ಪೊಲೀಸರಿಗೆ ರೊಕ್ಕ ಕೊಟ್ರೆ ಬೈಕ್ ನಿಮ್ಮದಾಗುತ್ತೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 9
ಪೊಲೀಸರಿರುವುದು ನೊಂದವರಿಗೆ ನ್ಯಾಯ ಕೊಡಲಿಕ್ಕಾ? ಅಥವಾ ನೊಂದವರನ್ನು ಕಾಡಿಸಿ ಪೀಡಿಸಿ ಹಣ ಮಾಡುವುದಕ್ಕಾ..?
ಹೌದು....ಹಳೇ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರ ಲಂಚಾವತಾರ ದರ್ಶನದಿಂದ ಈ ಪ್ರಶ್ನೆ ಉದ್ಭವಿಸುತ್ತದೆ. ಬಡ ಗೌಂಡಿ ಕಾರ್ಮಿಕನೊಬ್ಬ ಕಳೆದು ಹೋದ ಬೈಕ್ ಮರಳಿ ಪಡೆಯಲು ಈ ಠಾಣೆಯ ಅಧಿಕಾರಿಗಳಿಗೆ ಲಂಚ ನೀಡಿ ರೋಸಿ ಹೋಗಿದ್ದಾನೆ. ನ್ಯಾಯ ಕೇಳಲು ಹೋದವನಿಗೆ ಪೊಲೀಸರು ಅನ್ಯಾಯ ಮಾಡಿದ್ದಾರೆ. ಹಣ ಕೀಳುವುದು ತಮ್ಮ ಪರಮಾಧಿಕಾರ ಎನ್ನುವ ರೀತಿಯಲ್ಲಿ ಕಾರ್ಮಿಕನೊಂದಿಗೆ ವರ್ತಿಸಿರುವ ಪೊಲೀಸ್ ಅಧಿಕಾರಿಗಳ ಹಕೀಕತ್ತು 'ಕನ್ನಡಪ್ರಭ' ಕುಟುಕು ಕಾರ್ಯಾಚರಣೆಯಲ್ಲಿ ಬಯಲಿಗೆ ಬಂದಿದೆ.
ಅಸಲಿಗೆ ನಡೆದಿದ್ದು ಏನೆಂದರೆ, ಹಳೆಹುಬ್ಬಳ್ಳಿ ಠಾಣೆ ವ್ಯಾಪ್ತಿಗೆ ಒಳಪಡುವ ರಾಮಲೋಹಿಯಾ ನಗರದ ನಿವಾಸಿ ಬಾಳಪ್ಪ ಬಂಡಿವಡ್ಡರ ಅವರ ಮನೆ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ಪ್ಯಾಶನ್ ಪ್ರೊ ಬೈಕ್ (ಕೆಎ-25 ಇಇ-3934) 22 ಏಪ್ರಿಲ್ 2013ರಂದು ಕಳ್ಳತನವಾಗಿದೆ. ಇದರಿಂದ ಗಾಬರಿಗೊಂಡ ಬಂಡಿವಡ್ಡರ ಬೈಕ್ ಕಳ್ಳತನವಾಗಿರುವ ಬಗ್ಗೆ ಹಳೆಹುಬ್ಬಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದಾದ ಬಳಿಕ ಮೇ ಕೊನೆಯ ವಾರದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ಬಂಡಿವಡ್ಡರ ಮೊಬೈಲ್ಗೆ ಕರೆ ಮಾಡಿ ಛಬ್ಬಿಯಲ್ಲಿ ಬೈಕ್ ಪತ್ತೆಯಾಗಿರುವ ಬಗ್ಗೆ ತಿಳಿಸಿದ್ದಲ್ಲದೇ ಬೈಕ್ ಗುರುತು ಪತ್ತೆ ಮಾಡಲು ಬರುವಂತೆ ಸೂಚಿಸಿದ್ದಾರೆ. ಬೈಕ್ ಸಿಕ್ಕ ಖುಷಿಯಲ್ಲಿ ಬಂಡಿವಡ್ಡರ ಗ್ರಾಮೀಣ ಠಾಣೆಗೆ ಧಾವಿಸಿ ಬಂದಿದ್ದಾರೆ. ಠಾಣೆಯಲ್ಲಿದ್ದ ಪೇದೆ ಛಬ್ಬಿಗೆ ಹೋಗೋಣವೆಂದು ಬಂಡಿವಡ್ಡರಗೆ ತಿಳಿಸಿದ್ದಾರಲ್ಲದೇ ತನ್ನ ಬೈಕ್ನಲ್ಲಿ ಕುಡಿಸಿಕೊಂಡು ಸ್ವಲ್ಪ ದೂರದಲ್ಲಿರುವ ಪೆಟ್ರೋಲ್ ಬಂಕ್ಗೆ ಹೋಗಿ ತನ್ನ ಬೈಕ್ಗೆ ರು. 300 ಪೆಟ್ರೋಲ್ ಹಾಕುವಂತೆ ತಿಳಿಸಿದ್ದಾನೆ. ಬೈಕ್ ಸಿಗುತ್ತದೆ ಎಂಬ ಖುಷಿಯಲ್ಲಿ ಬಂಡಿವಡ್ಡರ ಹೆಚ್ಚೇನು ಯೋಚಿಸದೇ ಪೊಲೀಸಪ್ಪನ ಬೈಕ್ಗೆ ಪೆಟ್ರೋಲ್ ಹಾಕಿಸಿದ್ದಾರೆ. ಛಬ್ಬಿಗೆ ಹೋಗಿ ಪರಿಶೀಲಿಸಿದಾಗ ಬಂಡಿವಡ್ಡರ ಬೈಕ್ ತನ್ನದೆಂದು ಖಾತರಿ ಪಡಿಸಿದ್ದಾರೆ. ಅಲ್ಲಿಂದ ಪುನಃ ಗ್ರಾಮೀಣ ಠಾಣೆಗೆ ಬಂದಿಳಿದ ಬಳಿಕ ಅದೇ ಪೇದೆ ರು. 200 ಕಿತ್ತುಕೊಂಡಿದ್ದಾನೆ. ನಾಳೆ ಬಂದು ಪಿಎಸ್ಐ ಅಲಿನವಾಜ್ ಬಾಬುಸಾಹೇಬ್ ಜಮಾದಾರ್ ಅವರನ್ನು ಕಾಣುವಂತೆ ಸೂಚಿಸಿದ್ದಾನೆ.
ಬಡಪಾಯಿ ಬಂಡಿವಡ್ಡರ ಮರು ದಿನವೂ ಪೊಲೀಸರು ದುಡ್ಡು ಕೇಳಬಹುದೆಂದು ಗೆಳೆಯನ ಬಳಿ ಸಾಲ ಕೇಳಿದ್ದಾರೆ. ಕಾರಣ ಕೇಳಿದಾಗ ಪೊಲೀಸರಿಗೆ ನೀಡಲು ಎಂದು ತಿಳಿಸಿದ್ದಾರೆ. ಇಬ್ಬರೂ ಪೊಲೀಸರ ಹಕೀಕತ್ತು ಜಗಜ್ಜಾಹೀರ ಮಾಡಬೇಕೆಂದು 'ಕನ್ನಡಪ್ರಭ' ಕಚೇರಿಗೆ ಬಂದು ಅಳಲು ತೋಡಿಕೊಂಡರು. ಆ ಬಳಿಕ 'ಕನ್ನಡಪ್ರಭ' ಕುಟುಕು ಕಾರ್ಯಾಚರಣೆ ಕೈಗೊಂಡಿತು.
