ಮುಂಗಾರಿನ ಸಂತಸಕ್ಕೆ ನೋಟಿಸ್ಗಳ ಕಿರಿಕಿರಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 5
ಮುಂಗಾರು ಬಿತ್ತನೆಗೆ ಸಜ್ಜಾದ ರೈತರ ಮನೆ ಮನೆಗೆ ಬ್ಯಾಂಕ್ ನೋಟಿಸ್ಗಳು ಬರ ಸಿಡಿಲಿನಂತೆ ಬಂದು ಅಪ್ಪಳಿಸುತ್ತಿವೆ.
ಹೌದು. ಬೆಳೆಸಾಲ ವಸೂಲಾತಿಗಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು ಅರ್ಬನ್ ಬ್ಯಾಂಕ್ಗಳ ರಿಜ್ಜಿಸ್ಟ್ರಾರ್ಗಳ ಮೂಲಕ ಸಾಲ ಮರುಪಾವತಿಸುವಂತೆ ನೋಟಿಸ್ಗಳನ್ನು ಬೆಳೆಸಾಲ ಪಡೆದ ರೈತರ ಹಾಗೂ ಜಾಮೀನುದಾರರ ಮನೆಗೆ ಕಳುಹಿಸುತ್ತಿದ್ದಾರೆ. ಅಲ್ಲದೆ, ಕರ್ನಾಟಕ ಕೃಷಿ ಸಾಲ ನಿರ್ವಹಣೆ ಮತ್ತು ಇತರೆ ನಿರ್ಬಂಧನೆಗಳ ಕಾಯ್ದೆ 1974ರ ಅನ್ವಯ ತಿಳಿವಳಿಕೆ ಪತ್ರ ನೀಡಿದ 15 ದಿನದೊಳಗಾಗಿ ನಿವೇದನೆಗಳನ್ನು ಹಾಜರುಪಡಿಸಬೇಕು. ಇಲ್ಲದಿದ್ದಲ್ಲಿ, ಕಾಯ್ದೆ ಅನ್ವಯ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂಬ ನೋಟಿಸ್ ಬಂದಿದ್ದು, ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸರ್ಕಾರದ ತಾರತಮ್ಯ: ಸತತ ಎರಡು ವರ್ಷಗಳ ಬರಗಾಲದಿಂದ ಕೈ ಖಾಲಿ ಮಾಡಿಕೊಂಡಿರುವ ರೈತರಿಗೆ ಈ ವರ್ಷ ತುಸು ಆಶಾದಾಯಕ ಮಳೆ ಬೀಳುತ್ತಿದೆ. ಇಂತಹ ಸುಸಂದರ್ಭದಲ್ಲಿಯೇ ಬ್ಯಾಂಕ್ಗಳಿಂದ ಈ ಹಿಂದೆ ತೆಗೆದುಕೊಂಡಿದ್ದ ಬೆಳೆಸಾಲ ಮರುಪಾವತಿಸುವಂತೆ ಒತ್ತಾಯಪೂರ್ವಕ ನೋಟಿಸ್ಗಳು ರೈತರ ಮನೆ ಮನೆಗೆ ಬರುತ್ತಿವೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಬರಗಾಲದ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಹಾಗೂ ಸೊಸೈಟಿಯ ಬ್ಯಾಂಕ್ನಲ್ಲಿ ರು. 25 ಸಾವಿರ ವರೆಗೆ ಎಲ್ಲ ರೈತರ ಸಾಲಮನ್ನಾ ಮಾಡಿತ್ತು. ಆದರೆ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮಾತ್ರ ಹಾಗೆಯೇ ಉಳಿದಿತ್ತು. ಸದ್ಯ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬೆಳೆಸಾಲ ತೆಗೆದ ಸಾಕಷ್ಟು ರೈತರಿಗೆ ಬೆಳೆಸಾಲ ಮರುಪಾವತಿಸುವಂತೆ ನೋಟಿಸ್ ಜಾರಿಯಾಗುತ್ತಿವೆ. ಈ ರೀತಿಯ ಸರ್ಕಾರದ ತಾರಮ್ಯ ರೈತರಲ್ಲಿ ಅಸಮಾಧಾನ ಉಂಟುಮಾಡಿದೆ.
ಕೊಡಲಿ ಪೆಟ್ಟು: ಪ್ರಸ್ತುತ ಮುಂಗಾರು ಬಿತ್ತನೆಗೆ ಸಜ್ಜಾದ ರೈತರಲ್ಲಿ ಹಣವಿಲ್ಲದ ಕಾರಣ ಸಾಕಷ್ಟು ರೈತರು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಈ ಹಿಂದಿನ ಸಾಲ ತುಂಬದೆ ಹೊಸ ಬೆಳೆಸಾಲ ನೀಡುವುದಿಲ್ಲ ಎಂದು ಸ್ಪಷ್ಟ ಉತ್ತರ ನೀಡುತ್ತಿವೆ. ಇನ್ನು, ಬಿಜೆಪಿ ಸರ್ಕಾರ ಕಳೆದ ವರ್ಷ ಸೊಸೈಟಿಯಲ್ಲಿನ ರು. 25 ಸಾವಿರ ಸಾಲ ಪಡೆದ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದು, ಕೆಲವೊಂದು ಸಹಕಾರಿ ಹಾಗೂ ಸೊಸೈಟಿಗಳಿಗೆ ಹಣ ಬರದ ಕಾರಣ ಹಲವು ರೈತರ ಸಾಲಮನ್ನಾ ಇನ್ನೂ ಆಗಿಲ್ಲ. ಹಾಗಾಗಿ ಅಲ್ಲಿಯೂ ರೈತರಿಗೆ ಸಾಲ ಸಿಗುತ್ತಿಲ್ಲ. ಬ್ಯಾಂಕ್ಗಳು ರೈತರ ಮುಂಗಾರು ಬಿತ್ತನೆಗೆ ಹೊಸ ಸಾಲ ನೀಡದೆ ಬಿತ್ತನೆಗೆ ಕೊಡಲಿ ಪೆಟ್ಟು ನೀಡುವ ಸಾಧ್ಯತೆಗಳೇ ಜಾಸ್ತಿ.
ಒಟ್ಟಾರೆ, ಮುಂಗಾರು ಬಿತ್ತನೆಗೆ ಬೀಜ-ಗೊಬ್ಬರ ಖರೀದಿಗಾಗಿ ಹಣ ಜೋಡಣೆ ಕಾರ್ಯದಲ್ಲಿ ತೊಡಗಿದ್ದಾರೆ ರೈತರು. ಒಂದೆಡೆ ಸಾಕಷ್ಟು ಮಳೆಯಾಗಿದ್ದರೂ ಕೈಯಲ್ಲಿ ಕಾಸಿಲ್ಲದ ಕಾರಣ ಬಿತ್ತನೆಗೆ ಮುಂದಾಗುತ್ತಿಲ್ಲ. ಇತ್ತ ಬ್ಯಾಂಕ್ಗಳು ಹಳೆ ಬೆಳೆಸಾಲ ತುಂಬುವವರೆಗೆ ಹೊಸ ಸಾಲ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಈ ಇಕ್ಕಟ್ಟಿನ ಸ್ಥಿತಿಯಲ್ಲಿ ಸರ್ಕಾರ ರೈತರ ಪರವಾಗಿ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

