ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕಿ: ಆವಿನ್
ಕನ್ನಡಪ್ರಭ ವಾರ್ತೆ, ಗದಗ, ಜೂ. 12
ಸಮಾಜದಲ್ಲಿರುವ ಬಾಲ ಕಾರ್ಮಿಕ ಪದ್ಧತಿ ತೊಡೆದು ಹಾಕಲು ಸಾಂಘಿಕ ಪ್ರಯತ್ನ ಅತೀ ಆವಶ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ್ ಹೇಳಿದರು. ಅವರು ಬುಧವಾರ ಬೆಟಗೇರಿಯ ಸೇಂಟ್ಜಾನ್ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾಡಳಿತ, ಆರಕ್ಷಕ ಇಲಾಖೆ, ಕಾರ್ಮಿಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಠಿಣ ಕ್ರಮ: ಬಾಲ ಕಾರ್ಮಿಕ ಪದ್ಧತಿ ಸಾಮಾಜಿಕ ಸಮಸ್ಯೆಯಾಗಿದೆ. 14 ವರ್ಷದೊಳಗಿನ ಎಲ್ಲ ಬಾಲಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆಯಾಗುವಂತಹ ಯಾವ ಕೆಲಸಗಳನ್ನು ಮಾಡಬಾರದು. ಅಂತಹ ಕೆಲಸಗಳಿಗೆ ಬಾಲ ಕಾರ್ಮಿಕರನ್ನು ಬಳಸಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಮಕ್ಕಳಿಗಾಗಿಯೇ ವಿಶೇಷ ಕಾನೂನುಗಳಿವೆ ಅವುಗಳನ್ನು ದುರಪಯೋಗ ಮಾಡಿಕೊಳ್ಳಬಾರದು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ, ಮಕ್ಕಳಿಗೆ ಬಾಲಕಾರ್ಮಿಕ ವಿರೋಧಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯ. ಶಿಕ್ಷಣಕ್ಕೆ ಆದ್ಯತೆ ನೀಡಿ ಬಡತನ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ. ಸಾಮಾಜಿಕ ಪಿಡುಗಾಗಿರುವ ಬಾಲಕಾರ್ಮಿಕ ಪದ್ಧತಿಯನ್ನು ದೇಶಾದ್ಯಂತ ಸಂಪೂರ್ಣವಾಗಿ ಕಿತ್ತೊಗೆಯಲು ಪ್ರತಿಯೊಬ್ಬರೂ ಪಣ ತೊಡೋಣ ಎಂದರು.
ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಪ್ರಧಾನ ಹಿರಿಯ ನ್ಯಾಯಾಧೀಶ ಪುಂಡಲೀಕ ಹೊಸಮನಿ, ಜೆಎಂಎಫ್ಸಿ ನ್ಯಾಯಾಧೀಶೆ ಸುಜಾತಾ ಸುವರ್ಣ, ಪ್ರಧಾನ ದಿವಾಣಿ ನ್ಯಾಯಾಧೀಶೆ ಸರ್ವಮಂಗಲಾ ಚಿಕ್ಕನಗೌಡ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಎನ್. ಕುಟೋಂಜಿ, ಫ್ರೌಡಶಾಲೆಯ ಮುಖ್ಯಾಧ್ಯಾಪಕ ಪಾ. ಹ್ಯಾರಿಸ್ ವಿಕ್ಟರ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ, ಉಪನ್ಯಾಸಕ ಜಿ.ಗವಿಸಿದ್ದಪ್ಪ ಹಾಗೂ ವಿ.ವಿ. ನಡುವಿನಮನಿ ಆಗಮಿಸಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ನಗರದ ಮುನ್ಸಿಪಲ್ ಮೈದಾನದಿಂದ ಸೇಂಟ್ಜಾನ್ ಪ್ರೌಢಶಾಲೆ ವರೆಗೆ ಜಾಗೃತಿ ಜಾಥಾ ಜರುಗಿತು. ಬಿ.ಎಂ. ಕುಕನೂರ ಸ್ವಾಗತಿಸಿದರು. ಶಿಕ್ಷಕಿ ಎಸ್.ಎಸ್. ಗೌಡರ ನಿರೂಪಿಸಿದರು. ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

