ಧಾರವಾಡ

ತ್ಯಾಜ್ಯ ಸಮಸ್ಯೆ ನಿವಾರಣೆಗೆ ವೈಜ್ಞಾನಿಕ ವಿಧಾನ ಅಗತ್ಯ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 13
ನಗರ ಸಂಸ್ಕೃತಿ ಉಳಿಯಬೇಕಾದರೆ ನನ್ನ ಮನೆಯಿಂದ, ನಗರದಿಂದ ಹೊರಹೋಗುವ ತ್ಯಾಜ್ಯ ಇಲ್ಲವಾಗುವಂತಹ ವೈಜ್ಞಾನಿಕ ವಿಧಾನದ ಅಗತ್ಯತೆ ಇದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ ಹೇಳಿದರು.
ಶನಿವಾರ ಕೌಸಾಳಿ ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮತ್ತು ಐಬಿಎಂಆರ್ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಗರದಿಂದ ಹೊರಹೊಗುವ ತ್ಯಾಜ್ಯದ ಇತ್ಯರ್ಥವಾಗಬೇಕು ವಿನಃ ಅದು ವಿಲೇವಾರಿ ಆಗಬಾರದು. ವಿಲೇವಾರಿಯಿಂದ ಮತ್ತೆ ಸಮಸ್ಯೆಗಳು ಉದ್ಭವಿಸುವುದು ಸಹಜ ಎಂದು ಹೇಳಿದರು.
ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುತ್ತ ಸಾಗಿರುವ ನಗರ ಜೀವನ ಅಷ್ಟೇ ಪ್ರಮಾಣದಲ್ಲಿ ಸಮಸ್ಯೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಪ್ರತಿದಿನ ಮಲಪ್ರಭಾ ನದಿಯಿಂದ 100 ಎಂಜಿಡಿ ನೀರನ್ನು ಪೂರೈಸಲಾಗುತ್ತಿದೆ. ಅದರಲ್ಲಿ ಶೇ. 90ಕ್ಕೂ ಹೆಚ್ಚು ನೀರು ತ್ಯಾಜ್ಯ ರೂಪದಲ್ಲಿ ಮತ್ತೆ ಕಾಳಿ ನದಿ ಸೇರುತ್ತಿದೆ. ಭವಿಷ್ಯದ ದಿನಗಳಲ್ಲಿ ನಗರ ಜೀವನದ ಅತ್ಯಂತ ದೊಡ್ಡ ಸಮಸ್ಯೆಯಾಗಿ ಕಾಡಲಿರುವ ತ್ಯಾಜ್ಯ ನೀರು ವಿಲೇವಾರಿ ಮತ್ತು ಸಂಸ್ಕರಣಕ್ಕೆ ವೈಜ್ಞಾನಿಕ ಸಂಶೋಧನೆ ಅಗತ್ಯ.
ಒಂದು ವೇಳೆ ತ್ಯಾಜ್ಯ ನೀರನ್ನು ರಾಸಾಯನಿಕ ವಿಧಾನದಲ್ಲಿಯೋ ಅಥವಾ ನೈಸರ್ಗಿಕ ವಿಧಾನದಲ್ಲಿ ಸಂಸ್ಕರಿಸಿದರೂ ಕೊನೆಗೆ ಒಂದಷ್ಟು ಪ್ರಮಾಣದಲ್ಲಿ ತ್ಯಾಜ್ಯ ಉಳಿದೇ ಉಳಿಯುತ್ತದೆ. ಇದೇ ರೀತಿ ಪ್ಲಾಸ್ಟಿಕ್ ಸಮಸ್ಯೆ, ಬಿಸಾಡಿದ ಪ್ಲಾಸ್ಟಿಕ್ ಮತ್ತೆ ಮೂರನೇ ದರ್ಜೆ ಉತ್ಪನ್ನವಾಗಿ ಮಾರುಕಟ್ಟೆ ಪ್ರವೇಶಿಸಿ ಬಳಸಲ್ಪಡುತ್ತದೆ ಎಂದು ಹೇಳಿದರು.
ಇಂದು ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಕೆ, ತ್ಯಾಜ್ಯದಿಂದ ಎರೆಹುಳು ಗೊಬ್ಬರ ಉತ್ಪಾದಿಸಲಾಗುತ್ತಿದೆ. ಆದರೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಬಗ್ಗೆ ಎಂದಾದರೂ ವಿಚಾರ ಮಾಡಿದ್ದೇವೆಯೇ ? ನಗರದ ಬೀದಿಯೊಂದನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಸುರಕ್ಷಾ ಸಾಧನೆ ನೀಡುವ ಕುರಿತು ಚಿಂತನೆ ಮಾಡುತ್ತೇವೆ. ಆದರೆ ನಿತ್ಯ ಸಾವಿರಾರು ಟನ್ ಲೆಕ್ಕದಲ್ಲಿ ಬಂದು ಬೀಳುವ ತ್ಯಾಜ್ಯ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕನ ಆರೋಗ್ಯದ ಬಗ್ಗೆ ವಿಚಾರ ಮಾಡಿದ್ದೇವೆಯೇ ? ಮನೆ ಮತ್ತು ನಗರದಿಂದ ಹೊರ ಹೋಗುವ ತ್ಯಾಜ್ಯ ನೈಸರ್ಗಿಕವಾಗಿ ಇಲ್ಲವಾಗುವಂತಹ ವಿಧಾನವೇ ನಗರದ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವಿಧಾನ ಎನ್ನುವುದು ನನ್ನ ಅನಿಸಿಕೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.