ಮಾರನೇ ದಿನ ಪಿಎಸ್ಐ ಜಮಾದಾರ್ ಅವರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಬಂಡಿವಡ್ಡರ ಭೇಟಿ ಮಾಡಿದಾಗ, ಜಮಾದಾರ್ ಏರುಧ್ವನಿಯಲ್ಲಿ ಬಂಡಿವಡ್ಡರ ಅವರನ್ನು ಗದರಿಸಿದ್ದಾರೆ. ಬೈಕ್ ಹುಡುಕಿಕೊಟ್ಟಿದ್ದಕ್ಕೆ ಪ್ರತಿಯಾಗಿ ರು. 2 ಸಾವಿರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ತಾನು ಬಡವ. ಇಷ್ಟೊಂದು ಹಣ ತನ್ನಿಂದ ನೀಡಲಾಗದು ಎಂದು ಬಂಡಿವಡ್ಡರ ಅಂಗಲಾಚಿದ್ದಾರೆ. ಇದರಿಂದ ಕೆರಳಿದ ಪಿಎಸ್ಐ ಜಮಾದಾರ್, ಸೀದಾ ಸೀದಾ ರು. 2 ಸಾವಿರ ಕೊಟ್ಟರೆ ಸರಿ ಇಲ್ಲದೇ ಹೋದಲ್ಲಿ ಕಳ್ಳತನ ಕೇಸ್ ಬುಕ್ ಮಾಡುವುದಾಗಿ ಧಮಕಿ ಹಾಕಿದ್ದಾರೆ. ಆ ಬಳಿಕ ಜಮಾದಾರ್ಗೆ ನೀಡಲು ಹಣ ಎಣಿಸಲು ಮುಂದಾದರೆ, "ನನ್ನ ಮುಂದೆಯೇ ಧಿಮಾಕಿನಿಂದ ಹಣ ಎಣಿಸುತ್ತೀಯಾ? ಪೊಲೀಸರಿಗೆ ಹೇಗೆ ಹಣ ಹೇಗೆ ಕೊಡಬೇಕೆಂದು ಗೊತ್ತಾಗುವುದಿಲ್ಲವೇ? ನಿನ್ನ ಮೇಲೂ ಕೇಸ್ ಬುಕ್ ಮಾಡಿ ಒಳಗೆ ಹಾಕುತ್ತೀನಿ ಹುಷಾರ್" ಎಂದು ಬಂಡಿವಡ್ಡರ ಸಂಬಂಧಿ ಎಂದು ಮಾರುವೇಷದಲ್ಲಿ ಹೋಗಿದ್ದ 'ಕನ್ನಡಪ್ರಭ' ಪ್ರತಿನಿಧಿಗೂ ಧಮಕಿ ಹಾಕಿದ್ದಾರೆ. ಅಲ್ಲಿಂದ ನಡೆಯಿರಿ ನಿಮಗೆ ಬುದ್ಧಿ ಕಲಿಸುತ್ತೇನೆಂದು ಹೇಳಿ ಸಿಪಿಐ ಆರ್.ಕೆ. ಪಾಟೀಲ ಬಳಿ ಕರೆದುಕೊಂಡು ಹೋಗಿದ್ದಾರೆ. ಸಿಪಿಐ ಎದುರಲ್ಲೂ ಸಹ ಬಂಡಿವಡ್ಡರಗೆ ಪಿಎಸ್ಐ ರೋಪ್ ಹಾಕಿದ್ದಾರೆ. ಆರ್.ಕೆ. ಪಾಟೀಲ ಸಹ ಇದಕ್ಕೆ ಧ್ವನಿಗೂಡಿಸಿದ್ದಾರೆ. ಆ ಬಳಿಕ ಜಮಾದಾರ್ ಕೈಗೆ ಬಂಡಿವಡ್ಡರ ರು. 2 ಸಾವಿರ ನೀಡಿದರು. ಆ ಹಣವನ್ನು ಜಮಾದಾರ ಸಿಪಿಐ ಆರ್.ಕೆ. ಪಾಟೀಲ ಕೈಗೆ ಕೊಟ್ಟಿದ್ದಾರೆ. ಸಿಪಿಐ ಪಾಟೀಲ ಹಣ ತೆಗೆದುಕೊಂಡು ಡ್ರಾನಲ್ಲಿ ಇಟ್ಟುಕೊಂಡಿದ್ದಾರೆ. ಇದಾದ ಬಳಿಕ ದೂರು ನೀಡಿರುವ ಹಳೆಹುಬ್ಬಳ್ಳಿ ಠಾಣೆಗೆ ಬೈಕ್ ಕಳುಹಿಸಿಕೊಡುತ್ತೇವೆ. ಅಲ್ಲಿಂದ ಬೈಕ್ ಬಿಡಿಸಿಕೊಳ್ಳಿ ಎಂದು ಜಮಾದಾರ್ ಸೂಚಿಸಿದ್ದಾರೆ. ಬೈಕ್ ಹಳೆಹುಬ್ಬಳ್ಳಿಗೆ ಠಾಣೆಗೆ ಕಳಿಸುವ ಪೂರ್ವದಲ್ಲಿ ಅದರ ಟೈರ್ಗಳನ್ನು ಬಿಡಿಸಿಟ್ಟುಕೊಂಡಿದ್ದಾರೆ.
