ಧಾರವಾಡ

ಶಿಥಿಲಾವಸ್ಥೆ ತಲುಪಿದ ಐತಿಹಾಸಿಕ ಕೋಟೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 10
ಬರೋಬ್ಬರಿ 610 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಕೋಟೆ (ಕಿಲ್ಲಾ) ಸಂರಕ್ಷಣೆ ಇಲ್ಲದೇ ಪಾಳು ಬೀಳುವ ಸ್ಥಿತಿಯಲ್ಲಿದೆ.
ಈ ಕೋಟೆಗೆ ಸಂಬಂಧಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೋಟೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಷ್ಟೊಂದು ಕಾಳಜಿ ವಹಿಸದ ಕಾರಣ ಕೆಲ ವರ್ಷಗಳಲ್ಲಿ ಈ ಸ್ಮಾರಕ ಇತಿಹಾಸದ ಪುಟ ಸೇರಿದರೂ ಆಶ್ಚರ್ಯವಿಲ್ಲ. ಜತೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಕೋಟೆ ರಕ್ಷಣೆಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಜತೆ ಕೈ ಜೋಡಿಸಿ ಅದರ ಅಭಿವೃದ್ಧಿ ಮಾಡಲು ಚಿಂತಿಸದಿರುವುದು ಬೇಸರದ ಸಂಗತಿ.
ಈ ಕೋಟೆಯು 800 ಚದರ ಮೀಟರ್ ವಿಸ್ತೀರ್ಣವಿದ್ದು, ದಿವ್ಯ ನಿರ್ಲಕ್ಷ್ಯದಿಂದ ಸ್ಥಳೀಯರು ಕೋಟೆಯ ಜಾಗವನ್ನು ಅತಿಕ್ರಮಣ ಮಾಡಿ ಸಣ್ಣ ಪುಟ್ಟ ಗುಡಿಸಲು, ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಮೀಪವೇ ಆಸ್ಪತ್ರೆ, ಶಾಲೆಗಳು ತಲೆ ಎತ್ತಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು 'ಇದೊಂದು ಐತಿಹಾಸಿಕ ತಾಣ. ಇದನ್ನು ಸಂರಕ್ಷಿಸಲಾಗುತ್ತಿದೆ. ಈ ಜಾಗವನ್ನು ಯಾರೂ ಅತಿಕ್ರಮಣ ಮಾಡಕೂಡದು' ಎಂದು ಎಚ್ಚರಿಕೆಯ ನಾಮಫಲಕ ಹಾಕಿದ್ದರೂ ಪರವಾನಗಿ ಪಡೆದು ಅಥವಾ ಪಡೆಯದೇ ಹೊಸ ಕಟ್ಟಡಗಳ ನಿರ್ಮಾಣವೇನೂ ನಿಂತಿಲ್ಲ.
ಇತಿಹಾಸ: ಶ್ರೀಸಾಮಾನ್ಯನಿಗೆ ಈ ಕೋಟೆ ಬರೀ ಎರಡು ಬಾಗಿಲು ಹೊಂದಿದೆ ಎನ್ನುವ ಮಾಹಿತಿ ಬಿಟ್ಟರೆ ಐತಿಹಾಸದ ಮಹತ್ವ ಯಾರಿಗೂ ಗೊತ್ತಿಲ್ಲ. ಸಂಶೋಧನೆಗಳು ಆಗಿಲ್ಲ. ಗೆಜೆಟಿಯರ್‌ನಲ್ಲಿ ಇರುವ ಮಾಹಿತಿ ಪ್ರಕಾರ 1403ರಲ್ಲಿ ನಿರ್ಮಾಣವಾದ ಈ ಕೋಟೆಯ ಮಹಾದ್ವಾರ ಪೂರ್ವಕ್ಕಿದೆ. 1573ರಲ್ಲಿ ಬಿಜಾಪುರದ ಆದಿಲ್ ಶಾಹಿ ಮನೆತನ ಕೋಟೆ ವಶಪಡಿಸಿಕೊಂಡಾಗ ಇದಕ್ಕೆ 'ಮಣಕಿಲ್ಲಾ' ಎಂದು ಕರೆಯುತ್ತಿದ್ದರು. ಅನಂತರ ಇದಕ್ಕೆ ನಜರತಾಬಾದ್ ಎಂಬ ಹೆಸರೂ ಬಂದಿತ್ತು.
ಅಬ್ದುಲ್ ಕರೀಂಖಾನ್ ಇದರ ಆಡಳಿತಗಾರನಾಗಿದ್ದ. ಮುಂದೆ ಶಿವಾಜಿಯು ಈ ಕೋಟೆಯನ್ನು ಗೆದ್ದನು. ಮುಂದೆ 1685ರಲ್ಲಿ ಔರಂಗಜೇಬನ ಮಗ ಮುಅಜಂ ಗೆದ್ದು ಮಿರ್ಜಾ ಸೈಫುಲ್ಲಾಖಾನನ್ನು ಕಿಲೇದಾರನಾಗಿ ಮಾಡಿದ ಆಗಿನಿಂದ ಇದಕ್ಕೆ ಕಿಲೇ ಅಥವಾ ಕಿಲ್ಲೆ ಎಂಬ ಹೆಸರು ಬಂತು.
