ಧಾರವಾಡ

ಕಾಶ್ಮೀರಕ್ಕೆ ಹೋಗಿ ನಾಲ್ಕೇ ದಿನದಲ್ಲಿ ನಮ್ಮನಗಲಿದ

Published On :

ಹುಬ್ಬಳ್ಳಿ: ಬೆಳಗಾವಿ ಮರಾಠಾ ಲೈಟ್ ಇನ್ಫೆಂಟ್ರಿಯಲ್ಲಿ 13 ತಿಂಗಳ ತರಬೇತಿ ಮುಗಿಸಿ 8 ದಿನ ಮನೆಯಲ್ಲಿದ್ದ, ಆಮೇಲೆ ಕಾಶ್ಮೀರಕ್ಕೆ ಹೋಗಿ ನಾಲ್ಕು ದಿನಗಳಾಗಿತ್ತು ಅಷ್ಟೆ, ನಮ್ಮನ್ನು ಅಗಲಿದ ಎಂದು ಹೇಳಿದ್ದು ಹುಬ್ಬಳ್ಳಿಯ ವೀರಯೋಧ ರಾಘವೇಂದ್ರ ಮಹಾದೇವಪ್ಪ ಬಡಿಗೇರ ಅವರ ತಾಯಿ ಇಂದ್ರಾ ಮಹಾದೇವಪ್ಪ ಬಡಿಗೇರ.
ಬಹುಶಃ ರಾಘವೇಂದ್ರ ಮಿಲಿಟರಿ ಸೇರಿದ್ದು ನಮಗಾಗಿ ಏನೋ? ತರಬೇತಿಯಲ್ಲಿ ನೀಡಿದ್ದ ಸ್ಟೆ ೈಫಂಡ್ ಸಹ ಅವನು ತೆಗೆದುಕೊಂಡು ಹೋಗಲಿಲ್ಲ. ಇವತ್ತು ಏನಾದರೂ ನಮ್ಮ ಜೀವನಕ್ಕೆ ಒಂದು ದಿಕ್ಕು ಅನ್ನೊದು ಸಿಕ್ಕಿದ್ದರೆ ಅದು ರಾಘವೇಂದ್ರನಿಂದ. ಕಾಶ್ಮೀರ ಗಡಿಯಲ್ಲಿ ಉಗ್ರರ ದಾಳಿಯಲ್ಲಿ ನನ್ನ ಮೂರನೇ ಮಗ ರಾಘವೇಂದ್ರ ವೀರ ಮರಣವನ್ನಪ್ಪಿದ ಮೇಲೆ ಸರ್ಕಾರ ನನಗೆ ಎಸ್‌ಡಿಎಂ ಕಾಲೇಜು ಹತ್ತಿರ ಪ್ಲಾಟ್ ನೀಡಿದೆ ಅಲ್ಲಿ ಮನೆ ಕಟ್ಟಿಸಿದ್ದೇವೆ. ಪ್ರತಿ ತಿಂಗಳು ರು. 12 ಸಾವಿರ ಪಿಂಚಣಿ ನನ್ನ ಹೆಸರಿಗೆ ಬರುತ್ತಿದೆ. ಹೀಗಾಗಿ ಬದುಕಿಗಂತೂ ತೊಂದರೆ ಇಲ್ಲ. ಮಗನನ್ನೇ ಕಳೆದುಕೊಂಡಿದ್ದೇನೆ. ಕರ್ತವ್ಯಕ್ಕೆ ಹಾಜರಾಗಿ ಬರಿ ಎಂಟು ದಿನ ಆಗಿತ್ತು. ಖರೇ ಹೇಳಬೇಕ ಅಂದ್ರ ಆವ ನಾಲ್ಕ ದಿನ ದಿಲ್ಲ್ಯಾಗ ಇದ್ದು ಆಮ್ಯಾಕ್ ಕಾಶ್ಮೀರಕ್ಕ ಹೋಗಿದ್ದ. ಒಂದು ಪೈಸಾ ಪಗಾರ ಕೂಡ ತನಗ ಅಂತ ಬಳಸಿಕೊಳ್ಳಲಿಲ್ಲ. ಮಿಲಿಟ್ರಿ ಸೇರಿ ನಮ್ಮ ಬಡತನಾ, ಸಾಲ ಹರದಾ...
ವೀರಗಾಥೆ: ಸೆಪ್ಟೆಂಬರ್ 18, 2001ರಂದು ಕಾಶ್ಮೀರ ಗಡಿಯಲ್ಲಿ ಉಗ್ರರ ಗುಂಡೇಟಿಗೆ ಎದೆಯೊಡ್ಡಿದ ರಾಘವೇಂದ್ರನ ಸಾವಿನ ಸುದ್ದಿ ಮೊದಲು ನನಗೆ ಯಾರೂ ಹೇಳಿರಲಿಲ್ಲ. ಪದೇ ಪದೇ ಮನೆಗೆ ನೆಂಟರು ಅವರು ಇವರು ಬರೋದು ನೋಡಿ ದಿಗಿಲು ಆಗಿದ ನನ್ನ ಮಗ ಇಲ್ಲಾ ಅನ್ನೊದು ಖಾತ್ರಿ ಆತು. ಮದ್ಲು ಮಿಲಿಟರಿಯವ್ರು