ಫುಟ್ಪಾತ್ ಅತಿಕ್ರಮಣ: ನಿರ್ದಾಕ್ಷಿಣ್ಯ ಕ್ರಮ
ಹುಬ್ಬಳ್ಳಿ: ಫುಟ್ಪಾತ್ ಅತಿಕ್ರಮಣಕ್ಕೆ ಬ್ರೇಕ್ ಹಾಕಲು ಪಾಲಿಕೆ ಕೊನೆಗೂ ಮುಂದಾಗಿದೆ.
ಹೌದು, ಫುಟ್ಪಾತ್ ಅತಿಕ್ರಮಣ ಮಾಡಿಕೊಂಡಿರುವ ಅಂಗಡಿಕಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಫುಟ್ಪಾತ್ ಅತಿಕ್ರಮಣದ ಹಿಂದಿರುವ ಮಾಫಿಯಾವನ್ನು ಪೊಲೀಸ್ ಇಲಾಖೆ ಸಹಾಯದಿಂದ ಬಗ್ಗು ಬಡಿಯುವುದಾಗಿಯೂ ಹೇಳಿದ್ದಾರೆ.
ಫುಟ್ಪಾತ್ ಹೈಜಾಕ್ ಆಗಿರುವ ಬಗ್ಗೆ 'ಕನ್ನಡಪ್ರಭ' ಪ್ರಕಟಿಸುತ್ತಿರುವ ಸರಣಿ ವರದಿಗೆ ಸ್ಪಂದಿಸಿರುವ ಅವರು, 'ಕನ್ನಡಪ್ರಭ' ಜನಾನುರಾಗಿ ವರದಿ ಪ್ರಕಟಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಚೇರಿ ಕೆಲಸದ ನಿಮಿತ್ತ ಪ್ರವಾಸದಲ್ಲಿದ್ದ ಕಾರಣದಿಂದಾಗಿ ಫುಟ್ಪಾತ್ ಅತಿಕ್ರಮಣ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳಲು ತಡವಾಯಿತು. ಇನ್ನು ವಿರಮಿಸುವ ಪ್ರಶ್ನೆಯೇ ಇಲ್ಲ. ಫುಟ್ಪಾತ್ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದಿದ್ದಾರೆ.
ಫುಟ್ಪಾತ್ ಅತಿಕ್ರಮಣವಾಗಿರುವ ಕುರಿತು ಪಾಲಿಕೆ ಜಂಟಿ ಆಯುಕ್ತರೊಂದಿಗೆ ಸಭೆ ನಡೆಸಿದ್ದಲ್ಲದೇ ಮಾಹಿತಿ ತರಿಸಿಕೊಂಡಿದ್ದೇನೆ. ಇದೇ ವೇಳೆ ಸಂಚಾರ ಇನ್ಸ್ಪೆಕ್ಟರ್ಗಳ ಜತೆ ಮಾತುಕತೆ ನಡೆಸಿ ಫುಟ್ಪಾತ್ ಜನರ ಓಡಾಟಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಸುದೀರ್ಘವಾಗಿ ಚರ್ಚಿಸಿದ್ದಾಗಿ ತಿಳಿಸಿದರು.
ಕೇಸ್ ಬುಕ್: ಹಾಲಿ ಇರುವ ಅಂಗಡಿಕಾರರು ಫುಟ್ಪಾತ್ನ್ನು ಅತಿಕ್ರಮಿಸಿಕೊಂಡಿದ್ದರೆ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂಥ ಅಂಗಡಿಕಾರರ ವಿರುದ್ಧ ಕೇಸ್ ಬುಕ್ ಮಾಡಲಾಗುವುದು. ಇಂಥ ಅಂಗಡಿಗಳಾವವು ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಜತೆಗೆ 'ಕನ್ನಡಪ್ರಭ'ದ ವರದಿಯಲ್ಲಿ ಪ್ರಕಟವಾಗಿರುವ ಅಂಗಡಿಗಳ ಹೆಸರನ್ನೂ ದಾಖಲಿಸಿಕೊಳ್ಳಲಾಗಿದೆ. ಇಂಥವರ ವಿರುದ್ಧ ಕಾನೂನು ಕ್ರಮವೇ ಸರಿ ಎಂಬ ನಿರ್ಧಾರಕ್ಕೆ ಬರಲಾಗಿದೆ.