1660ರಲ್ಲಿ ಬಿಜಾಪುರ ಆದಿಲ್‌ಶಾಹಿ ಈ ಕೋಟೆಯ ದ್ವಾರಗಳನ್ನು ನವೀಕರಿಸಿದ್ದರು ಎನ್ನುವುದನ್ನು ಬಿಟ್ಟರೆ ಇಲ್ಲಿಯವರೆಗೂ ಈ ಕೋಟೆಯ ಅಭಿವೃದ್ಧಿ ಕಾರ್ಯವಾಗಿಲ್ಲ ಎಂಬುದು ಸ್ಪಷ್ಟ. ಮಹಾದ್ವಾರವು 12.5 ಅಡಿ ಎತ್ತರ ಹಾಗೂ 11.5 ಅಡಿ ಅಗಲವಿದೆ. ಇದರ ಸುತ್ತಲೂ ಗ್ರಾನೈಟ್ ಹಾಗೂ ಕಬ್ಬಿಣದ ಸಲಾಕೆಗಳಿಂದ ನಿರ್ಮಾಣ ಮಾಡಿದ ಗೋಡೆಗಳಿವೆ. ದಪ್ಪ ಕಟ್ಟಿಗೆಯ ಬಾಗಿಲುಗಳಿದ್ದು, ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಮುಚ್ಚುವುದು ಅಥವಾ ತೆರೆಯಲು ಆಗುತ್ತಿಲ್ಲ. ಇಲ್ಲಿ ಭಾರಿ ವಾಹನಗಳು ಸಂಚರಿಸಬಾರದೆಂದು ಹಾಕಿದ್ದ 'ಐರನ್ ಗ್ರಿಲ್‌'ಗಳನ್ನು ಸ್ಥಳೀಯರೇ ಕೊರೆದಿದ್ದರಿಂದ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿವೆ. ಮಳೆಗಾಲದಲ್ಲಂತೂ ಕೋಟೆಯ ಒಳಗಿನಿಂದ ಮಣ್ಣು ಕುಸಿಯುತ್ತದೆ. ಕೋಟೆ ಬಗ್ಗೆ ಇದೇ ರೀತಿ ತೀರಾ ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ ಕುಸಿದು ಬೀಳುವ ಸಾಧ್ಯತೆ ಇದೆ.
ಎಳ್ಳಷ್ಟು ಕಾಳಜಿ ಇಲ್ಲ: ಕೋಟೆ ರಕ್ಷಣೆ ಮಾಡಬೇಕಿದ್ದ ಪುರಾತತ್ವ ಇಲಾಖೆಯ ಅಧಿಕಾರಿಗಳು ಕೋಟೆಯ ಬಗ್ಗೆ ಎಳ್ಳಷ್ಟು ಕಾಳಜಿ ತೋರಿಸುತ್ತಿಲ್ಲ. ಕೋಟೆಯನ್ನು ಇನ್ನಷ್ಟು ಬಲಪಡಿಸಿ ಅದನ್ನು ರಕ್ಷಿಸುವುದಲ್ಲದೇ, ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕು. ಅದಕ್ಕೆ ಬೇಕಾದ ಸಹಕಾರವನ್ನು ಪಾಲಿಕೆಯಿಂದ ಕೊಡುತ್ತೇವೆ. ಕೋಟೆಯ ಜಾಗ ಒತ್ತುವರಿಯಾಗಿದೆ ಎಂಬ ನೆಪದಿಂದ ಯಾವ ಕೆಲಸಗಳನ್ನು ಮಾಡುತ್ತಿಲ್ಲ. ಕೋಟೆಯ 100 ಮೀಟರ್ ಸುತ್ತಮುತ್ತಲು ಮನೆ, ಆಸ್ಪತ್ರೆ ಇನ್ನಿತರೆ ಕಟ್ಟಡಗಳು ಮೇಲೇಳಲು ಈ ಇಲಾಖೆ ಅಧಿಕಾರಿಗಳೇ ಪರವಾನಗಿ ಕೊಟ್ಟಿದ್ದಾರೆ. ಈಗ ಒತ್ತುವರಿಯಾಗಿದೆ ಎಂದು ಹೇಳುತ್ತಾರೆ. ಆದ್ದರಿಂದ ಕೋಟೆ ರಕ್ಷಣೆ ಕುರಿತಂತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸುತ್ತೇನೆಂದು ಪಾಲಿಕೆಯ 12ನೇ ವಾರ್ಡ್‌ನ ಸದಸ್ಯ ರಾಜು ಅಂಬೋರೆ ಹೇಳುತ್ತಾರೆ.
-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.