ಜುಲೈನಲ್ಲಿ ಬಜೆಟ್: ಸಮಸ್ಯೆಗಳ ಬಗ್ಗೆ ಚರ್ಚೆ
ಧಾರವಾಡ: ಬರುವ ತಿಂಗಳಲ್ಲಿ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ಬಾಕಿ ಇರುವ ಮತ್ತು ಉದ್ದೇಶಿತ ವಿವಿಧ ಯೋಜನೆಗಳಿಗೆ ಹಣಕಾಸು ರೂಢಿಸಲಾಗುತ್ತಿದೆ ಎಂದು ಮೂಲಭೂತ ಸೌಲಭ್ಯ ಮತ್ತು ವಾರ್ತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಹಂತದಲ್ಲಿರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ತಮ್ಮ ತಮ್ಮ ಇಲಾಖೆಗಳಿಂದ ಜಾರಿಗೊಳಿಸಿರುವ ಯೋಜನೆಗಳ ಮಾಹಿತಿ ನೀಡಿದ ಅಧಿಕಾರಿಗಳು, ಸಂಬಂಧಿತ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಿದರು. ಯಾವ ಹಂತದಲ್ಲಿ ಇವುಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ: ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರಗಳ ಪೂರೈಕೆಯಲ್ಲಿನ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿದ ಸಚಿವರು ಬೇರೆಡೆಗೆ ಯೂರಿಯಾ ಗೊಬ್ಬರದ ಸೆಕೆಂಡ್ಸ್ ಮಾರಾಟ ನಡೆಯುತ್ತಿರುವ ಬಗ್ಗೆ ವರದಿಗಳಿದ್ದು, ಯಾವುದೇ ಕಾಲಕ್ಕೂ ಜಿಲ್ಲೆಯಲ್ಲಿ ಅಂತಹ ಮಾರಾಟಕ್ಕೆ ಅವಕಾಶವಾಗದಂತೆ ಕೃಷಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೃಷಿ ಜಂಟಿ ನಿರ್ದೇಶಕರು ಖುದ್ದಾಗಿ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಬೀಜ ಗೊಬ್ಬರಗಳ ಸುಗಮ ಪೂರೈಕೆ ಹಾಗೂ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಿದರು.
ಕುಡಿಯುವ ನೀರು ಪೂರೈಕೆಗಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಡೆ ಸಮಿತಿಗಳ ಮೂಲಕ ಕೈಗೊಳ್ಳಲಾಗಿರುವ ಕೊಳವೆ ಬಾವಿ, ಪೈಪ್ಲೈನ್ ಸೇರಿದಂತೆ ಮತ್ತಿತರ ಕಾಮಗಾರಿಗಳ ಸ್ಥಿತಿಗತಿಗಳನ್ನು ತಿಳಿದು ವಸ್ತುನಿಷ್ಠ ವರದಿಯನ್ನು ಪಡೆಯಲು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕುಡಿಯುವ ನೀರು ಪೂರೈಕೆಗೆ ಅಗತ್ಯವಿದ್ದಂತೆ ಸಕಾಲಕ್ಕೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಬೇಕು. ಇದಕ್ಕೆ ಬದಲಾಗಿ ಅನುದಾನ ಲಭ್ಯತೆ ಆಧಾರದ ಮೇಲೆ ಕ್ರಿಯಾಯೋಜನೆ ರೂಪಿಸುವುದು ಸರಿಯಾದ ಕ್ರಮವಲ್ಲ ಎಂದು ಸಚಿವರು ನುಡಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ನೀರು ಪೂರೈಕೆ ಯೋಜನೆ, ಚತುಷ್ಪಥ, ಧಾರವಾಡ ಬೈಪಾಸ್ ರಸ್ತೆಗೆ ಸರ್ವಿಸ್ ರಸ್ತೆಗಳ ನಿರ್ಮಾಣ, ಒಳಚರಂಡಿ ಕಾಮಗಾರಿ, ವಿದ್ಯುತ್ ಮತ್ತು ನೀರು ಪೂರೈಕೆ, ನಿರಂತರ ಜ್ಯೋತಿ ಯೋಜನೆ ಹಾಗೂ ಟ್ರಾನ್ಸ್ಫಾರ್ಮಗಳ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ, ಜಿಪಂ ಸಿಇಓ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಇದ್ದರು.
ಅಭಿವೃದ್ಧಿ ಜಿಲ್ಲೆಯಾಗಿಸೋಣ
ಎಲ್ಲ ಸರ್ಕಾರಿ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ತಮ್ಮ ಹೆಸರಿನಲ್ಲಿ ಬೇಡಿಕೆ ಸಲ್ಲಿಸಿದರೆ ಅದಕ್ಕೆ ಸೊಪ್ಪು ಹಾಕಬಾರದು. ಜನಸಾಮಾನ್ಯರ ಹಿತ ಕಾಯುವ ಜತೆಗೆ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಜಿಲ್ಲೆಯನ್ನಾಗಿ ರೂಪಿಸುವುದು ತಮ್ಮ ಆದ್ಯತೆಯಾಗಿದೆ. ಅಧಿಕಾರಿಗಳು ಏನಾದರೂ ತೊಂದರೆಗಳಿದ್ದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸಬೇಕು. ಸಭೆಗೆ ಬರುವಾಗ ಸೂಕ್ತ ಅಂಕಿ-ಅಂಶಗಳೊಂದಿಗೆ ಹಾಜರಾಗಬೇಕು. ಜಿಲ್ಲೆ ಅಭಿವೃದ್ಧಿ ಒಬ್ಬರಿಂದ ಮಾತ್ರವೇ ಸಾಧ್ಯವಿಲ್ಲ. ಇಡೀ ಜಿಲ್ಲಾಡಳಿತ, ಜಿಪಂ, ಸಂಬಂಧಿತ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯ ಸಾಧಿಸಬೇಕೆಂಬುದು ಸಚಿವರು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