ತದ ನಂತರ ಬಂಡಿವಡ್ಡರ ಹಳೆಹುಬ್ಬಳ್ಳಿ ಠಾಣೆಗೆ ಹೋಗಿ ಪಿಎಸ್ಐ ಈರಪ್ಪ ಬೇವಿನಮರದ ಅವರನ್ನು ಕಂಡು ಬೈಕ್ ನೀಡುವಂತೆ ಕೇಳಿದ್ದಾರೆ. ಇಲ್ಲಿಯೂ ಬೇವಿನಮರದ ರೋಪ್ ಹಾಕಿದ್ದಾರೆ. ಬೈಕ್ ಪುಕ್ಕಟ್ಟೆ ಸಿಗುವುದಿಲ್ಲ, ಮೊದಲು ಚಹಾ ಕುಡಿಸು ಎಂದಿದ್ದಾರೆ. ಹೊಟೇಲ್ಗೆ ಹೋಗಿ ಚಹಾ-ತಿಂಡಿ ಕೊಡಿಸಿದ್ದಾರೆ. ಇಲ್ಲಿ ಪಿಎಸ್ಐ ಬೇವಿನಮರದ ರು. 500 ಲಂಚ ಕೇಳಿದ್ದಾರೆ. ಬಂಡಿವಡ್ಡರ ಅನ್ಯ ದಾರಿ ಕಾಣದೇ ಲಂಚ ನೀಡಿದ್ದಾರೆ. ಇಷ್ಟಕ್ಕೇ ಸಮಾಧಾನಗೊಳ್ಳದ ಬೇವಿನಮರದ ಸ್ಟಾರ್ ಗುಟ್ಕಾ ಸಹ ಬೇಡಿದ್ದಾನೆ.
ಇಷ್ಟಾದ ನಂತರ ಕೋರ್ಟ್ಗೆ ಹೋಗಿ ಬೈಕ್ ರಿಲೀಜ್ ಆರ್ಡರ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾನೆ. ಬಂಡಿವಡ್ಡರ ಬೈಕ್ ರಿಲೀಜ್ ಆರ್ಡರ್ ತೆಗೆದುಕೊಂಡಾಗ ಪೇದೆಗಳಾದ ರವಿ ಹೂಗಾರ ಹಾಗೂ ಕಲ್ಮೇಶ ಬಿರನೂರ ಅವರನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಈ ಪೈಕಿ ರವಿ ಹೂಗಾರ ಅವರನ್ನು ಭೇಟಿ ಮಾಡಿದರೆ ಬೈಕ್ ಬಿಡಲು ರು. 600 ಲಂಚ ನೀಡುವಂತೆ ಕೇಳಿದ್ದಾನೆ. ಈ ಹಣವನ್ನು ತಾನು ಹಾಗೂ ಕಲ್ಮೇಶ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. ಹಣ ನೀಡಿ ರೋಸಿ ಹೋಗಿದ್ದ ಬಂಡಿವಡ್ಡರ, ತಮ್ಮನ್ನು ಹಣಕ್ಕಾಗಿ ಪೀಡಿಸಬೇಡಿ ಎಂದು ರವಿ ಹೂಗಾರ ಕಾಲಿಗೆ ಬಿದ್ದು ಕೇಳಿಕೊಂಡಿದ್ದಾನೆ. ಆದರೆ ಕಲ್ಲು ಹೃದಯದ, ಲಂಚಬಾಕ ಪೇದೆ ರವಿ ಜಪ್ಪಯ್ಯ ಎಂದರೂ ಹಣ ನೀಡದೇ ಬೈಕ್ ಬಿಡುವುದಿಲ್ಲ ಎಂದು ಕರಾರು ಹಾಕಿದ್ದಾನೆ. ರು. 