಬಂಧಿತ ಆರೋಪಿಗಳು. ಬಂಧಿತರಿಂದ ರು. 1850 ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: 6 ಜನರ ಬಂಧನ
ಗದಗ:  ತಾಲೂಕಿನ ಹಿರೇಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಜೂಜಾಟ ಆಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿಗಳಾದ ಬಡೆಸಾಬ ಬಾಲೇಸಾಬ ನದಾಫ, ಶಿವಾನಂದ ಬಸಪ್ಪ ಗಿಡ್ಡಮಲ್ಲಣ್ಣವರ, ಕಲ್ಲಪ್ಪ ಈಶ್ವರಪ್ಪ ಬಿಳಿಎಲೆ, ರಾಜು ಬಸಪ್ಪ ಬಂಡಿವಾಡ, ಶಿವಪ್ಪ ಗುಳಪ್ಪ ಹಡಗಲಿ, ರೇವಣೆಪ್ಪ ಚಂದ್ರಪ್ಪ ಮಾದರ ಬಂಧಿತ ಆರೋಪಿಗಳು. ಬಂಧಿತರಿಂದ ರು. 1900 ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲು ಜಾರಿ ಬಿದ್ದು ಸಾವು
ಗದಗ:  ದೊಡ್ಡ ನೀರು ಸಂಗ್ರಹದ ತೊಟ್ಟಿಯಲ್ಲಿ (ಡೋಣಿಯಲ್ಲಿ) ನೀರು ತುಂಬುವಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದು, ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಪತ್ರಿವನ ಮಠದ ಆವರಣದಲ್ಲಿ ಸಂಭವಿಸಿದೆ. ಮೃತನನ್ನು ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದ ಹುಚ್ಚಪ್ಪ ಶಿದ್ದಪ್ಪ ಬಿಳಿಯಲಿ (12) ಎಂದು ಗುರುತಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಾಖಂಡ ಸಂತ್ರಸ್ತರಿಗೆ ನಿಧಿ ಸಂಗ್ರಹ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 1
ಉತ್ತರಾಖಂಡದಲ್ಲಿ ಸುರಿದ ಮಳೆಯಿಂದ ಉಂಟಾದ ನೆರೆ ಹಾವಳಿಯಲ್ಲಿ ಸಿಲುಕಿ, ಮನೆ ಮಠ, ಬಂಧು ಬಳಗ ಕಳೆದುಕೊಂಡು ನಿರ್ಗತಿಕರಾದವರಿಗೆ ಪಟ್ಟಣದ ಜನತೆ ಉದಾರವಾಗಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.
ಸೋಮವಾರ ಪಟ್ಟಣದ ಪಂಪ ವೃತ್ತದಿಂದ ಪ್ರಾರಂಭವಾದ ನಿಧಿ ಸಂಗ್ರಹ ಕಾರ್ಯಕ್ಕೆ ಮುಕ್ತಿಮಂದಿರದ ಶ್ರೀಗಳು ನೆರವು ನೀಡುವ ಮೂಲಕ ಚಾಲನೆ ನೀಡಿದರು. ನಿಧಿ ಸಂಗ್ರಹ ಕಾರ್ಯವನ್ನು ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶ್ರೀಗಳ ನೇತೃತ್ವದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ ಅವರ ಸಹಕಾರದಲ್ಲಿ, ಹಲವು ಸಂಘ, ಸಂಸ್ಥೆ, ಶಾಲಾ ಕಾಲೇಜುಗಳು, ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರುಗಳೊಂದಿಗೆ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರು. 42,721 ಪರಿಹಾರ ನಿಧಿಗೆ ಉಪತಹಸೀಲ್ದಾರ್ ಮೋಹನ ಕಟ್ಟಿಮನಿ ಅವರ ಮೂಲಕ ಜಿಲ್ಲಾಧಿಕಾರಿಗೆ ಕಳುಹಿಸಿ ಕೊಡಲಾಯಿತು.
ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ತಾಪಂ ಸದಸ್ಯ ಚೆನ್ನಪ್ಪ ಜಗಲಿ, ಉದ್ದಿಮೆದಾರ ಬಸವರಾಜ ನೆಲವಿಗಿ, ಟಿಎಪಿಎಂಎಸ್ ಅಧ್ಯಕ್ಷ ಗದಿಗೆಪ್ಪ ಯತ್ತಿನಹಳ್ಳಿ, ಸೋಮಣ್ಣ ಮುಳಗುಂದ, ಶಿವಣ್ಣ ನೆಲವಿಗಿ, ಮಹೇಶ ಹೊಗೆಸೊಪ್ಪಿನ, ರಂಗನಾಥ ಬದಿ, ಬಸವರಾಜ ಮುಳಗುಂದ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜಕ್ಕಣ್ಣವರ, ಎಸ್.ಎಸ್. ಬಾಳಿಹಳ್ಳಿಮಠ, ಚೆಂಬಣ್ಣ ಬಾಳಿಕಾಯಿ, ಶಂಕ್ರಪ್ಪ ಮ್ಯಾಗೇರಿ, ಶಂಕ್ರಪ್ಪ ಗೊರವರ, ವಿ.ಜಿ.ಪಡಗೇರಿ, ಜಯಕ್ಕ ಕಳ್ಳಿ, ಡಾ. ವೈ.ಎಫ್. ಹಂಜಿ, ಸಿದ್ಧನಗೌಡ ಬೊಳ್ಳೊಳ್ಳಿ, ಈರಣ್ಣ ಅಕ್ಕೂರ, ಸತೀಶ ಮೆಕ್ಕಿ ಹಾಗೂ ಪುರಸಭೆಯ ಎಲ್ಲ ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.