ಧಾರವಾಡ

ಕಿಮ್ಸ್ನಲ್ಲಿ ಮಲ ಹೊರುವ ಕಾರ್ಮಿಕರು

Published On :

ಹುಬ್ಬಳ್ಳಿ: ಮೊದಲೇ ಹಲವಾರು ಹಗರಣಗಳು ಸುತ್ತಿಕೊಂಡಿರುವ ಕಿಮ್ಸ್ನಲ್ಲಿ ಪೌರ ಕಾರ್ಮಿಕರು ಮಲ ಸೇರಿದಂತೆ ಇತರ ತ್ಯಾಜ್ಯವನ್ನು ಹೊತ್ತು ಸಾಗಿಸಿದ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದ್ದರೂ ಪೌರ ಕಾರ್ಮಿಕರು ಕಿಮ್ಸ್ನಲ್ಲಿ ಯಾವುದೇ ಉಪಕರಣ ಹಾಗೂ ಕೈಗವಸು, ಬೂಟುಗಳ ಸಹಾಯವಿಲ್ಲದೇ ಬಕೆಟ್ಗಳಲ್ಲಿ ಮಲ, ಇತರ ತ್ಯಾಜ್ಯ ಶುಚಿಗೊಳಿಸಿದ್ದಾರೆ.
12 ಅಡಿ ಆಳದ ಗುಂಡಿ: ಕಳೆದ ಎರಡು ದಿನಗಳ ಹಿಂದೆ ಕಿಮ್ಸ್ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಕೊಳಚೆ ನೀರು ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಆಪರೇಷನ್ ಥಿಯೇಟರ್, ವಿವಿಧ ಪ್ರಯೋಗಾಲಯಗಳು, ವೈದ್ಯರ ಕೊಠಡಿಗಳ ಶೌಚಾಲಯಗಳ ತ್ಯಾಜ್ಯ ಆಸ್ಪತ್ರೆ ಹೊರಭಾಗದ 12 ಅಡಿ ಆಳದ ಗುಂಡಿ ಮೂಲಕ ಒಳಚರಂಡಿ ಸೇರುತ್ತದೆ. ಈ ತ್ಯಾಜ್ಯ ಮುಂದೆ ಹರಿದುಹೋಗದೇ ಅಲ್ಲಲ್ಲಿ ನಿಂತಿದ್ದರಿಂದ ತ್ಯಾಜ್ಯ ಸಾಗಿಸುವ ಕೆಲಸಕ್ಕೆ ಕಿಮ್ಸ್ ಆಡಳಿತ ಪೌರ ಕಾರ್ಮಿಕರನ್ನು ನೇಮಿಸಿತ್ತು. ಕಿಮ್ಸ್ನಲ್ಲಿ ಒಂದು ವರ್ಷದ ಹಿಂದೆ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಿದ್ದರೂ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಆಸ್ಪತ್ರೆಯಲ್ಲಿ ಶೌಚ ಗುಂಡಿಗಳನ್ನು ನಿರ್ಮಿಸಿ, ಅದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವ ಹೊಣೆಯನ್ನು ಬೆಂಗಳೂರು ಮೂಲದ ಕಂಪನಿಯೊಂದು ವಹಿಸಿಕೊಂಡಿತ್ತು. ಆದರೆ, ಶೌಚ ಗುಂಡಿ ನಿರ್ಮಿಸುವ ಕೆಲಸ ಅರ್ಧಕ್ಕೆ ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಶೌಚಾಲಯ ಸೇರಿದಂತೆ ಇತರ ತ್ಯಾಜ್ಯ ಸಂಗ್ರಹಿಸಿ ಸಾಗಿಸಲು ಅತ್ಯಾಧುನಿಕ ಉಪಕರಣಗಳಿದ್ದರೂ ಕಿಮ್ಸ್ನ ಸಂಬಂಧಿಸಿದ ಅಧಿಕಾರಿಗಳು ಇದರ ಉಪಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪೌರ ಕಾರ್ಮಿಕರ ಮೂಲಕ ವೈದ್ಯರ ಕೊಠಡಿಗಳ ಶೌಚ ಸೇರಿದಂತೆ ಇತರ ತ್ಯಾಜ್ಯ ಸ್ವಚ್ಛತೆಗೆ ಮುಂದಾಗಿರುವುದು ಸಾರ್ವಜನಿಕರ ಟೀಕೆಗೆ ಒಳಗಾಗಿದೆ.
ಸಚಿವರು ಸೂಚನೆ ನೀಡಿದ್ದರೂ: ಕೆಲ ದಿನಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಿಮ್ಸ್ಗೆ ಭೇಟಿ ನೀಡಿ, ವಾರ್ಡ್ಗಳಲ್ಲಿನ ತ್ಯಾಜ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ವಾರ್ಡ್ಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಸೇರಿದಂತೆ ಇತರ ಹಿರಿಯ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ನಂತರದ ದಿನಗಳಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಕಿಮ್ಸ್ ಆಡಳಿತ ಮಂಡಳಿ ಎಚ್ಚರಿಕೆಯ ಹೆಜ್ಜೆಗಳನ್ನೇನೋ ಇಟ್ಟರು. ಆದರೆ ಶೌಚಾಲಯ ಹಾಗೂ ಪ್ರಯೋಗಾಲಗಳ ಸ್ವಚ್ಛತೆಗೆ ಯಂತ್ರೋಪಕರಣಗಳನ್ನು ಬಳಸಿಕೊಳ್ಳುನಲ್ಲಿ ಎಡವಿತು. ವೈದ್ಯರ ಖಾಸಗಿ ಆಸ್ಪತ್ರೆಗಳ ಸೇವೆ, ಹೆರಿಗೆಗೆ ಲಂಚ ಸೇರಿದಂತೆ ಹಲವಾರು ಪ್ರಕರಣಗಳಿಂದಾಗಿ ಕಿಮ್ಸ್ ಈಗಾಗಲೇ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗಿದ್ದು, ಮಲ ಮತ್ತು ತ್ಯಾಜ್ಯವನ್ನು ಕಾರ್ಮಿಕರಿಂದ ಹೊತ್ತು ಹಾಕಿಸಿದ್ದು ಕಿಮ್ಸ್ನ ಪ್ರತಿಷ್ಠೆಗೆ ಮತ್ತಷ್ಟು ಮಸಿ ಬಳಿದಂತಾಗಿದೆ. ಕಿಮ್ಸ್ನಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಹಾಗೂ ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.


