ನಿರುದ್ಯೋಗಿಗಳಾದ ಸ್ಥಳೀಯ ಸಂಸ್ಥೆ ಸದಸ್ಯರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 18
ಸ್ಥಳೀಯ ಸಂಸ್ಥೆಗಳ ಸದಸ್ಯರು ಪಕ್ಕಾ ನಿರುದ್ಯೋಗಿಗಳಂತಾಗಿದ್ದಾರೆ. ಸದಸ್ಯರಾಗಿ ಆಯ್ಕೆಯಾಗಿ ಮೂರು ತಿಂಗಳು ಮಿಕ್ಕಿದ್ದರೂ ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ಇತರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಮೀಸಲಾತಿ ಪ್ರಕಟಿಸಿಲ್ಲ. ಪರಿಣಾಮ ವಾರ್ಡ್ನಲ್ಲಿ ಪ್ರಗತಿ ಕಾರ್ಯ ಕೈಗೊಳ್ಳಲಾಗದೇ ಸದಸ್ಯರು ದಿಕ್ಕೇ ತೋಚದಂತಾಗಿದ್ದಾರೆ.
ಹೌದು, ರಾಜ್ಯದ ಸ್ಥಳೀಯ ಸಂಸ್ಥೆಗಳ ಸದಸ್ಯರು ಕಳೆದ ಮೂರು ತಿಂಗಳಿನಿಂದ ಖಾಲಿ ಕುಳಿತಿದ್ದಾರೆ. ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬಳ್ಳಾರಿ, ಗುಲ್ಬರ್ಗಾ, ಮೈಸೂರ, ಮಂಗಳೂರು ಹಾಗೂ ಬೆಳಗಾವಿಯ 7 ಮಹಾನಗರ ಪಾಲಿಕೆ, 43 ನಗರಸಭೆ, 65 ಪುರಸಭೆ, 93 ಪಟ್ಟಣ ಪಂಚಾಯಿತಿಗೆ ಕಳೆದ ಮಾರ್ಚ್ 7 ರಂದು ಚುನಾವಣೆ ನಡೆದಿತ್ತು. ಮಾರ್ಚ್ 11ರಂದು ಫಲಿತಾಂಶವೂ ಹೊರಬಿತ್ತು. ಇದಾದ ಬಳಿಕ ನಡೆಯಬೇಕಿದ್ದಿದ್ದೇ ಮೇಯರ್-ಉಪಮೇಯರ್, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ. ಆದರೆ ಮೀಸಲಾತಿ ಪ್ರಕಟಿಸಲು ಅಂದಿನ ಬಿಜೆಪಿ ಸರ್ಕಾರ ಹಿಂದೇಟು ಹಾಕಿತು.
ಕಾಡಿದ ವಿಘ್ನ: ಅಷ್ಟರಲ್ಲಾಗಲೇ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಮೀಸಲಾತಿ ಪ್ರಕ್ರಿಯೆ ಮೊಟಕುಗೊಂಡಿತು. ಮೇ 5ರಂದು ವಿಧಾನಸಭೆ ಚುನಾವಣೆ ನಡೆದು 8ರಂದು ಫಲಿತಾಂಶವೂ ಹೊರಬಿತ್ತು. ಇದಾದ ಬಳಿಕ ನೂತನ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ರಚನೆ, ಆ ಬಳಿಕ ಅಧಿವೇಶನವೆನ್ನುತ್ತಾ ಈಗಾಗಲೇ ಮೂರು ತಿಂಗಳಿಗೂ ಹೆಚ್ಚು ಕಾಲ ಕಳೆದು ಹಾಕಿದೆ. ಆದಾಗಿಯೂ ಸರ್ಕಾರ ಮೀಸಲಾತಿ ಪ್ರಕಟಿಸುವಲ್ಲಿ ಹಿಂದೆಬಿದ್ದಿದೆ.
ಕಾಂಗ್ರೆಸ್ ಪಾರುಪತ್ಯ: ಗಮನಾರ್ಹ ಸಂಗತಿಯೆಂದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ 1960 ಸದಸ್ಯರು ಗೆಲುವು ಸಾಧಿಸಿದರೆ, ಬಿಜೆಪಿ 906, ಜೆಡಿಎಸ್ 905, ಕೆಜೆಪಿ-274, ಬಿಎಸ್ಆರ್-86 ಹಾಗೂ ಪಕ್ಷೇತರ 777 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ಸಿಗರೇ ಮೇಯರ್, ಅಧ್ಯಕ್ಷರಾಗಿ ಗದ್ದುಗೆ ಏರಲಿದ್ದಾರೆ. ಹೀಗಿದ್ದಾಗಿಯೂ ಸರ್ಕಾರ ಮೀಸಲಾತಿ ಪ್ರಕಟಿಸಲು ವಿಳಂಬ ಮಾಡುತ್ತಿರುವುದು ಆ ಪಕ್ಷದ ಸದಸ್ಯರೇ ಅಸಮಾಧಾನಕ್ಕೊಳಗಾಗುವಂತೆ ಮಾಡಿದೆ.
ಕ್ಯಾರೆ ಎನ್ನದ ಅಧಿಕಾರಿಗಳು: ಮೇಯರ್, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದಿರುವ ಪರಿಣಾಮ ಈವರೆಗೆ ಸಾಮಾನ್ಯಸಭೆ ನಡೆದಿಲ್ಲ. ಹೊಸ ಯೋಜನೆಗಳಂತೂ ಜಾರಿಗೆ ಬಂದಿಲ್ಲ. ಪರಿಣಾಮ ವಾರ್ಡ್ನಲ್ಲಿ ಹಳೆಯ ಕಾಮಗಾರಿಯ ಹೊರತಾಗಿ ಹೊಸ ಸದಸ್ಯರೂ ಏನನ್ನೂ ಮಾಡಿಲ್ಲ. ವಾರ್ಡ್ ಸಮಸ್ಯೆಗಳನ್ನು ಪರಿಹರಿಸಲು ಸದಸ್ಯರು ಅಧಿಕಾರವಿದ್ದರೂ ಶಕ್ತಿ ಹೀನರಾಗಿದ್ದಾರೆ. ವಾರ್ಡ್ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಅವರು ನೂತನ ಸದಸ್ಯರ ಮಾತಿಗೆ ಕ್ಯಾರೇ ಎನ್ನುತ್ತಿಲ್ಲ. ವಾರ್ಡ್ನಲ್ಲಿ ಜನರೆದುರು ಮುಖವೆತ್ತಿ ಓಡಾಡಲಾಗದೆ ತೊಂದರೆಗೆ ಸಿಲುಕಿದ್ದಾರೆ.
ಇಂಥ ಸಂದಿಗ್ಧ ಸ್ಥಿತಿಯಲ್ಲಿರುವ ಸದಸ್ಯರು ಸ್ಥಳೀಯ ಸಂಸ್ಥೆಗಳ ಮೇಯರ್, ಅಧ್ಯಕ್ಷರ ನೇಮಕಾತಿಯ ಮೀಸಲಾತಿ ಯಾವಾಗ ಹೊರ ಬೀಳಲಿದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಲ್ಲದೇ ಮೂರು ತಿಂಗಳ ಕೆಲಸವಿಲ್ಲದೇ ಕಳೆದು ಹೋಗಿದ್ದಕ್ಕೆ ಪರಿತಪಿಸುತ್ತಿದ್ದಾರೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

