ಧಾರವಾಡ

ಪ್ರಗತಿ ಪರಿಶೀಲನಾ ಸಭೆ ನಡೆಸದ ಸಚಿವ ಸೊರಕೆ

Published On :

ಹುಬ್ಬಳ್ಳಿ: ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಸೋಮವಾರ ನಡೆಯಬೇಕಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ಹುಸಿಯಾಯಿತು.
ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಇದೇ ಮೊದಲ ಬಾರಿಗೆ ಮಹಾನಗರಕ್ಕೆ ಆಗಮಿಸಿದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಹಲವಾರು ಸಮಸ್ಯೆಗಳ ನಿವಾರಣೆಗೊಳ್ಳಬಹುದೆಂದು ಅಂದಾಜಿಸಲಾಗಿತ್ತು. ಆದರೆ ಸಚಿವ ಸೊರಕೆ, ಪ್ರಗತಿ ಪರಿಶೀಲನಾ ಸಭೆ ನಡೆಸದೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಹೊರನಡೆದರು. ಪ್ರಗತಿ ಪರಿಶೀಲನಾ ಸಭೆ ಹಿನ್ನಲೆಯಲ್ಲಿ ಪಾಲಿಕೆ, ಜಲಮಂಡಳಿ, ಆರೋಗ್ಯ ಇಲಾಖೆ ಅಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ಣ ಸಿದ್ಧತೆಯೊಂದಿಗೆ ಸಭೆಗೆ ಆಗಮಿಸಿದ್ದರು. ಪಾಲಿಕೆಯಲ್ಲಿನ ವಿವಿಧ ಕಾಮಗಾರಿಗಳು, ಅವುಗಳಿಗೆ ತಗುಲಿದ ವೆಚ್ಚ, ಪ್ರಗತಿಯಲ್ಲಿರುವ ಕಾಮಗಾರಿ ಸೇರಿದಂತೆ ಹಲವಾರು ವಿಷಯಗಳ ಮಾಹಿತಿಯುಳ್ಳ ಪುಸ್ತಕಗಳನ್ನೂ ಪ್ರಕಟಿಸಲಾಗಿತ್ತು.
ನಗರಾಭಿವೃದ್ಧಿ ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸುವರೆಂಬ ಕಾರಣದಿಂದ ಪಾಲಿಕೆ ಅಧಿಕಾರಿಗಳು ಕಳೆದ ಐದಾರು ದಿನಗಳಿಂದ ಪೂರ್ವ ಸಿದ್ಧತೆ ನಡೆಸಿದ್ದರು.  ಸೋಮವಾರ ಸಂಜೆ 4ಕ್ಕೆ ಪ್ರಗತಿ ಪರಿಶೀಲನಾ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಚಿವ ಸೊರಕೆ ಅವರು ಪಾಲಿಕೆ ಕಚೇರಿಗೆ ಆಗಮಿಸಿದ್ದಾಗ ಸಂಜೆ 6 ದಾಟಿತ್ತು. ಪಾಲಿಕೆ ಆಯುಕ್ತರ ಕಚೇರಿ ಮೇಲ್ಭಾಗದ ಸಭಾ ಭವನಕ್ಕೆ ಆಗಮಿಸಿದ ಸಚಿವ ಸೊರಕೆ, ಮೊದಲ ಸಾಲಿನಲ್ಲಿ ಸಭೆಗಾಗಿ ಕಾಯುತ್ತ ಕುಳಿತಿದ್ದ ಅಧಿಕಾರಿಗಳನ್ನು ಹಿಂದಿನ ಸಾಲಿಗೆ ಸಾಗಹಾಕಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ 10-15 ನಿಮಿಷ ಮಾತನಾಡಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದತ್ತ ಹೆಜ್ಜೆ ಹಾಕಿದರು. ಅಲ್ಲಿಯೂ ಕಾಟಾಚಾರಕ್ಕೆನ್ನುವಂತೆ ಕೇವಲ 10-15 ನಿಮಿಷಗಳಲ್ಲಿ ಅವಸರದಲ್ಲಿಯೇ ಪ್ರಗತಿ ಪರಿಶೀಲನಾ ಸಭೆ ಪೂರ್ಣಗೊಳಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.