ವಿಶೇಷ ತಂಡ: ಪುಟ್ಪಾತ್ ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿ ವಲಯವಾರು ವಿಶೇಷ ತಂಡ ರಚಿಸಲಾಗುವುದು. ಪೊಲೀಸ್ ಅಧಿಕಾರಿಗಳ ಸಹಾಯ ಪಡೆದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹಫ್ತಾ ವಸೂಲಿ ಮಾಡುವವರ ಬಗ್ಗೆ ಮಾಹಿತಿ ಪಡೆದು ಅವರ ವಿರುದ್ಧವೂ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತೇವೆ. ತಪ್ಪಿತಸ್ಥರನ್ನು ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಾಟೀಲ ತಿಳಿಸಿದರು.
ಇಂದೇ ಕಾರ್ಯಾಚರಣೆ ಶುರು: ಫುಟ್ಪಾತ್ ಅತಿಕ್ರಮಿಸಿಕೊಂಡಿರುವವರ ಮಾಹಿತಿ ಸಂಗ್ರಹಿಸುವ ಹಾಗೂ ಅತಿಕ್ರಮಣ ತೆರವುಗೊಳಿಸುವ ಕಾರ್ಯ ಸೋಮವಾರದಿಂದಲೇ ಶುರುವಾಗಲಿದೆ. ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದೇ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪಾಟೀಲ ತಿಳಿಸಿದ್ದಾರೆ.
ನಿರೀಕ್ಷೆಯಲ್ಲಿ ಜನತೆ: ಫುಟ್ಪಾತ್ ಓಡಾಟಕ್ಕೆ ಮುಕ್ತಗೊಳ್ಳುವುದನ್ನೇ ಜನ ಕಾಯುತ್ತಿದ್ದಾರೆ. ಪಾಲಿಕೆ ಆಯುಕ್ತರು ಹೇಳಿದ ಪ್ರಕಾರ ಫುಟ್ಪಾತ್ ಓಡಾಟಕ್ಕೆ ಮುಕ್ತವಾದರೆ ಹು-ಧಾದ ಅಂದ ಮತ್ತೆ ಮರುಕಳಿಸಲಿದೆ. ಜನ ಕೂಡ ನಿರಾತಂಕವಾಗಿ ಫುಟ್ಪಾತ್ ಮೇಲೆ ಓಡಾಡಬಹುದು. ಇನ್ನು ಕಳೆದು ಹೋಗುತ್ತಿದ್ದ ಪಾಲಿಕೆಯ ಆಸ್ತಿಯನ್ನೂ ಆಯುಕ್ತರು ಉಳಿಸಿಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ಆಯುಕ್ತರು ನೀಡಿರುವ ಹೇಳಿಕೆ ಜನರಿಗೆ ಒಂದಿಷ್ಟು ಸಮಾಧಾನ ಮೂಡಿಸಿದ್ದರೂ, ಇದು ಕಾರ್ಯರೂಪಕ್ಕೆ ಬರಬೇಕಷ್ಟೇ.
ಹಾಕಿಂಗ್ ಜೋನ್...
