ಸರ್ಕಾರಿ ಶಾಲೆಗಳಲ್ಲಿ ನಗೆ ಕಾರ್ಯಕ್ರಮ ಏರ್ಪಡಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 5
ಬೆಳಗ್ಗೆಯಿಂದ ಸಂಜೆವರೆಗೂ ಓದಿನಲ್ಲಿಯೇ ಕಾಲ ಕಳೆಯುವ ಮಕ್ಕಳಿಗೆ ಇಂದು ನಗುವಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಗಾಗ ನಗೆ ಕೂಟಗಳನ್ನು ಏರ್ಪಡಿಸಬೇಕಿದೆ ಎಂದು ಶಾಸಕ ವಿನಯ ಕುಲಕರ್ಣಿ ಅಭಿಪ್ರಾಯಿಸಿದರು.
ಇಲ್ಲಿನ ಕಲಾಸಂಗಮ ಸಂಸ್ಥೆಯು ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರ ನೀ ನಗಬೇಕಪ್ಪ ಭಾಗ-3 ಸಿಡಿ ಬಿಡುಗಡೆ ಮಾಡಿದ ಅವರು, ಕಲಾವಿದ ಸತ್ತಿಗೇರಿ ಪ್ರಸ್ತುತ ಉಪ್ಪಿನ ಬೆಟಗೇರಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದು, ಈ ಮುಂಚೆ ತಮ್ಮ ವಿಧಾನಸಭಾ ಕ್ಷೇತ್ರದ ಬೆಳ್ಳಿಗಟ್ಟಿ ಶಾಲೆಯಲ್ಲಿದ್ದರು. ಆಗ ಮಕ್ಕಳಿಗೆ ನಾಟಕ, ಹಾಡು ಕಲಿಸಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ತರುತ್ತಿದ್ದರು ಎಂದು ಸ್ಮರಿಸಿದರು. ಸತ್ತಿಗೇರಿ ಅವರು ನಗುವಿನೊಂದಿಗೆ ಹೇಳುವ ಪಾಠ ಮಕ್ಕಳಿಗೆ ಇಷ್ಟವಾಗುತ್ತಿತ್ತು. ಈ ಕಾರಣದಿಂದ ಮಕ್ಕಳ ಕಲಿಕೆಯಲ್ಲಿ ನಗುವಿನ ಪಾತ್ರ ಪ್ರಮುಖವಾಗಿದ್ದು ಪಾಠದೊಂದಿಗೆ ನಗು ಇರಬೇಕೆಂದರು.
ವಾಹಿನಿಗಳಲ್ಲಿ ಬೇಡ: ಬಿಡುಗಡೆಯಾದ ಸಿಡಿಯನ್ನು ಸಿದ್ಧಪಡಿಸಿದ ಹೊನ್ನಾವರದ ದೀಪಕ ಪ್ರಭು ಮಾತನಾಡಿ, ಗ್ರಾಮೀಣ ಹಾಗೂ ಹೊಸ ಕಲಾವಿದರನ್ನು ಸಿಡಿಗಳ ಮೂಲಕ ಜನರಿಗೆ ಪರಿಚಯಿಸುವುದೇ ನಮ್ಮ ಕೆಲಸ. ಆದರೆ, ಇತ್ತೀಚೆಗೆ ಹಾಸ್ಯ ಕಲಾವಿದರ ಸಮಾರಂಭಗಳನ್ನು ವಿವಿಧ ಸುದ್ದಿವಾಹಿನಿಗಳು ಚಿತ್ರೀಕರಿಸಿ ಜನರಿಗೆ ಉಚಿತವಾಗಿ ತೋರಿಸುತ್ತಿರುವುದರಿಂದ ಕಂಪನಿಗಳಿಗೆ ಹಾಗೂ ಕಲಾವಿದರಿಗೆ ತುಂಬ ಹಾನಿಯಾಗುತ್ತಿದೆ. ಅಲ್ಲದೇ, ಹಾಸ್ಯ ಕಲಾವಿದರನ್ನು ಸುದ್ದಿವಾಹಿನಿಗಳು ತಮಗೆ ಬೇಕಾದಂತೆ ತೋರ್ಪಡಿಸುತ್ತಿದ್ದು, ಕಲಾವಿದರಿಗೆ ತುಚ್ಚವಾಗಿ ನೋಡಲಾಗುತ್ತಿದೆ. ಈ ಕುರಿತು ಶಾಸಕರು ಗಮನ ಹರಿಸಿ ಸುದ್ದಿ ವಾಹಿನಿಗಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಕಾನೂನು ಮಾಡಲು ಮನವಿ ಮಾಡಿದರು. ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸಿ, ಸಮಾಜ, ರಾಜ್ಯ, ದೇಶ ಒಂದೆಡೆ ಸೇರುವಂತೆ ಮಾಡುವ ಶಕ್ತಿ ಹಾಸ್ಯ ಸಾಹಿತ್ಯಕ್ಕಿದೆ. ಒಂದೊಂದಾದ ಬಿಡಿ ಹೂಗಳನ್ನು ಮಾಲೆಗಳ ಮೂಲಕ ಹೇಗೆ ಒಂದು ಮಾಡಬಹುದೋ ಹಾಗೆ ಹಾಸ್ಯವು ಜನರನ್ನು ಒಂದೆಡೆ ಸೇರಿಸುತ್ತದೆ. ಇಂತಹ ಹಾಸ್ಯ ಕಲಾವಿದರಿಗೆ ಸಮಾಜದಲ್ಲಿ ಗೌರವ ನೀಡಬೇಕಾದ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದರಾದ ಬಿ. ಪ್ರಾಣೇಶ, ಇಂದುಮತಿ ಸಾಲಿಮಠ ಹಾಗೂ ಮಹಾದೇವ ಸತ್ತಿಗೇರಿ ಅವರನ್ನು ವಿಶ್ವ ಕನ್ನಡ ಬಳಗ ಹಾಗೂ ಕಲಾಮಂಡಳದ ಪರವಾಗಿ ಸನ್ಮಾನಿಸಲಾಯಿತು. ನಂತರ ಅವರಿಂದ ಹಾಸ್ಯ ಕಾರ್ಯಕ್ರಮ ನೀಡಲಾಯಿತು. ಹೊನ್ನಾವರದ 12 ವರ್ಷದ ಬಾಲಕ ಹಾಗೂ ಬಿ. ಪ್ರಾಣೇಶ ಅವರ 16ನೇ ಶಿಷ್ಯನಾದ ರವಿತೇಜ ಪ್ರಭು ಆರಂಭದಲ್ಲಿ ಹಾಸ್ಯ ಮಾತುಗಳನ್ನಾಡಿದರು. ಲೇಖಕ ಲಕ್ಷ್ಮೀಕಾಂತ ಇಟ್ನಾಳ ಮಾತನಾಡಿದರು. ಉಪ್ಪಿನ ಬೆಟಗೇರಿ ಮೂರು ಸಾವಿರ ವಿರಕ್ತಮಠದ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

