ಧಾರವಾಡ

ಎಲ್‌ಪಿಜಿ ಇದ್ದೋರಿಗೆ ಸೀಮೆಎಣ್ಣೆ ಇಲ್ಲ!

Published On :

ಬೆಟಗೇರಿ: ಎಲ್‌ಪಿಜಿ ಗ್ಯಾಸ್ ಹೊಂದಿರುವವರಿಗೆ ಸೀಮೆಎಣ್ಣೆ ವಿತರಿಸುವುದನ್ನು ಪಡಿತರ ವ್ಯವಸ್ಥೆಯಿಂದ ಕೈ ಬಿಟ್ಟಿರುವುದರಿಂದ ಗ್ರಾಮೀಣ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಪ್ರಸ್ತುತ ಉರುವಲು ಕಟ್ಟಿಗೆ ಲಭ್ಯವಿಲ್ಲದ ಕಾರಣ ಎಂತಹ ಬಡವನಾದರೂ ಎಲ್‌ಪಿಜಿ ಗ್ಯಾಸ್ ಪಡೆಯಬೇಕಾದ ಅನಿವಾರ್ಯತೆ ಇದೆ. ಅಂದ ಮಾತ್ರಕ್ಕೆ ಆತನಿಗೆ ಸೀಮೆಎಣ್ಣೆ ಅಗತ್ಯವಿಲ್ಲ ಎಂದು ಭಾವಿಸಿರುವ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿದರೂ ಎಲ್‌ಪಿಜಿ ಹೊಂದಿದ್ದರೆ ಸೀಮೆಎಣ್ಣೆ ಪಡೆಯಲು ಅರ್ಹನಲ್ಲ ಎನ್ನುವ ವಾದದಿಂದ ಗ್ರಾಮೀಣ ಪ್ರದೇಶದ ಜನತೆ ಗೋಳಾಡುವಂತಾಗಿದೆ.
ಈ ವಿಷಯದಲ್ಲಿ ರಾಜ್ಯ ಸರ್ಕಾರವು ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೂ ಹೋಲಿಕೆ ಮಾಡುವುದನ್ನು ಬಿಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ದಿನದ ಇಪ್ಪತ್ತು ತಾಸುಗಳಿಗೂ ಅಧಿಕ ಕಾಲ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೆಲವು ಘಂಟೆಗಳ ಕಾಲ ಮಾತ್ರ ವಿದ್ಯುತ್ ಸರಬರಾಜಾಗುತ್ತಿದೆ. ಕೆಲವೊಮ್ಮೆಯಂತೂ ದಿನಗಟ್ಟಲೇ ವಿದ್ಯುತ್ ಇರುವದಿಲ್ಲ. ಈ ಸಮಯದಲ್ಲಿ ಗ್ಯಾಸ್ ಹೊಂದಿದವರು ಸೀಮೆಎಣ್ಣೆ ಇಲ್ಲದೇ ಕತ್ತಲಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ಉಂಟಾಗಿದೆ. ವಿದ್ಯುತ್ ವ್ಯತ್ಯಯ ಹಾಗೂ ಇತರ ಕಾರಣಗಳಿಂದ ವಿದ್ಯುತ್ ಕೈಕೊಟ್ಟಾಗ ಗ್ರಾಮೀಣ ವಿದ್ಯಾರ್ಥಿಗಳ ಓದಿಗೆ ನೆರವಾಗಿದ್ದ ಕಂದಿಲಿನ ಬೇಳಕಿಗೂ ಸರ್ಕಾರ ಕತ್ತರಿ ಹಾಕಿದಂತಾಗಿದೆ. ಅಲ್ಲದೆ, ಮಳೆಗಾಲವಾದ್ದರಿಂದ ಜನ ಕತ್ತಲಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲೂ ಬೆಣ್ಣೆ, ಸುಣ್ಣ: ಈ ವಿಷಯದಲ್ಲಿ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಎಲ್‌ಪಿಜಿ ಗ್ಯಾಸ್ ಸಂಪರ್ಕ ಪಡೆಯುವಾಗ ಪಡಿತರ ಚೀಟಿಯನ್ನು ದಾಖಲೆಯಾಗಿ ನೀಡಿದವರ ಯಾದಿಯನ್ನಾಧರಿಸಿ ಅಂಥವರಿಗೆ ಸೀಮೆ ಎಣ್ಣೆ ಸ್ಥಗಿತಗೊಳಿಸಲಾಗಿದೆ. ಪಡಿತರ ಚೀಟಿಯ ಬದಲು ಕೇವಲ ವಿದ್ಯುತ್ ಬಿಲ್‌ನ ಆರ್‌ಆರ್ ನಂಬರ್‌ನ ಆಧಾರದ ಮೇಲೆ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಈಗಲೂ ಸೀಮೆಎಣ್ಣೆ ದೊರೆಯುತ್ತಿದ್ದು, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸುತ್ತಿದೆ. ಸರ್ಕಾರದ ಈ ನೀತಿ ಜನರ ಬೇಸರಕ್ಕೆ ಕಾರಣವಾಗಿದೆ.
ಅನಿಲ ಸಹಿತ ಕಾರ್ಡ್‌ಗಳಿಗೆ ಸೀಮೆಎಣ್ಣೆ ಸ್ಥಗಿತಗೊಳಿಸಿದ್ದರಿಂದ ಅನಿಲ ರಹಿತರಿಗೆ ಪ್ರತಿ ಕಾರ್ಡ್‌ಗೆ ಐದು ಲೀಟರ್ ಸೀಮೆಎಣ್ಣೆ ಸಿಗುತ್ತಿದೆ. ವಲಸೆ ಹೋದವರು ತಮ್ಮ ಪಡಿತರ ಚೀಟಿಗಳನ್ನು ಒತ್ತೆ ಇಟ್ಟಿದ್ದರಿಂದ ಮತ್ತು ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದವರ ಸೀಮೆಎಣ್ಣೆ ಉಪ್ಪಿನ ಬೆಟಗೇರಿಯ ಕಾಳ ಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಇದ್ದವರು ಹೆಚ್ಚಿನ ಬೆಲೆಗೆ ಸೀಮೆಎಣ್ಣೆ ಖರೀದಿಸಿದರೆ, ಇಲ್ಲದವರಿಗೆ ಸಂಜೆಯಾಗುತ್ತಿದ್ದಂತೆ ಬೆಳಕಿನದ್ದೆ ಚಿಂತೆಯಾಗಿದೆ. ಸರ್ಕಾರ ನಗರ ಮತ್ತು ಗ್ರಾಮಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ನಗರಗಳಿಗೆ ಪೂರೈಕೆಯಾಗುತ್ತಿರುವಷ್ಟು ವಿದ್ಯುತ್ ಗ್ರಾಮಗಳಿಗೆ ಸರಬರಾಜಾಗುತ್ತಿಲ್ಲ. ಆದ್ದರಿಂದ ಗ್ರಾಮೀಣದಲ್ಲಿ ಗ್ಯಾಸ್ ಹೊಂದಿದವರಿಗೂ ಸೀಮೆ ಎಣ್ಣೆ ವಿತರಿಸಬೇಕು. ಜನಪ್ರತಿನಿಧಿಗಳು ಕೂಡಲೇ ಈ ಕುರಿತು ಗಮನ ಹರಿಸಬೇಕೆಂದು ಸೀಮೆಎಣ್ಣೆ ವಂಚಿತ ಗ್ರಾಹಕ ಚನ್ನಬಸಪ್ಪ ಲಗಣ್ಣವರ ಒತ್ತಾಯಿಸುತ್ತಾರೆ.