ಮುಚ್ಚಿ ಹಾಕುವ ಪ್ರಯತ್ನ
ಪೌರ ಕಾರ್ಮಿಕರ ಮೂಲಕ ಮಲ ಹಾಗೂ ಆಸ್ಪತ್ರೆಯ ಮತ್ತಿತರ ತ್ಯಾಜ್ಯ ಸ್ವಚ್ಛಗೊಳಿಸಿದ್ದನ್ನು ಮುಚ್ಚಿ ಹಾಕುವ ಪ್ರಯತ್ನ ಕಿಮ್ಸ್ ಆವರಣದಲ್ಲಿ ಸದ್ದಿಲ್ಲದೇ ನಡೆದಿದೆ. ತ್ಯಾಜ್ಯ ಹರಿಯುವ ಗುಂಡಿಗಳಲ್ಲಿ ಏಕಾಏಕಿ ವೇಗವಾಗಿ ನೀರು ಹರಿಬಿಡುವ ಮೂಲಕ ಉಳಿದುಕೊಂಡಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗಿದೆ. ಗುಂಡಿಯ ಪಕ್ಕ ಬಿದ್ದಿರುವ ತ್ಯಾಜ್ಯದ ಮೇಲೆ ಮಣ್ಣು ಹಾಕಿದ್ದು, ಮೇಲ್ನೋಟಕ್ಕೆ ಕಾಣದಂತ ಪ್ರಯತ್ನ ಮಾಡಲಾಗಿದೆ. ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ ಕಿಮ್ಸ್ನಲ್ಲಿ ನಡೆದ ಈ ಘಟನೆ ಬಗ್ಗೆ ಯಾವುದೇ ರೀತಿಯ ಗಮನ ನೀಡದಿರುವುದು ಹಲವಾರು ಶಂಕೆಗಳ ಉದ್ಭವಕ್ಕೆ ಕಾರಣವಾಗಿದೆ.