ಫುಟ್ಪಾತ್ ಮೇಲೆ ಕೆಲ ಸಣ್ಣಪುಟ್ಟ ಅಂಗಡಿಕಾರರು ತಾತ್ಕಾಲಿಕ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೆ, ಅಂಥ ವ್ಯಾಪಾರಸ್ಥರಿಗೆ ಜನರ ಓಡಾಟಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸುವಂತೆ ಸೂಚಿಸಲಾಗುವುದು. ಇವರನ್ನು ಎತ್ತಂಗಡಿ ಮಾಡುವುದಿಲ್ಲ. ಆದರೆ, ಕಾಯಂ ಅಂಗಡಿಯಿದ್ದೂ ಫುಟ್ಪಾತ್ ಅತಿಕ್ರಮಿಸಿದ್ದರೆ ಅಂಥವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಹಿಂದೊಮ್ಮೆ ಫುಟ್ಪಾತ್ ಮೇಲಿನ ತಾತ್ಕಾಲಿಕ ಅಂಗಡಿ ತೆರವುಗೊಳಿಸಿದಾಗ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಉಚ್ಚನ್ಯಾಯಾಲಯದಲ್ಲಿ ಈ ಕುರಿತು ವಾದ ವಿವಾದ ನಡೆದು, ಫುಟ್ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿರುವವರಿಗೆ ಹಾಕಿಂಗ್ ಜೋನ್ ನಿರ್ಮಿಸಿಕೊಡಲು ನ್ಯಾಯಾಲಯ ಸೂಚಿಸಿತ್ತು. ಸೂಚನೆಯನ್ವಯ ಫುಟ್ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿರುವವರಿಗೆ ಹಾಕಿಂಗ್ ಜೋನ್ ನಿರ್ಮಿಸಿಕೊಡುವ ಕಾರ್ಯ ಚಾಲ್ತಿಯಲ್ಲಿದೆ. ದಾಜಿಬಾನ್ಪೇಟೆಯಲ್ಲಿ ಈಗಾಗಲೇ ಮಾರ್ಕಿಂಗ್ ಕಾರ್ಯ ಮುಗಿದಿದೆ. ಇನ್ನುಳಿದ ವಲಯ ವ್ಯಾಪ್ತಿಯಲ್ಲಿಯೂ ಮಾರ್ಕಿಂಗ್ ಕಾರ್ಯ ಶುರುವಾಗಲಿದ್ದು, ತಿಂಗಳಾಂತ್ಯಕ್ಕೆ ಮಾರ್ಕಿಂಗ್ ಪ್ರಕ್ರಿಯೆ ಕೊನೆಗೊಳ್ಳಲಿದೆ. ಹಾಕಿಂಗ್ ಜೋನ್ ನಿರ್ಮಿಸಿದ ಮೇಲೆ ಫುಟ್ಪಾತ್ ಅತಿಕ್ರಮಣ ಸಮಸ್ಯೆಗೆ ಮುಕ್ತಿ ದೊರಕಲಿದೆ.
ಏನಿದು ಹಾಕಿಂಗ್ ಜೋನ್?
ಫುಟ್ಪಾತ್ ಮೇಲೆ 1 ಮೀಟರ್ ಸುತ್ತಳತೆಯಲ್ಲಿ ತಾತ್ಕಾಲಿಕ ಅಂಗಡಿ ಇಟ್ಟುಕೊಳ್ಳಲು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು. ಈ ಅಂಗಡಿಗಳು ಪಾದಾಚಾರಿಗಳಿಗೆ ಫುಟ್ಪಾತ್ ಮೇಲೆ ಓಡಾಡಲು ಯಾವುದೇ ತೊಂದರೆಯಾಗದಂತಿರುತ್ತವೆ. ಇಂತಹ ಅಂಗಡಿಗಳಿಗೆ ಪಾಲಿಕೆ ಲೈಸನ್ಸ್ ವಿತರಣೆ ಮಾಡಲಿದೆ. 2 ತಿಂಗಳೊಳಗಾಗಿ ಹು-ಧಾದಲ್ಲಿ ಹಾಕಿಂಗ್ ಜೋನ್ ನಿರ್ಮಾಣಗೊಳ್ಳಲಿದೆ. ಫುಟ್ಪಾತ್ ಮೇಲೆಯೇ ಜನರಿಗೆ ಹಾಗೂ ಅಂಗಡಿಕಾರರಿಗೆ ಕುಡಿಯುವ ನೀರಿನ ಅರವಟಿಗೆ ನಿರ್ಮಿಸಲಾಗುತ್ತದೆ.
ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

