ಧಾರವಾಡ

ಸುದರ್ಶನರ ಸಾಹಿತ್ಯಕ್ಕೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ

Published On :

ಧಾರವಾಡ:  ಮನುಷ್ಯನ ಸ್ವಭಾವದೊಳಗೆ ಅಪರಾಧಿ ಮನೋಭಾವನೆ ಇರುವುದು ಸಹಜ. ಆದರೆ, ಅದನ್ನು ತಿದ್ದುಕೊಳ್ಳುವಂತೆ ಅವಕಾಶ ಕಲ್ಪಿಸದೆ ಹೋದರೆ ಆ ವ್ಯಕ್ತಿ ಸಮಾಜಕ್ಕೆ ಮಾತ್ರವಲ್ಲ ರಾಷ್ಟ್ರಕ್ಕೆ ಪಿಡಗು ಎಂದು ಹಿರಿಯ ಕಲಾವಿದ ಅನಿಲ ದೇಸಾಯಿ ಅಭಿಪ್ರಾಯಿಸಿದರು.
ವಿದ್ಯಾವರ್ಧಕ ಸಂಘವು ಪತ್ತೆದಾರಿ ಸಾಹಿತಿ ಸುದರ್ಶನ ದೇಸಾಯಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಸಾಯಿ ಅವರು ಕಥೆಗಾರ, ನಾಟಕಕಾರ, ಕಾದಂಬರಿಕಾರರಾಗಿ ಸಾಹಿತ್ಯ ಸೃಷ್ಟಿ ಮಾಡಿದರು. ಅವರ ಸಾಹಿತ್ಯದ ಬಗ್ಗೆ ಸರಿಯಾದ ಸ್ಥಾನ ಸಿಗಲಿಲ್ಲ. ಅವರ ಹಲವಾರು ಕಥೆ, ಕಾದಂಬರಿಗಳು ಯಶಸ್ವಿ ಸಿನಿಮಾ ಆಗಿ ಜನಮನ್ನಣೆ ಪಡೆದರೂ ಸೃಜನಶೀಲ ಸಾಹಿತ್ಯ ಲೋಕದಲ್ಲಿ ಅವರಿಗೆ ಸರಿಯಾದ ಗೌರವ ದೊರಕದೇ ಹೋಗಿದ್ದು ವಿಪರ್ಯಾಸ ಎಂದರು.
ಅಪರಾಧ ಪ್ರಜ್ಞೆಯ ಆಳವನ್ನು ಅಧ್ಯಯನ ಮಾಡಿ ಬರವಣಿಗೆಗೆ ತೊಡಗಿಸಿಕೊಂಡವರು ಸುದರ್ಶನ ದೇಸಾಯಿ. ಹೀಗಾಗಿ ತಮ್ಮದೇ ಆದ ಓದುಗ ವರ್ಗವನ್ನು ಸೃಷ್ಠಿಸಿದರು. ಪತ್ತೇದಾರಿ ಸಾಹಿತ್ಯ ನೀಡಿದಷ್ಟೇ ಸಾಮಾಜಿಕ ಕಾದಂಬರಿಗಳನ್ನು ನೀಡಿದ್ದರು ಎಂಬುವುದು ಮರೆಯಬಾರದು ಎಂದರು.
ಸಾಹಿತ್ಯಕ್ಕೆ ಮಾರ್ಗಸೂಚಿ: ಪತ್ತೇದಾರಿ ಸಾಹಿತ್ಯದ ಕುರಿತು ಸಂಶೋಧನಾತ್ಮಕವಾದ ವಿಶ್ಲೇಷಣೆ ಮಾಡಿ ಕೃತಿ ತಂದ ಸುದರ್ಶನ ದೇಸಾಯಿ ಅವರ ಸಾಹಿತ್ಯ ಕರ್ನಾಟಕದಲ್ಲಿ ಅದೊಂದೇ ಪತ್ತೇದಾರಿ ಸಾಹಿತ್ಯಕ್ಕೆ ಮಾರ್ಗಸೂಚಿಯಾಗಿದೆ. ಮನುಷ್ಯನ ಬದುಕು ಹಸನಾಗಿರಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬ ಕಾಳಜಿ ಅವರ ಪ್ರತಿ ಕಥೆ, ಕಾದಂಬರಿಯಲ್ಲಿ ಎದ್ದು ಕಾಣುತ್ತದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ, ಸುದರ್ಶನ ದೇಸಾಯಿ ಹಲವು ಕಾರಣಗಳಿಗೆ ಆದರ್ಶವಾಗಿದ್ದರು. ನಾಡಿನ ಬಹುದೊಡ್ಡ ವ್ಯಕ್ತಿಗಳ ಸಾಂಗತ್ಯ ಇದ್ದರೂ ನಿಗರ್ವಿಯಾಗಿದ್ದರು. ಸದಾ ಕ್ರಿಯಾಶೀಲರಾಗಿದ್ದ ದೇಸಾಯಿ ಸದಾ ಹೊಸತನದ ಹುಡುಕಾಟದಲ್ಲಿರುತ್ತಿದ್ದರು. ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಅವರು ಮಾಡಿದ ಸೇವೆ ದಾಖಲಿಸುವಂತಹದ್ದು. ಹಳ್ಳಿ-ಹಳ್ಳಿಗೂ ಸಾಹಿತ್ಯದ ಕಂಪನ್ನು ಹರಡಿದರು ಎಂದರು.  ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ಬಾಳಣ್ಣ ಶೀಗಿಹಳ್ಳಿ, ಡಾ. ಲಿಂಗರಾಜ ಅಂಗಡಿ, ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.