ಇಲಾಖೆಗೆ ಮಸಿ ಬಳಿದವರಿಗೆ ಶಿಕ್ಷೆಯೋ, ರಕ್ಷೆಯೋ?
ಹುಬ್ಬಳ್ಳಿ: ಕಳ್ಳತನವಾಗಿದ್ದ ಬೈಕ್ ಮರಳಿ ಪಡೆಯಲು ಲಂಚ ಪಡೆದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಅಧಿಕಾರಿಗಳ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆಯಲ್ಲದೇ, ಅಧಿಕಾರಿಗಳ ಲಂಚಗುಳಿತನದ ಬಗ್ಗೆ ಚರ್ಚೆ ನಡೆದಿದೆ.
ಈ ಪ್ರಕರಣ ಇಡೀ ಧಾರವಾಡ ಜಿಲ್ಲಾ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ವ್ಯವಸ್ಥೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ. ದುಡ್ಡಿಗಾಗಿ ಎಂತಹ ಹೀನ ಕೃತ್ಯಕ್ಕೂ ಹಿಂಜರಿಯುವುದಿಲ್ಲ ಎನ್ನುವುದನ್ನು ಈ ಪೊಲೀಸ್ ಅಧಿಕಾರಿಗಳು ಸಾಬೀತು ಪಡಿಸಿದ್ದಾರೆ. ಇವರ ಕುಕೃತ್ಯ ಇದೀಗ ಚರ್ಚೆಯ ವಿಷಯವಾಗಿದೆ.
ಅನ್ಯಾಯ ನ್ಯಾಯೋವೇ?: ಅಷ್ಟಕ್ಕೂ ಬಾಳಪ್ಪ ಬಂಡಿವಡ್ಡರ ಮಾಡಿದ್ದ ತಪ್ಪೇನು? ತನ್ನ ಬೈಕ್ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು ತಪ್ಪೇ? ಗೌಂಡಿ ಕೆಲಸ ಮಾಡುವ ಬಂಡಿವಡ್ಡರ ಹಗಲು ರಾತ್ರಿ ದುಡಿದು ಬೆವರು ಸುರಿಸಿ ತನ್ನ ಕಾಯಕಕ್ಕೆ ಹೋಗಲು ಅನುಕೂಲವಾಗಲೆಂದು ಬೈಕ್ ಖರೀದಿಸಿದ್ದರು. ಬಂಡಿವಡ್ಡರ ಹೇಳುವ ಹಾಗೆ ಬೈಕ್ ಖರೀದಿಸುವುದು ಆತನ ಜೀವನದ ಒಂದು ಆಶಯವಾಗಿತ್ತು. ಜೀವನದಲ್ಲಿ ಬೈಕ್ ಖರೀದಿಸುವುದೇ ಅಂತಿಮ ಕನಸು ಎಂದಾದರೆ ಬಂಡಿವಡ್ಡರ ಆರ್ಥಿಕ ಸ್ಥಿತಿ ಹೇಗಿತ್ತೆಂಬುದಕ್ಕೆ ಸಾಕ್ಷಿ. ಇಂಥ ಬಡಪಾಯಿಗೆ ಬೈಕ್ ಕಳೆದುಕೊಂಡಾಗ ಸಹಜವಾಗಿ ದುಃಖವಾಗಿದೆ. ಬೈಕ್ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಬೈಕ್ ಹುಡುಕಿಕೊಟ್ಟಿದ್ದಕ್ಕೆ ಪ್ರತಿಯಾಗಿ ಪೊಲೀಸರು ಹಣ ಕೀಳಲು ನಿಂತು ಬಿಡುವುದೇ? ಬೈಕ್ ಸಿಕ್ಕಿದೆ ಎಂಬ ಸುದ್ದಿ ತಿಳಿದಾಗ ಬಂಡಿವಡ್ಡರಗೆ ಮುಗಿಲು ಮೂರೇ ಗೇಣಾಗಿತ್ತು. ಖುಷಿಯಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಹೋದರು. ಆದರೆ ಈ ಸಂತಸ ಕೆಲವೇ ನಿಮಿಷದ್ದು ಎಂಬುದು ಪಿಎಸ್ಐ ಅಲಿನವಾಜ್ ಜಮಾದಾರ್ ಎದುರು ನಿಂತಾಗ ಅರಿವಾಯಿತು.
ಹೀಗೆ ಪ್ರಮಾಣ ಮಾಡಿದ್ರಾ?: ಪಿಎಸ್ಐ ಜಮಾದಾರ್ ಅಂತೂ ತಾವು ಜವಾಬ್ದಾರಿ ಅಧಿಕಾರಿ ಎಂಬುದನ್ನೇ ಮರೆತು ಅಶ್ಲೀಲ ಶಬ್ದ ಪ್ರಯೋಗಿಸುವುದು, ಮಾತಿನ ಮಧ್ಯೆ ಬೆದರಿಸುವುದು, ತಾನು ಶೂರವೀರತನ ಮಾಡಿ ಬೈಕ್ ಪತ್ತೆ ಹಚ್ಚಿದ್ದೇನೆಂಬುದು, ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುವುದು, ನೇರಾನೇರ ಲಂಚ ಕೇಳುವುದು, ಇಲ್ಲದೇ ಹೋದಲ್ಲಿ ಕೇಸ್ ಬುಕ್ ಮಾಡುವುದಾಗಿ ಬೆದರಿಸುವುದು ನೋಡಿದರೆ, ಜಮಾದಾರ್ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಈ ರೀತಿಯಾಗಿ ಎಲ್ಲ ಕುಕೃತ್ಯ ಮಾಡುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿರಬೇಕು ಎಂದೆನಿಸದೇ ಇರಲಾರದು. ಲಂಚ ತೆಗೆದುಕೊಳ್ಳುವುದು ತನ್ನ ಅಧಿಕಾರ ಎಂಬಂತೆ ವರ್ತಿಸುತ್ತಿರುವ ಇಂಥ ಅಧಿಕಾರಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಅದ್ಯಾಕೆ ಪೋಷಿಸಿದ್ದಾರೋ ಗೊತ್ತಿಲ್ಲ. ಜಮಾದಾರ್ ವಿರುದ್ಧ ಈಗಾಗಲೇ ಅನೇಕರು ದೂರಿದಾಗಲೂ ಯಾವುದೇ ಕ್ರಮ ಕೈಗೊಂಡಿಲ್ಲ.
ಜಮಾದಾರ್ ಗ್ರಾಮೀಣ ಠಾಣೆಯಲ್ಲಿ ಅದೆಷ್ಟೋ ವರ್ಷದಿಂದ ಠಿಕಾಣಿ ಹೊಡೆದು ಕುಳಿತಿದ್ದಾರೆ. ಸ್ವತಃ ತನ್ನ ಹಿರಿಯ ಅಧಿಕಾರಿ ಆರ್. ಕೆ. ಪಾಟೀಲ ಎದುರೇ ಲಂಚ ತೆಗೆದುಕೊಂಡಿದ್ದಲ್ಲದೇ, ಪಾಟೀಲರಿಗೂ ಪಾಲು ಕೊಡುವಷ್ಟರ ಮಟ್ಟಿಗೆ ಜಮಾದಾರ್ ಖುಲ್ಲಂ ಖುಲ್ಲಾ ಲಂಚ ತೆಗೆದುಕೊಳ್ಳುತ್ತಾರೆಂದ ಮೇಲೆ ಪೊಲೀಸ್ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇನ್ನು ಹಳೆ ಹುಬ್ಬಳ್ಳಿಯ ಲಂಚಬಾಕ ಪಿಎಸ್ಐ ಬೇವಿನಮರದ, ಪೇದೆಗಳಾದ ರವಿ, ಕಲ್ಮೇಶನಂತವರು ಪೊಲೀಸ್ ಇಲಾಖೆ ಪಾಲಿಗೆ ಕಪ್ಪು ಚುಕ್ಕೆಯೇ ಸರಿ. ಎಳ್ಳಷ್ಟು ತಪ್ಪು ಮಾಡಿದರೂ ಸಹಿಸದ ಮಹಾನಗರ ಪೊಲೀಸ್ ಆಯುಕ್ತ ಬಿ. ಎ. ಪದ್ಮನಯನ ಕೆಂಗಣ್ಣಿನಿಂದ ಇವರು ಅದ್ಹೇಗೆ ತಪ್ಪಿಸಿಕೊಂಡಿದ್ದಾರೋ ಗೊತ್ತಿಲ್ಲ.
ಠಾಣೆಗೆ ಬರಲು ಹಿಂದೇಟು: ಜನಸ್ನೇಹಿಯಾಗಿರಬೇಕು, ನೊಂದವರಿಗೆ ನ್ಯಾಯ ಕೊಡಬೇಕು, ಬಂದವರಿಗೆ ಮರ್ಯಾದೆ ಕೊಡಬೇಕು ಎಂದೆಲ್ಲಾ ಪೊಲೀಸ್ ಅಧಿಕಾರಿಗಳಿಗೆ ಇಲಾಖೆಯಿಂದ ಪಾಠ ಹೇಳಲಾಗುತ್ತದೆ. ಆದರೆ ಬಹುಪಾಲು ಅಧಿಕಾರಿಗಳು ಜನವಿರೋಧಿಯಾಗಿ, ನೊಂದವರನ್ನು ಮತ್ತಷ್ಟು ನೋಯಿಸಿ, ದರ್ಪದಿಂದ ವರ್ತಿಸುವವರೇ ಹೆಚ್ಚಿರುತ್ತಾರೆ. ಈ ಕಾರಣಕ್ಕೋ ಏನೋ ಸಭ್ಯರು, ಬಡ ಬಗ್ಗರು ಪೊಲೀಸ್ ಠಾಣೆ ಮೆಟ್ಟಿಲೇರಲು ಹಿಂಜರಿಯುತ್ತಾರೆ. ಕಳ್ಳತನವಾಗಿದೆ ಎಂದು ದೂರು ನೀಡಿದವರನ್ನೇ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಸಿ ಹಾಕುತ್ತೇನೆಂದು ಧಮಕಿ ನೀಡುವ ಜಮಾದಾರ್ನಂತಹ ಅಧಿಕಾರಿಗಳಿದ್ದಾರೆಂದು ಗೊತ್ತಾದರಂತೂ ಪೊಲೀಸ್ ಠಾಣೆಯ ಮೆಟ್ಟಿಲೇರಲು ಹಿಂದೇಟು ಹಾಕುತ್ತಾರೆ. ಇಲಾಖೆಗೆ ಕೆಟ್ಟ ಹೆಸರು ಮೆತ್ತಿರುವ ಇಂಥ ಪೊಲೀಸ್ ಅಧಿಕಾರಿಗಳಿಗೆ ತಕ್ಕಶಾಸ್ತಿಯಾಗುವುದೇ?
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

