ಧಾರವಾಡ

ಮಳೆ ನಿಂತರೆ 2 ದಿನದಲ್ಲಿ ಕನ್ನಡಿಗರ ರಕ್ಷಣೆ

Published On :

ಕ.ಪ್ರ. ವಾರ್ತೆ, ಧಾರವಾಡ,  ಜೂ. 25-
'ಭೀಕರ ಜಲಪ್ರಳಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಎಲ್ಲ ಸೌಲಭ್ಯ ಒದಗಿಸಿದೆ. ಆಹಾರ, ಔಷಧಿ, ಹೆಲಿಕಾಪ್ಟರ್‌ಗಳಿದ್ದರೂ ಕನ್ನಡಿಗರ ರಕ್ಷಣೆಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ಎರಡು ದಿನ ಮಳೆ ನಿಂತರೆ ಸಾಕು ಪ್ರವಾಹದಲ್ಲಿ ಸಿಲುಕಿರುವ ಎಲ್ಲ ಕನ್ನಡಿಗರನ್ನೂ ರಕ್ಷಿಸುತ್ತೇವೆ.'
ಉತ್ತರ ಭಾರತದ ಭೀಕರ ಜಲಪ್ರಳಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಉತ್ತರಾಖಂಡಕ್ಕೆ ತೆರಳಿರುವ ಸಚಿವ ಸಂತೋಷ ಲಾಡ್ 'ಕನ್ನಡಪ್ರಭ'ಕ್ಕೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ನೀಡಿದ ಭರವಸೆಯಿದು.
ಉತ್ತರಾಖಂಡದ ಬದರಿನಾಥಕ್ಕೆ ಮಂಗಳವಾರ ತೆರಳಿದ ಸಂತೋಷ ಲಾಡ್, ಜನರು ಎದುರಿಸುತ್ತಿರುವ ಸಂಕಷ್ಟ, ಬದುಕಿಗಾಗಿ ನಡೆಸುತ್ತಿರುವ ಹೋರಾಟ, ಆಹಾರ ಹಾಗೂ ಔಷಧ ವಿತರಣೆ, ರಕ್ಷಣಾ ಕಾರ್ಯಕ್ಕೆ ತಡೆಯಾಗಿರುವ ಪ್ರತಿಕೂಲ ಪರಿಸ್ಥಿತಿ ಸೇರಿದಂತೆ ಹಲವಾರು ಸನ್ನಿವೇಶಗಳನ್ನು ವಿವರಿಸಿದರು. ಭೀಕರ ಪ್ರವಾಹದಲ್ಲಿ ಸಿಲುಕಿ ಜೀವಿಸುವ ವಿಶ್ವಾಸವನ್ನೇ ಕಳೆದುಕೊಂಡಿದ್ದ ಜನ ಒಂದೆಡೆಯಾದರೆ, ರಕ್ತದೊತ್ತಡ, ಮಧುಮೇಹದಂಥ ರೋಗಗಳ ಮಧ್ಯೆಯೂ ಬದುಕುವ ಆಶಯ ಹೊತ್ತ ನೂರಾರು ಜನ ಮತ್ತೊಂದೆಡೆ. ಅಪಾಯಕರ ಪರಿಸ್ಥಿತಿಯಲ್ಲಿ ಸಿಲುಕಿರುವ ಸಾವಿರಾರು ಜನರು ಬದುಕಿಗಾಗಿ ನಡೆಸುತ್ತಿರುವ ಹೋರಾಟದ ಸನ್ನಿವೇಶ ಗಡಸು ಹೃದಯದವರಲ್ಲಿಯೂ ಆತಂಕ, ಕನಿಕರಗಳನ್ನು ಸೃಷ್ಟಿಸುತ್ತದೆ.
ಪ್ರಕೃತಿ ವಿಕೋಪದ ಮಧ್ಯೆಯೂ ಪ್ರವಾಹಪೀಡಿತ ಕನ್ನಡಿಗರನ್ನು ರಕ್ಷಿಸುವ ಜವಾಬ್ದಾರಿ ಕರ್ನಾಟಕ ಸರ್ಕಾರ ತಮಗೆ ನೀಡಿದ್ದು, ಈ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ದಿಕ್ಕಿನಲ್ಲಿ ಈಗಾಗಲೇ ಹಲವಾರು ಹೆಜ್ಜೆಗಳನ್ನು ಇಡಲಾಗಿದೆ ಎಂದು ಹೇಳಿದರು.
ಮಾನಸಿಕ ಆಘಾತ: ಇದುವರೆಗೆ 160 ಕನ್ನಡಿಗರನ್ನು ಪ್ರವಾಹದಿಂದ ರಕ್ಷಿಸಿದ್ದು, ಅವರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ. ಸಿಕ್ಕಿ ಹಾಕಿಕೊಂಡವರಲ್ಲಿ ಹೆಚ್ಚಿನ ವೃದ್ಧರು ಹಾಗೂ ಮಧ್ಯ ವಯಸ್ಕರು ರಕ್ತದೊತ್ತಡ, ಮಧುಮೇಹಗಳಂಥ ರೋಗಗಳಿಂದ ನರಳುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮಾತ್ರೆಗಳಿಲ್ಲದೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ಆಹಾರದ ಪ್ಯಾಕೆಟ್, ಮಾತ್ರೆ-ಔಷಧಿಗಳನ್ನು ರವಾನಿಸಲಾಗಿದೆ. ರಕ್ಷಿಸಲ್ಪಟ್ಟಿರುವ ಪ್ರವಾಹಪೀಡಿತರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಕಾರ್ಯ ನಡೆದಿದೆ. ಪ್ರವಾಹದಿಂದ ರಕ್ಷಿಸಲ್ಪಟ್ಟವರು ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ. ಪ್ರವಾಹದಿಂದ ರಕ್ಷಿಸಲ್ಪಟ್ಟರೂ ಅವರಲ್ಲಿ ಮನೆ ಮಾಡಿದ ಭೀತಿ ಮರೆಯಾಗಿಲ್ಲ. ತಮ್ಮೆದುರೇ ನೀರು ಪಾಲಾದವರ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. ಪ್ರವಾಹದಿಂದ ಹೊರಬಂದರೂ ಆ ಘಟನೆಗಳು ಅವರ ಮನಕ್ಕೆ ಭಾರಿ ಆಘಾತ ನೀಡಿದೆ ಎಂದರು.
