ಧಾರವಾಡ

ಕಿಮ್ಸ್ ನಿರ್ದೇಶಕರಾಗಿ ಡಾ. ಹಂಗರಗಾ ನೇಮಕ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 25
ಹಠಾತ್ ಬೆಳವಣಿಗೆಯೊಂದರಲ್ಲಿ ಕಿಮ್ಸ್ ನಿರ್ದೇಶಕಿ ಸ್ಥಾನದಿಂದ ಡಾ. ವಸಂತಾ ಕಾಮತ್ ಅವರನ್ನು ಬಿಡುಗಡೆಗೊಳಿಸಿರುವ ಸರ್ಕಾರ ಈ ಸ್ಥಾನಕ್ಕೆ ಪ್ರಭಾರಿ ನಿರ್ದೇಶಕರನ್ನಾಗಿ ಡಾ. ಯು. ಎಸ್. ಹಂಗರಗಾ ಅವರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ.
ವೈದ್ಯಕೀಯ ಕಾಲೇಜುಗಳಿಗೆ ಏಕರೂಪದ ನಿಯಮಾವಳಿ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ವಸಂತಾ ಕಾಮತ್ ಅವರನ್ನು ನಿರ್ದೇಶಕಿ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಹಂಗರಗಾ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಬುಧವಾರ ರಾತ್ರಿ ಕಿಮ್ಸ್ ಸಿಇಒ ಕಚೇರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಫ್ಯಾಕ್ಸ್ ಮಾಹಿತಿ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಗರಗಾ ಗುರುವಾರ ಕಿಮ್ಸ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಹಂಗರಗಾ, ಸರ್ಕಾರದ ನಿರ್ದೇಶನದ ಮೇರೆಗೆ ಪ್ರಭಾರಿ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಸರ್ಕಾರ ಸದ್ಯ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಕಿಮ್ಸ್‌ಗೆ ಬರುವ ಬಡ ರೋಗಿಗಳಿಗೆ ಸೂಕ್ತ ಉಪಚಾರ ಸಿಗುವಂತೆ ಮಾಡಲು ಮೊಟ್ಟ ಮೊದಲು ಕ್ರಮ ಕೈಗೊಳ್ಳುತ್ತೇನೆ. ಸ್ವಚ್ಛತೆ ಹಾಗೂ ನೀರಿನ ಸಮಸ್ಯೆ ಕಿಮ್ಸ್‌ನಲ್ಲಿ ಬಹುವಾಗಿ ಕಾಡುತ್ತಿದ್ದು ಇದನ್ನು ಸರಿಪಡಿಸಲಾಗುವುದು. ಚಿಕಿತ್ಸೆ ಫಲಿಸದೇ ಅನೇಕ ಸಂದರ್ಭದಲ್ಲಿ ರೋಗಿಯ ಪ್ರಾಣ ಹೋಗುತ್ತದೆ. ಇದಕ್ಕೆ ವೈದ್ಯರನ್ನು ಗುರಿಯಾಗಿಸಲಾಗುತ್ತದೆ, ಇದು ಸರಿಯಲ್ಲ. ರೋಗಿಯ ಸಂಬಂಧಿಕರು ಇಂತಹ ವಿಷಯದಲ್ಲಿ ಸಂಯಮ ಕಾಯ್ದುಕೊಳ್ಳಬೇಕು. ಇಲ್ಲದೇ ಹೋದ ಪಕ್ಷದಲ್ಲಿ ಕಿಮ್ಸ್‌ಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ನಿರ್ದಾಕ್ಷಿಣ್ಯ ಕ್ರಮ: ಸಮಯಕ್ಕೆ ಸರಿಯಾಗಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಬೇಕು ಹಾಗೂ ಸಮಯ ಪೂರ್ಣಗೊಂಡಾಗಲೇ ಕಿಮ್ಸ್‌ನಿಂದ ಖಾಸಗಿ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು. ಇದನ್ನು ಬಿಟ್ಟು ಸೇವಾ ಅವಧಿಯಲ್ಲಿ ಖಾಸಗಿ ವೃತ್ತಿಯಲ್ಲಿ ತೊಡಗಿಕೊಳ್ಳುವುದನ್ನು ಸಹಿಸಿಕೊಳ್ಳಲಾಗದು. ಈ ಬಗ್ಗೆ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಡಾ. ಹಂಗರಗಾ, ಇರುವ ಅಧಿಕಾರಾವಧಿಯಲ್ಲಿ ಕಿಮ್ಸ್‌ನಲ್ಲಿ ಉತ್ತಮ ಆಡಳಿತ ನಡೆಸುವುದಾಗಿ ಹೇಳಿದರು.

0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.