ಕೃಷಿ ಉತ್ಪಾದಕನ ಕೈಬಿಟ್ಟ ಸರ್ಕಾರಗಳು: ಕೋಡಿಹಳ್ಳಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 18
ಸ್ವಾತಂತ್ರ್ಯಾನಂತರ ಬಂದ ರಾಜ್ಯದ ಎಲ್ಲ ಸರ್ಕಾರಗಳು ಕೃಷಿ ಉತ್ಪಾದನೆಗೆ ಮಾತ್ರ ಉತ್ತೇಜನ ನೀಡುತ್ತಿದ್ದು, ಉತ್ಪಾದಕನನ್ನು ಪೂರ್ತಿಯಾಗಿ ಕೈ ಬಿಟ್ಟಿವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ವಿಷಾದ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಬೆಲೆ ನಿಗದಿ, ಬೆಳೆ ವಿಮೆ, ಮಾರುಕಟ್ಟೆ ಸುಧಾರಣೆ ಹಾಗೂ ಗ್ರಾಮೀಣಾಭಿವೃದ್ಧಿ ವಿಚಾರ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಸೇರಿಸಲು ಒತ್ತಾಯಿಸಲಾಗಿತ್ತು. ಆದರೆ ಬಜೆಟ್ನಲ್ಲಿ ಏನೂ ಸೇರ್ಪಡೆಯಾಗಿಲ್ಲ. ಬದಲಾಗಿ ರೈತರ ಸಂಕಟ ಶಮನ ಮಾಡಲು ಬಡ್ಡಿ ರಹಿತ ಸಾಲ, ರು. 1ಕ್ಕೆ ಒಂದು ಕೆಜಿ ಅಕ್ಕಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂದು ಟೀಕಿಸಿದರು.
ಸಂಪೂರ್ಣ ಕಡೆಗಣನೆ: ಕೃಷಿಗೆ ಪ್ರತ್ಯೇಕ ಬಜೆಟ್ ನೀಡಬೇಕೆಂದು ಆಗ್ರಹಿಸಲಾಗಿದ್ದು, ಕೃಷಿ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. 64 ವರ್ಷಗಳಿಂದ ಗ್ರಾಮೀಣಾಭಿವೃದ್ಧಿಯನ್ನು ಕಡೆಗಣಿಸಲಾಗಿದೆ. 1980ರಲ್ಲಿ ಗ್ರಾಮೀಣಾಭಿವೃದ್ಧಿಗೆ ಶೇ. 1ರಷ್ಟು ಅನುದಾನ ಇರಲಿಲ್ಲ. ಇಲ್ಲಿಯವರೆಗೆ ಶೇ. 8ರಷ್ಟು ಅನುದಾನ ನೀಡಲಾಗುತ್ತಿದೆ. ಶೇ. 65ರಷ್ಟು ಗ್ರಾಮೀಣ ಪ್ರದೇಶದಲ್ಲಿ ಇದ್ದರೂ ಅನುದಾನ ಮಾತ್ರ ಶೇ. 8ರಷ್ಟು ನೀಡಲಾಗುತ್ತಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಆಡಳಿತ ನಡೆಸುತ್ತಿದ್ದೇವೆಂದು ಹೇಳಿಕೊಳ್ಳುತ್ತಾರೆ. ಇದೆಂತಹ ಸಮಬಾಳು ಎಂದು ಪ್ರಶ್ನಿಸಿದ ಕೋಡಿಹಳ್ಳಿ, ಗ್ರಾಮೀಣಾಭಿವೃದ್ಧಿಗೆ ಶೇ. 65ರಷ್ಟು ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಸಾಲ ಮಾಡಿಯಾದರೂ ಬೆಂಗಳೂರಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತಾರೆ. ಶೇ. 65ರಷ್ಟು ಆಡಳಿತ ವೆಚ್ಚ ತೋರಿಸಲಾಗುತ್ತಿದೆ. ಶೇ. 50ಕ್ಕಿಂತ ಹೆಚ್ಚು ಆಡಳಿತ ವೆಚ್ಚವಾದರೆ ಆ ರಾಜ್ಯ ಸುಭದ್ರವಾಗಿಲ್ಲ ಎಂದರ್ಥ. ತಾನು ಹೇಳಿಕೊಂಡ ಯೋಜನೆ ಹಾಗೂ ಗುರಿ ಮುಟ್ಟಲು ಸಾಧ್ಯವಿಲ್ಲ. ಸರ್ಕಾರ ದೊಡ್ಡ ಸಮುದಾಯ ಬಿಟ್ಟು ಲಾಭ ನೀಡುವ ಸಣ್ಣ ಸಮುದಾಯದ ರಕ್ಷಣೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಕಿಡಿಕಾರಿದರು.
ಆವರ್ತ ನಿಧಿ ಹೆಚ್ಚಿಸಿ: ರೈತರು ಬೆಳೆದ ಬೆಲೆ ಆಗಾಗ ಏರಿಳಿತವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ರು. 1 ಸಾವಿರ ಕೋಟಿ ಆವರ್ತ ನಿಧಿ ತೆಗೆದಿಟ್ಟಿದೆ. ಇದು ಕನಿಷ್ಠ ರು. 2 ಸಾವಿರ ಕೋಟಿ ಇರಬೇಕಿತ್ತು. ಬೆಲೆ ಇಳಿಕೆ ತಕ್ಷಣವೇ ರಾಜ್ಯದ ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿ ಆವರ್ತ ನಿಧಿ ಕಚೇರಿಗಳು ರೈತರ ನೆರವಿಗೆ ಬಂದು ಬೆಲೆ ನಿಯಂತ್ರಣ ಮಾಡಬೇಕೆಂದು ಕೋಡಿಹಳ್ಳಿ ಒತ್ತಾಯಿಸಿದರು. ಬೆಲೆ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಎಲ್ಲ ಸರ್ಕಾರಗಳಿಗೆ ಒತ್ತಾಯಿಸಿ ಬೇಸತ್ತಿದ್ದೇವೆ. ಈ ನಿಟ್ಟಿನಲ್ಲಿ ಜು. 21ರಂದು ನರಗುಂದದಲ್ಲಿ ರೈತ ಹುತಾತ್ಮ ದಿನದಂದು ಸಮಾವೇಶದ ಮೂಲಕ ರೈತರ ಸಮಸ್ಯೆಗಳ ಪರಿಹಾರಕ್ಕೆ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಬೆಳಗಾವಿ ಬಸವರಾಜ ಮಳಲಿ, ಡಾ. ಎಸ್.ಬಿ. ಚೌಕಿಮಠ, ನರಗುಂದದ ಬಸವರಾಜ ಸಾಬಳೆ, ಧಾರವಾಡದ ನಿಂಗಪ್ಪ ದಿವಟಗಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