ಮನಸೂರಿನಲ್ಲಿ ಪಡಿತರ ಅಂಗಡಿ ಬಂದ್
ಧಾರವಾಡ: ಎಲ್‌ಪಿಜಿ ಗ್ಯಾಸ್ ಹೊಂದಿದವರಿಗೆ ಇನ್ನುಮುಂದೆ ಸೀಮೆಎಣ್ಣೆ ಇಲ್ಲ ಎಂದಿರುವ ಸರ್ಕಾರದ ವಿರುದ್ಧ ತಾಲೂಕಿನ ಮನಸೂರಿನಲ್ಲಿ ಸೋಮವಾರ ತೀವ್ರತರ ಪ್ರತಿಭಟನೆಯಾಗಿದೆ. ಅಲ್ಲದೇ, ಪಡಿತರ ಅಂಗಡಿಯನ್ನು ಸುಮಾರು ಎರಡು ಗಂಟೆಗಳ ಕಾಲ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಗ್ರಾಮದಲ್ಲಿ ಶೇ. 80ರಷ್ಟು ಜನ ಬಡವರು ಎಲ್‌ಪಿಜಿ ಗ್ಯಾಸ್ ಸಂಪರ್ಕ ಹೊಂದಿದ್ದಾರೆ. ಇವರಿಗೆ ಸೀಮೆಎಣ್ಣೆ ಕೊಡದಿದ್ದರೆ ವಿದ್ಯುತ್ ಇಲ್ಲದಿದ್ದಾಗ ಏನು ಮಾಡಬೇಕು. ನಗರದಲ್ಲಿರುವಂತೆ ನಿತ್ಯ 24 ಗಂಟೆ ವಿದ್ಯುತ್ ನೀಡಬೇಕು, ಇಲ್ಲದಿದ್ದರೆ ಕನಿಷ್ಟ ಎರಡು ಲೀಟರ್ ಸೀಮೆಎಣ್ಣೆಯನ್ನಾದರೂ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಸೀಮೆಎಣ್ಣೆ ಸಮಸ್ಯೆ ಕುರಿತು ಪ್ರತಿಭಟನೆ ಮಾಡಿದ್ದಲ್ಲದೇ, ತಹಸೀಲ್ದಾರ್ ಅವರಿಗೂ ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಂಡಿದ್ದೇವೆ. ಅವರ ನಿರ್ದೇಶನದಂತೆ ಗ್ರಾಪಂ ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸುತ್ತೇವೆ. ವಾರದೊಳಗೆ ಸೀಮೆಎಣ್ಣೆ ವಿತರಿಸದಿದ್ದರೆ ದೊಡ್ಡ ಪ್ರಮಾಣದ ಹೋರಾಟ ಮಾಡಬೇಕಾಗುತ್ತದೆ. ಶಾಸಕರು ಈ ಕುರಿತು ಗಮನ ಹರಿಸಬೇಕೆಂದು ಗ್ರಾಪಂ ಸದಸ್ಯ ಬಸವರಾಜ ಅಮರಗೋಳ ಒತ್ತಾಯಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರೆಪ್ಪ ಎತ್ತಿನಗುಡ್ಡ, ರುದ್ರೇಶ ಕಮ್ಮಾರ, ಚಂದ್ರಪ್ಪ ಸಂಕಣ್ಣವರ, ನಾಗಪ್ಪ ಮುಮ್ಮಿಗಟ್ಟಿ ಇದ್ದರು.
-ಪ್ರಕಾಶ ಹೂಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.