ನಿಷೇಧ ಮಧ್ಯೆ ಗಗನಕ್ಕೇರಿದ ಗುಟ್ಕಾ ಬೆಲೆ
ವಿಶೇಷ ವರದಿ
ಹುಬ್ಬಳ್ಳಿ: ಗಾಳಿ ಬಂದಾಗ ತೂರಿಕೋ...!
ಈ ಮಾತು ಅವಳಿನಗರದ ಗುಟ್ಕಾ ಸ್ಟಾಕಿಸ್ಟ್ ಹಾಗೂ ಕೆಲ ವ್ಯಾಪಾರಿಗಳ ಪಾಲಿಗೆ ಇದೀಗ ಹೇಳಿ ಮಾಡಿಸಿದಂತಾಗಿದೆ.
ಸರ್ಕಾರ ಗುಟ್ಕಾ ನಿಷೇಧ ಕ್ರಮವನ್ನು ಪ್ರಕಟಿಸುತ್ತಿದಂತೆಯೇ, ಮಹಾನಗರ ಗುಟ್ಕಾ ಸ್ಟಾಕೀಸ್ಟ್ಗಳು ಈವರೆಗೂ ಸಂಗ್ರಹಿಸಿಕೊಂಡಿರುವ ಗುಟ್ಕಾ ಉತ್ಪನ್ನಗಳನ್ನು ಕಾಳ ಸಂತೆಯಲ್ಲಿ ಮಾರಲಾರಂಭಿಸಿದ್ದು, ಗುಟ್ಕಾ ಪ್ರೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಲ್ಲರೆ ವ್ಯಾಪಾರಿಗಳಿಗಿಂತಲೂ ಸ್ಟಾಕಿಸ್ಟ್ ಗಳು, ನಾಲ್ಕೈದು ಪಟ್ಟು ಹೆಚ್ಚಿಗೆ ದರದಲ್ಲಿ ಗುಟ್ಕಾ ಪಾಕೆಟ್ಗಳನ್ನು ಮಾರಾಟ ಮಾಡುತ್ತಿದ್ದು, ವ್ಯಾಪಾರಿಗಳಿಗೆ ಒಂದು ಗುಟ್ಕಾ ಪ್ಯಾಕೆಟ್ ಹಿಂದೆ 2 ನಿಂದ 2.50 ಮಾತ್ರ ಲಾಭವಾಗುತ್ತಿದೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿಬರುತ್ತಿವೆ.
ಸಿಗುವರೆಗೆ: ದಶಕಗಳಿಂದ ಗುಟ್ಕಾ ದಾಸರಾಗಿದ್ದವರಿಗೆ ಸರ್ಕಾರದ ಈ ನಿರ್ಧಾರ ಸ್ವಲ್ಪ ಮಟ್ಟಿಗೆ ಕಿರಿಕಿರಿಯನ್ನುಂಟು ಮಾಡಿದೆಯಾದರೂ, ಗುಟ್ಕಾ ನಿಷೇಧವಾದಾಗ ಮಾತ್ರ ಈ ಚಟವನ್ನು ತಾವು ಹೊರಗೆ ಬರಲು ಸಾಧ್ಯ ಎಂಬ ಸಮಾಧಾನವೂ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಗುಟ್ಕಾ ಮಾರುಕಟ್ಟೆಯಲ್ಲಿ ಲಭ್ಯವಾಗುವವರೆಗೆ ತಿಂದರಾಯ್ತು ಎಂಬ ಖಯಾಲಿ ಹೊಂದಿದ್ದವರಿಗೆ ಇದ್ದಕ್ಕಿಂದತೆಯೇ ಗುಟ್ಕಾ ಬೆಲೆಗಳು ನಾಲ್ಕೈದು ಪಟ್ಟು ಹೆಚ್ಚಾಗಿದ್ದು ತಲೆಬಿಸಿ ಮಾಡಿದೆ.
ರು. 25-30: ಹತ್ತು ರು. ಮುಖಬೆಲೆಯ ಆರ್ಎಂಡಿ 25ನಿಂದ 30 ಗೆ ಮಾರಾಟ ಮಾಡಲಾಗುತ್ತಿದ್ದರೆ, ಪ್ರೀಮಿಯಮ್ ಸ್ಟಾರ್ 5 ಬದಲಾಗಿ 7-9 ಗಳಿಗೆ ಮಾರಾಟ ಮಾಡಲಾಗುತ್ತಿದೆ. ಸ್ಟಾರ್ ಗುಟ್ಕಾ, ಸಿದ್ದು ಸೇರಿದಂತೆ ತಹರೇವಾರಿ ಗುಟ್ಕಾ ಬೆಲೆಯಲ್ಲಿಯೂ ನಾಲ್ಕೈದು ಪಟ್ಟು ಏರಿಕೆಯಾಗಿದೆ.