ಹೆಣಾ ಕೊಡೊದಿಲ್ಲ ಅನ್ನಾಕತ್ತಿದ್ರು, ಆದರೂ ಆಮ್ಯಾಲೆ ಕೊಟ್ಟರು. ಅವನ ಎದಿಗೆ ನಾಲ್ಕೈದ ಕಡೆ ಗುಂಡು ಬಿದ್ದಿದ್ದು ನಾ ನೋಡೇಣಿ ತಲಿಗೂ ಗುಂಡು ಬಿದ್ದಿತ ಅಂತ ಕಾಣಸ್ತ, ತಲಿಗೆ ಪಟ್ಟಿ ಕಟ್ಟಿದ್ರು. ನನಗ ಒಟ್ಟು ಐದು ಮಕ್ಕಳು. ಮಗಳು ಹಿರಿಯವಳು ಅವಳನ್ನು ಶಿರಹಟ್ಟಿ ತಾಲೂಕಿನ ವಡಿಹೊಸುರ ಊರಿಗೆ ಕೊಟ್ಟೆವಿ. ಇನ್ ರಾಘುನಗಿಂತ ಹಿರಿಯವರು ಮಂಜು, ಅಶೋಕ ಬಡಿಗತನ ಮಾಡ್ತಾರು. ಸಣ್ಣಾಂವ ನವೀನ್ 2 ವರ್ಷದ ಹಿಂದ ತೀರಿದ. ಅವಂಗ ಪೋಲಿಯೋ ಆಗಿತ್ತು. ಕಾರ್ಪೋರೇಷನ್‌ದೊರು ನವೀನ್‌ಗ ನೌಕ್ರಿ ಕೊಡ್ತೇನಂತ ಹೇಳಿದ್ರು, ನಾವ ಬ್ಯಾಡ್ ಅಂತಿದ್ದಿವಿ.
ಮಿಲಿಟ್ರಿ ಸೇರೂದಕ್ಕ ಮೊದ್ಲ ನನ್ನ ಮಗಾ ರು. 25 ಕೂಲಿ ಮಾಡ್ತಿದ್ದ. ಒಂದು ವಾರ ದುಡದು ರು. 150 ತಂದ ಕೈಯ್ಯಾಗ ಕೊಟ್ಟು ಯವ್ವಾ ನೀನ ಸಂತಿ ಮಾಡಾಕ ಹೊಗು ನಾ ಹ್ವಾದರ ನಾಲ್ಕ ದಿನಕ್ಕ ಅಗುವಷ್ಟ ಸಂತಿ ತರ್ತಿನಿ ನೀ ಆದ್ರ ವಾರಕ್ಕ ಆಗುವಷ್ಟ ಸಂತಿ ತರ್ತಿ ಅನ್ನತಿದ್ದ ಎನ್ನುತ್ತಾರೆ ದಿ. ರಾಘವೇಂದ್ರನ ತಾಯಿ ಇಂದ್ರಾ ಬಡಿಗೇರ.
- ಚಿತ್ರಗಳು: ಡಿ. ಹೇಮಂತ್
ವೀರ ಯೋಧನ ಸಮಾಧಿಗೆ ದಿಕ್ಕಿಲ್ಲ...
ಸೆಪ್ಟೆಂಬರ್ 18ರಂದು ಕಾಶ್ಮೀರದಲ್ಲಿ ಗುಂಡಿಗೆ ವೀರಮರಣವನ್ನಪ್ಪಿದ ಹುಬ್ಬಳ್ಳಿಯ ರಾಘವೇಂದ್ರ ಮಹಾದೇವಪ್ಪ ಬಡಿಗೇರ ಅವರ ಹುತಾತ್ಮ ಸ್ಮಾರಕವನ್ನು ನೇಕಾರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಹಾನಗರ ಪಾಲಿಕೆ ನಿರ್ಮಿಸಿದೆ. ಸ್ಮಾರಕದ ಸುತ್ತ ಗಲೀಜು ತುಂಬಿಕೊಂಡಿದೆ. ಹಂದಿ ನಾಯಿಗಳು ಬೇಕಾಬಿಟ್ಟಿ ಆಡುತ್ತಿವೆ. ಮಲಗುತ್ತಿವೆ. ಮಕ್ಕಳು ಊಟ ಮಾಡಿದ ಬಳಿಕ ಸ್ಮಾರಕದ ಮೇಲೆ ಮುಸುರೆ ಚೆಲ್ಲುತ್ತಾರೆ. ವೀರಯೋಧನ ಜೀವನ ಸಾಧನೆ ಬಗ್ಗೆ ಮಕ್ಕಳಿಗೆ ಬೋಧಿಸುವವರೇ ಮೌನವಾಗಿದ್ದಾರೆ.

 ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.