ಸದ್ಯಕ್ಕೆ ಆಹಾರ, ಔಷಧಿಗಳ ಕೊರತೆ ಇಲ್ಲ. ಹೆಲಿಕಾಪ್ಟರ್‌ನ ಕೊರತೆಯೂ ಇಲ್ಲ. ಎಲ್ಲ ಸೌಲಭ್ಯಗಳಿದ್ದರೂ ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಆಗುತ್ತಿಲ್ಲ ಎನ್ನುವ ಕೊರಗು ಕಾಡುತ್ತಿದೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಕಂಡು ಅವರ ರಕ್ಷಣೆಗೆ ಮನಸ್ಸು ತುಡಿಯುತ್ತದೆ. ಆದರೆ ಪ್ರಕೃತಿ ವಿಕೋಪದಿಂದ ಕೈಕಟ್ಟಿ ಕೂರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಯಾವುದೇ ಪರಿಸ್ಥಿತಿಯಲ್ಲಿಯೂ ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸದ ಹೊರತು ಇಲ್ಲಿಂದ ಕಾಲುತೆಗೆಯುವುದಿಲ್ಲ. ಸದ್ಯ ಜಲಪ್ರಳಯದಲ್ಲಿ ಸಿಲುಕಿಕೊಂಡವರ ರಕ್ಷಣೆಯೇ ನನ್ನ ಮೊದಲ ಗುರಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಗದಗ ಯಾತ್ರಾರ್ಥಿಗಳು ಸುರಕ್ಷಿತ: ಎಸ್ಪಿ
ಗದಗ:
ಜಿಲ್ಲೆಯಿಂದ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ 40ಕ್ಕೂ ಹೆಚ್ಚು ಜನರು ಸುರಕ್ಷಿತವಾಗಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಎಸ್ಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳದ ಗವಿದ್ದೇಶ್ವರ ಟ್ರಾವೆಲ್ಸ್ ಮೂಲಕ ಜಿಲ್ಲೆಯ ಜನರು ಉತ್ತರ ಭಾರತದ ಯಾತ್ರೆಗೆ ಹೋಗಿದ್ದು ನಿಜ. ಅವರು ಕೇದಾರನಾಥಗೆ ತೆರಳುವ ಪೂರ್ವದಲ್ಲಿಯೇ ಮಳೆ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ತಮ್ಮ ಪ್ರಯಾಣದ ದಾರಿಯನ್ನು ಬದಲಿಸಿದ್ದಾರೆ. ಈ ಕುರಿತು ಯಾತ್ರೆಗೆ ತೆರಳಿದವರನ್ನು ನಮ್ಮ ಇಲಾಖೆ ಸೋಮವಾರ ರಾತ್ರಿಯಿಂದಲೇ ಸಂಪರ್ಕಿಸಲು ಪ್ರಯತ್ನಿಸುತ್ತಿತ್ತು. ಮಂಗಳವಾರ ಬೆಳಗ್ಗೆ ಅವರ ಸಂಪರ್ಕ ಸಾಧ್ಯವಾಗಿದ್ದು, ಅವರೆಲ್ಲ ಪಂಜಾಬ್ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅವರ ದೂರವಾಣಿ ಸಂಪರ್ಕಕ್ಕೆ ಸಿಗದೇ ಇರುವ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು. ಅವರೆಲ್ಲ ಮಂಗಳವಾರ ಬೆಳಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದು, ನಮ್ಮ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಿಂಗಳ ವೇತನ ನೀಡಿ; ಸೋನಿಯಾ
ಬೆಂಗಳೂರು:
ಪ್ರವಾಹ ಸಂತ್ರಸ್ತ ಉತ್ತರಾಖಂಡ ರಾಜ್ಯದಲ್ಲಿ ಪರಿಹಾರ ಕಾರ್ಯಕ್ಕೆ ಸಹಕರಿಸಲು ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡುವಂತೆ ರಾಜ್ಯದ ಕಾಂಗ್ರೆಸ್ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸೂಚನೆ ನೀಡಿದ್ದಾರೆ. ಈ ಸಂಬಂಧ ಕೆಪಿಸಿಸಿಗೆ ಪತ್ರ ಮುಖೇನ ಆದೇಶ ನೀಡಿರುವ ಅವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ತಮ್ಮ ಒಂದು ತಿಂಗಳು ವೇತನ ನೀಡಬೇಕು. ಸಂಸದರು ಸಂಬಳದ ಜತೆಗೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ರು. 10 ಲಕ್ಷ ನೀಡಬೇಕು. ಇದನ್ನು ಡಿಡಿ ಮೂಲಕ ಎಐಸಿಸಿಗೆ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ.

