ಧಾರವಾಡ

ನಿಗಮ ಮಂಡಳಿ ನೇಮಕ ಜಿಲ್ಲಾಧ್ಯಕ್ಷರ ಕೈಯಲ್ಲಿ

Published On :

ನಿಗಮ-ಮಂಡಳಿ ಅಧ್ಯಕ್ಷರು ಸೇರಿದಂತೆ ಇತರ ಸಂಸ್ಥೆಗಳಿಗೆ ನಾಮ ನಿರ್ದೇಶಿತ ಸದಸ್ಯರ ಆಯ್ಕೆಯಲ್ಲಿ ಆಯಾ ಜಿಲ್ಲೆಗಳ ಅಧ್ಯಕ್ಷರು ಮಾಡುವ ಶಿಫಾರಸೇ ಅಂತಿಮ.
ಹೌದು, ಬಜೆಟ್ ಅಧಿವೇಶನ ಪೂರ್ಣಗೊಳ್ಳುವ ಬೆನ್ನಲ್ಲೇ ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರು, ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಎಪಿಎಂಸಿ ನಾಮನಿರ್ದೇಶಿತ ಸದಸ್ಯರ ನೇಮಕಾತಿ, ಕೆಎಂಎಫ್, ಎನ್ಜಿಇಎಫ್, ಕೋ ಆಪರೇಟಿವ್ ಸಂಸ್ಥೆಗಳಿಗೆ ನಿರ್ದೇಶಕರು, ಮಹಿಳಾ ಆಯೋಗದ ಸದಸ್ಯರು ಹಾಗೂ ನಿರ್ದೇಶಕರು ಸೇರಿದಂತೆ ವಿವಿಧ ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ.
ಆಯಾ ಜಿಲ್ಲೆ ಹಾಗೂ ಮಹಾನಗರಗಳ ವ್ಯಾಪ್ತಿಯಲ್ಲಿರುವ ನಿಗಮ-ಮಂಡಳಿ, ಸ್ಥಳೀಯ ಸಂಸ್ಥೆ, ಕೋ ಆಪ್ರೇಟಿವ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕಗೊಳಿಸಲಿದ್ದು, ನೇಮಕಗೊಳ್ಳುವ ವ್ಯಕ್ತಿಗಳ ಹೆಸರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ ಅಂತಿಮಗೊಳಿಸಲಿದ್ದಾರೆ.  ಈ ಮೊದಲು ಹೆಚ್ಚು ಪ್ರಭಾವ ಹೊಂದಿರುವ ರಾಜಕಾರಣಿಗಳು ಸರ್ಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಿ ನಿಗಮ-ಮಂಡಳಿಗಳ ಅಧ್ಯಕ್ಷ, ನಾಮ ನಿರ್ದೇಶಿತ ಸದಸ್ಯತ್ವ ಸೇರಿದಂತೆ ವಿವಿಧ ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಸ್ಥಳೀಯ ಆಡಳಿತದಲ್ಲಿ ನೇರವಾಗಿ ಮೂಗು ತೂರಿಸುವುದರಿಂದ ಹಿಂದೆ ಸರಿದಿದೆ. ಆಯಾ ಜಿಲ್ಲೆಗಳಲ್ಲಿನ ಜಿಲ್ಲಾಧ್ಯಕ್ಷರು, ಮಹಾನಗರ ಜಿಲ್ಲಾಧ್ಯಕ್ಷರು ಶಿಫಾರಸು ಮಾಡುವ ಹೆಸರುಗಳನ್ನೇ ಅಧ್ಯಕ್ಷ ಹಾಗೂ ನಾಮ ನಿರ್ದೇಶಿತ ಸದಸ್ಯತ್ವಕ್ಕೆ ಅಂತಿಮಗೊಳಿಸಲು ಸರ್ಕಾರ ನಿರ್ಧರಿಸಿದೆ.
ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ಮಹಾನಗರಗಳ ಮಹಾನಗರ ಜಿಲ್ಲಾಧ್ಯಕ್ಷರಿಗೆ ಈ ಕುರಿತು ಸೂಚನೆ ನೀಡಿದ್ದು, ನಿಗಮ-ಮಂಡಳಿ ಸೇರಿದಂತೆ ಇತರ ನೇಮಕಾತಿಗಳಿಗೆ ಜಿಲ್ಲಾಧ್ಯಕ್ಷರು ವ್ಯಕ್ತಿಗಳ ಆಯ್ಕೆಯಲ್ಲಿ ಕಾರ್ಯನಿರತರಾಗಿದ್ದಾರೆ.