ಮಲ ಹೊರುವ ಪದ್ಧತಿಯನ್ನು ಸರ್ವೋಚ್ಚ ನ್ಯಾಯಾಲಯವೇ ನಿಷೇಧಿಸಿದೆ. ಆದರೂ ಕಿಮ್ಸ್ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಪೌರ ಕಾರ್ಮಿಕರು ಕಿಮ್ಸ್ನಲ್ಲಿ ಮಲ ಸೇರಿದಂತೆ ಇತರ ತ್ಯಾಜ್ಯವನ್ನು ಹೊತ್ತು ಸಾಗಿಸಿದ್ದಾರೆ. ಕಿಮ್ಸ್ ಅಧಿಕಾರಿಗಳು ಪೌರ ಕಾರ್ಮಿಕರ ಮೇಲೆ ನಡೆಸಿರುವ ದಬ್ಬಾಳಿಕೆಯೂ ಇದರಿಂದ ಬಹಿರಂಗಗೊಂಡಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಕ್ಷಣ ಕಿಮ್ಸ್ನಲ್ಲಿ ನಡೆದಿರುವ ಈ ಘಟನೆ ಬಗ್ಗೆ ತನಿಖೆ ನಡೆಸಬೇಕು. ಕಿಮ್ಸ್ನ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಿಮ್ಸ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು.
- ಅಮೃತ ಇಜಾರಿ, ಅಧ್ಯಕ್ಷರು, ಹುಬ್ಬಳ್ಳಿ ತಾಲೂಕು, ಕರ್ನಾಟಕ ರಕ್ಷಣಾ ವೇದಿಕೆ.


ಕಿಮ್ಸ್ನಲ್ಲಿ ಮಲ ಹಾಗೂ ಮತ್ತಿತರ ತ್ಯಾಜ್ಯವನ್ನು ಹೊತ್ತು ಸಾಗಿಸಿರುವ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎನ್.ಎಂ. ಅಂಗಡಿ ಅವರ ನೇತೃತ್ವದಲ್ಲಿ ತಂಡ ರಚಿಸಿರುವ ಜಿಲ್ಲಾಡಳಿತ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಗುರುವಾರ ಮಧ್ಯಾಹ್ನದೊಳಗೆ ವಿವರವಾದ ವರದಿ ನೀಡಲು ಸೂಚಿಸಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ವಿವರ ನೀಡಿದ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಮಲ ಹೊರದಂತೆ ಸುಪ್ರಿಂ ಕೋರ್ಟ್ ಆದೇಶವಿದ್ದರೂ ಕಿಮ್ಸ್ನಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ಈ ಘಟನೆ ನಡೆದಿರುವುದು ವಿಷಾದಕರ. ರಾಜ್ಯ ಸರ್ಕಾರವೂ ಈ ಕುರಿತು ಅನೇಕ ಬಾರಿ ಕಟ್ಟಪ್ಪಣೆ ಹೊರಡಿಸಿದೆ. ಜೊತೆಗೆ ಜಿಲ್ಲಾಡಳಿತದ ವತಿಯಿಂದಲೂ ತಿಳಿವಳಿಕೆ ನೀಡಲಾಗಿದೆ. ಆದರೂ ಕಿಮ್ಸ್ನಲ್ಲಿ ಕಾರ್ಮಿಕರು ಮಲ ಮತ್ತಿತರ ತ್ಯಾಜ್ಯವನ್ನು ಹೊತ್ತು ಸಾಗಿಸಿರುವ ವರದಿ ಖೇದನೀಯ. ಈಗಾಗಲೇ ತಾವು ಕಿಮ್ಸ್ ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅಂಥ ಯಾವುದೇ ಘಟನೆ ನಡೆದಿಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿವರವಾದ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಹೇಳಿದರು.
- ಸಮೀರ ಶುಕ್ಲಾ, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.