ಸಂತ್ರಸ್ತರ ನೆರವಿಗೆ ಸಂರಕ್ಷಾ ಯೋಜನೆ: ಶ್ರೀ
ರಾಯಚೂರು:
ಪ್ರವಾಹದಿಂದ ತತ್ತರಿಸಿದ್ದ ಮಂತ್ರಾಲಯಕ್ಕೆ ಭೌತಿಕ ಶ್ರೀಮಂತಿಕೆ ತಂದುಕೊಟ್ಟ ಶ್ರೀಮಠದ ಆಡಳಿತವು ಈಗ ಉತ್ತರಾಖಂಡ ಪ್ರವಾಹ ಸಂತ್ರಸ್ತರ ನೆರವಿಗೆ ಮುಂದಾಗಿದೆ. ಎರಡು ಗ್ರಾಮಗಳ ದತ್ತು ಪಡೆಯುವಿಕೆ ಮತ್ತು ಪುನಸ್ಥಾಪನೆ ಜತೆಗೆ ಸಂತ್ರಸ್ತರಿಗೆ ತುರ್ತು ಅವಶ್ಯಕ ಸಾಮಗ್ರಿ ಪೂರೈಕೆ ಮತ್ತು ಪರಿಹಾರ ಕೈಗೊಳ್ಳಲು ನಿರ್ಧರಿಸಿದೆ.
ಮಂತ್ರಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಮಠದ ಕಿರಿಯ ಶ್ರೀಗಳಾದ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠವು ಇದುವರೆಗೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದವರ ನೆರವಿಗೆ ಮುಂದಾಗಿದೆ. ಅದರಂತೆ ಉತ್ತರಾಖಂಡದಲ್ಲಿ ಪ್ರವಾಹದಿಂದ ತತ್ತರಿಸಿರುವವರ ನೆರವಿಗಾಗಿ ಸಂರಕ್ಷಾ ಎಂಬ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಈಗಾಗಲೇ ಪರಿಹಾರ ಕಾರ್ಯದಲ್ಲಿ..: ಈಗಾಗಲೇ ಶ್ರೀಮಠವು ಪ್ರವಾಹ ಪರಿಹಾರ ಕಾರ್ಯಕ್ಕೆ ತೊಡಗಲು ಸಿದ್ಧತೆ ನಡೆಸಿದ್ದು ನವದೆಹಲಿಯ ಮಠದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಆಶ್ರಯ ನೀಡಿ ಊಟ, ವಸತಿ ಮತ್ತು ಅವರ ಊರುಗಳಿಗೆ ಪ್ರಯಾಣಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ಮಂತ್ರಾಲಯದ ಮಠವು ಕೈಗೊಳ್ಳುವ ನೆರವಿಗೆ ಉದಾರತೆಯಿಂದ ದೇಣಿಗೆ ಸಲ್ಲಿಸುವವರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

ಉತ್ತರಾಖಂಡ ಫ್ಲಡ್ ರಿಲೀಫ್ ಫಂಡ್
ವ್ಯವಸ್ಥಾಪಕರು,
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ.
ಸಂಪರ್ಕ ಸಂಖ್ಯೆಗಳು
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ನವದೆಹಲಿ- 011 26708642
ಶ್ರೀಪತಿ- 09440077284
ಜಿ. ಕಿಶನರಾವ್- 09492944316
ರಘುನಂದನ್- 09032714705

- ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.