ಚುನಾವಣೆಯಲ್ಲೂ ಅಧ್ಯಕ್ಷರಿಗೇ ಜವಾಬ್ದಾರಿ : ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಅಭ್ಯರ್ಥಿಗಳ ಆಯ್ಕೆಯ ಹೊಣೆಯನ್ನು ಕೆಪಿಸಿಸಿ ಜಿಲ್ಲಾಧ್ಯಕ್ಷರಿಗೆ ಒಪ್ಪಿಸಿತ್ತು. ಜಿಲ್ಲಾಧ್ಯಕ್ಷರು ಸಲ್ಲಿಸುವ ಅಭ್ಯರ್ಥಿಗಳ ಪಟ್ಟಿಗೆ ಕೆಪಿಸಿಸಿ ಹಸಿರು ನಿಶಾನೆ ತೋರಿತ್ತು. ಇದೀಗ ನಿಗಮ-ಮಂಡಳಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಆಯ್ಕೆಯ ಜವಾಬ್ದಾರಿಯನ್ನೂ ಕೆಪಿಸಿಸಿ ಆಯಾ ಜಿಲ್ಲೆಗಳ ಅಧ್ಯಕ್ಷರಿಗೇ ಹೊರಿಸಿದೆ. ಇದರಿಂದ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಒದಗಿಸಬಹುದೆಂಬ ಉದ್ದೇಶ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರಪ್ಪ ಅವರದ್ದು. ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಇತರ ಸಂಸ್ಥೆಗಳ ನಾಮನಿರ್ದೇಶಿಕ ಸದಸ್ಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಲ ನಿಯಮಗಳನ್ನು ಅನುಸರಿಸುವಂತೆ ಕೆಪಿಸಿಸಿ ಜಿಲ್ಲಾ ಅಧ್ಯಕ್ಷರಿಗೆ ಸೂಚನೆ ನೀಡಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸೋತಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಬಾರದು, ಚುನಾವಣೆ ಸಮೀಪವಿದ್ದಾಗ ಪಕ್ಷಕ್ಕೆ ಸೇರಿಕೊಂಡವರನ್ನು ಆಯ್ಕೆ ಮಾಡಬಾರದು, ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದಿರುವ ಅಥವಾ ಇನ್ನಿತರ ಚುನಾಯಿತ ಪ್ರತಿನಿಧಿಯಾಗಿದ್ದವರನ್ನೂ ಶಿಫಾರಸು ಮಾಡಬಾರದು, ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ಅಂಶಗಳು ಸೇರಿದಂತೆ ಹಲವಾರು ನಿಯಮಗಳ ಪಟ್ಟಿಯನ್ನು ಕೆಪಿಸಿಸಿ ಆಯಾ ಜಿಲ್ಲೆಗಳ ಜಿಲ್ಲಾಧ್ಯಕ್ಷರಿಗೆ ಕಳುಹಿಸಿದೆ.  ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ಜಿಲ್ಲೆ ಹಾಗೂ ಮಹಾನಗರಗಳ ಜಿಲ್ಲಾಧ್ಯಕ್ಷರು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಕೆಲ ಆಕಾಂಕ್ಷಿಗಳು ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಿ, ವಿವಿಧ ಸ್ಥಾನಗಳಿಗೆ ತಮ್ಮ ಹೆಸರು ಶಿಫಾರಸು ಮಾಡುವಂತೆ ಅರ್ಜಿ ಸಲ್ಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಜಿಲ್ಲಾಧ್ಯಕ್ಷರು ತಮ್ಮ ವ್ಯಾಪ್ತಿಯ ನಿಗಮ-ಮಂಡಳಿ ಹಾಗೂ ಇತರ ಸಂಸ್ಥೆಗಳ ಅಧ್ಯಕ್ಷರು ಮತ್ತು ನಾಮನಿರ್ದೇಶಿತರ ಹೆಸರನ್ನು ಕೆಪಿಸಿಸಿ ಹಾಗೂ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.