600 ಕೊಟ್ಟ ಬಳಿಕ ಬಂಡಿವಡ್ಡರಗೆ ಬೈಕ್ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಬೈಕ್ ಕೈಗೆ ಸಿಕ್ಕಾಗ ಬಂಡಿವಡ್ಡರಗೆ ಗರ ಬಡಿದ ಅನುಭವ, ಏಕೆಂದರೆ ಅದಕ್ಕೆ ಟೈರ್, ಮೀರರ್, ಬ್ಯಾಟರಿ, ಹಾರ್ನ್ನಂತಹ ಪಾರ್ಟ್ಗಳೇ ಇದ್ದಿರಲಿಲ್ಲ. ಇದಕ್ಕೆ ಕಾರಣ ಕೇಳಿದರೆ, ಪುಣ್ಯ ಬೈಕಾದರೂ ಸಿಕ್ಕಿತಲ್ಲ ಸುಮ್ಮನೆ ಜಾಗ ಖಾಲಿ ಮಾಡು ಎಂದು ಪೇದೆ ರವಿ ಗದರಿದ್ದಾನೆ. ಕೊನೆಯದಾಗಿ ಬೈಕ್ ಬಿಡಿಸಿಕೊಂಡು ಹೋದ ಬಗ್ಗೆ ದಾಖಲೆಗೆ ಫೋಟೋ ಬೇಕು ಎಂದು ತನ್ನ ಮೊಬೈಲ್ನಿಂದ ಪೋಟೋ ತೆಗೆದಿರುವ ರವಿ ಇದಕ್ಕೂ ರು. 100 ಕಸಿದುಕೊಂಡಿದ್ದಾನೆ. ಬೈಕ್ ಮರಳಿ ಪಡೆದ ಬಂಡಿವಡ್ಡರ, ಶೋರೂಮ್ಗೆ ಹೋಗಿ ಪೊಲೀಸರಿಂದಲೇ ಕಳ್ಳತನವಾದ ಗಾಡಿಯ ಹೊಸ ಬಿಡಿಭಾಗಗಳನ್ನು ಹಾಕಿಸಲು ರು. 9 ಸಾವಿರ ಖರ್ಚು ಮಾಡಿದ್ದಾರೆ.
"ಪೊಲೀಸರು ಇಷ್ಟೆಲ್ಲಾ ಕಿರುಕುಳ ಕೊಡುತ್ತಾರೆಂದು ಮೊದಲೇ ಗೊತ್ತಿದ್ದರೆ, ಬೈಕ್ ಕಳ್ಳತನವಾಗಿರುವ ಬಗ್ಗೆ ದೂರೂ ನೀಡುತ್ತಿರಲಿಲ್ಲ. ಮರಳಿ ಪಡೆಯುವ ಸಾಹಸಕ್ಕೂ ಕೈಹಾಕುತ್ತಿರಲಿಲ್ಲ. ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ಯೋಚನೆಯನ್ನೂ ಮಾಡಿದ್ದೆ" ಎನ್ನುವಾಗ ಬಂಡಿವಡ್ಡರ ಕಣ್ಣಂಚಿನಿಂದ ನೀರು ಜಿನುಗಿತ್ತು.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