ಕೆಲ ಸ್ಟಾಕಿಸ್ಟ್ಗಳು ಸದ್ಯ ತಮ್ಮಲ್ಲಿರುವ ಉತ್ಪಾದನೆಗಳನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಬಿಡದೆ ಬೇಡಿಕೆ ಹೆಚ್ಚಿದ ಮೇಲೆ ಬಿಟ್ಟರೆ ಮತ್ತಷ್ಟು ಲಾಭ ಗಳಿಸಬಹುದೆಂಬ ದುರಾಸೆ ಹೊಂದಿದ್ದಾರೆ. ವ್ಯಾಪಾರಿಯೊಬ್ಬರು ಹೇಳುವ ಪ್ರಕಾರ, ಗುಟ್ಕಾ ಮಾರುವ ಅಂಗಡಿಕಾರರ ವಿರುದ್ಧ ಸಂಬಂಧಿತ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ ನಂತರ ಕಾಳಸಂತೆಯಲ್ಲಿ ಮಾರಲು ಉಳಿಸಿಕೊಂಡಿರಲಾಗಿರುವ ಆರ್ಎಂಡಿ ಬೆಲೆ ಒಂದಕ್ಕೆ ರು. 500 ಆಗಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಯಂ ಗಿರಾಕಿಗಳಿಗೆ: ಇನ್ನೂ ಹದಿನೈದಿಪ್ಪತ್ತು ದಿವಸಗಳ ಕಾಲ ಮಾರಾಟ ಮಾಡಲು ಬೇಕಾಗುವಷ್ಟು ವಿವಿಧ ರೀತಿಯ ಗುಟ್ಕಾಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಆಯಾ ಅಂಗಡಿಗಳ ಮಾಲೀಕರು ಕಾಯಂ ಗಿರಾಕಿಗಳಿಗೆ ಮಾತ್ರ ಗುಟ್ಕಾ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲ ಗುಟ್ಕಾ ಪ್ರಿಯರಂತೂ, ತಾವು ಸೇವಿಸಿ ಗುಟ್ಕಾಗಳು ಯಾವುದೊಂದು ಅಂಗಡಿಯಲ್ಲಿ ಲಭ್ಯವಿದೆ ಎಂಬುದು ತಿಳಿದರೆ ಸಾಕು ಆಯಾ ವ್ಯಾಪಾರಿಗಳು ಕೇಳಿದಷ್ಟು ಹಣ ನೀಡಿ ಇಡೀ ಸರವನ್ನೇ ಖರೀದಿಸಲು ತುದಿಗಾಲ ಮೇಲೆ ನಿಂತುಕೊಳ್ಳುತ್ತಿದ್ದಾರೆ. ಇದು ವ್ಯಾಪಾರಿಗಳಿಗೆ ಒಮ್ಮೆಲೇ ಲಾಭಗಿಟ್ಟಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಮಾತ್ರ ಸುಳ್ಳಲ್ಲ.
ಭಾರಿ ಬೇಡಿಕೆ: ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಗುಟ್ಕಾ ಪ್ರಿಯರು ಹೆಚ್ಚಾಗಿದ್ದರೆ ಎಂಬುದು ಸರ್ಕಾರ ಗುಟ್ಕಾ ನಿಷೇಧ ಪ್ರಕಟಿಸಿದ ನಂತರ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಗುಟ್ಕಾ ವ್ಯಾಪಾರದಿಂದ ಕಂಡುಬರುತ್ತಿದೆ.
ನಗರಗಳಿಗಿಂತಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಗುಟ್ಕಾಗಳ ಮೇಲೆ ಮತ್ತಷ್ಟು ಹೆಚ್ಚಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು ನಗರ ಪ್ರದೇಶದಿಂದ ಕೇಳಿದಷ್ಟು ಹಣ ನೀಡಿ ಗುಟ್ಕಾಗಳನ್ನು ಖರೀದಿಸಿ ಆಯಾ ಗ್ರಾಮ ಹಾಗೂ ಹಳ್ಳಿಗಳಲ್ಲಿ 8-10 ಪಟ್ಟು ಹೆಚ್ಚಳ ಮೇಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರ ಗುಟ್ಕಾ ನಿಷೇಧ ಕ್ರಮಕೈಗೊಂಡಿದ್ದು ನಿಜಕ್ಕೂ ಸ್ವಾಗತಾರ್ಹ ಕ್ರಮವೇ. ಇದನ್ನೇ ಹಣ ಮಾಡಿಕೊಳ್ಳಲು ಮಾರ್ಗವನ್ನಾಗಿಸಿಕೊಂಡಿರುವ ಸ್ಟಾಕಿಸ್ಟ್ ಹಾಗೂ ವ್ಯಾಪಾರಿಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕಿದೆ.
ಅಲ್ಲದೆ, ಗುಟ್ಕಾ ಮಾರಾಟ ನಿಷೇಧ ದಿನಾಂಕವನ್ನು ಸರ್ಕಾರ ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಪ್ರಕಟಿಸುವ ಮೂಲಕ ಮುಗ್ಧ ವ್ಯಾಪಾರಿಗಳು ಕಾನೂನು ಬಲೆಗೆ ಸಿಕ್ಕಿ ಹಾಕಿಕೊಳ್ಳದಂತೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಬೇರೆಯಾಗಿ ಹೇಳಬೇಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

