ಯಾರ್ಯಾರದೋ ಕೈಗೊಂಬೆ ಆಗಿ, ತಾಳಕ್ಕೆ ತಕ್ಕಂತೆ
ಹುಬ್ಬಳ್ಳಿ: ನಮ್ಮನ್ನಾಳುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಯಾವುದೇ ಕಾರಣಕ್ಕೂ ಮೈ ಮರೆಯಬಾರದು. ಹಾಗೊಂದು ವೇಳೆ ನಾವು ಮೈಮರೆತಿದ್ದೇ ಆದಲ್ಲಿ ಆತನ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಪರಿತಪಿಸಬೇಕಾಗುತ್ತದೆ. ಮತದಾರ ಕಂಡ ಕನಸು ಭಗ್ನವಾಗುತ್ತದೆ.
ಚುನಾವಣೆ ಎಂದರೆ ಸಮೃದ್ಧ ನಾಡು ನಿರ್ಮಿಸುವ ಹೊಸ ನಿರ್ಮಾತರನ್ನು ನೇಮಿಸುವ ಕಾರ್ಯ. ಈ ಕಾರ್ಯದಲ್ಲಿ ಸ್ವಲ್ಪ ಅಜಾಗರೂಕತೆ ತೋರಿದರೂ ಭವಿಷ್ಯದಲ್ಲಿ ನೂರೆಂಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಎಚ್ಚರದಿಂದ ಹೆಜ್ಜೆಯಿಡುವುದು ಅನಿವಾರ್ಯ.
ಕ್ಷೇತ್ರದ ಜ್ಞಾನವಿರಲಿ: ಸ್ಥಳೀಯ ಸಂಸ್ಥೆ ಚುನಾವಣೆಯೇ ಆಗಿರಲಿ ಅಥವಾ ಇನ್ನಾವುದೇ ಚುನಾವಣೆಯಾಗಿರಲಿ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಮತದಾರರು ಮೊಟ್ಟ ಮೊದಲು ಪರಿಶೀಲಿಸಬೇಕಾದದ್ದು, ಆತನಿಗೆ ತನ್ನ ಕ್ಷೇತ್ರದ ಬಗ್ಗೆ ಸಮಗ್ರ ಮಾಹಿತಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು. ಆಯಾ ಪ್ರದೇಶದಲ್ಲಿ ಏನೆಲ್ಲಾ ಕುಂದು ಕೊರತೆಗಳಿವೆ, ಯಾವೆಲ್ಲ ಕೆಲಸ ಕಾರ್ಯಗಳಾಗಿವೆ ಎಂಬ ಸ್ಪಷ್ಟ ಕಲ್ಪನೆ ಅಭ್ಯರ್ಥಿಗೆ ಇರಬೇಕು. ಹಾಗಿದ್ದಾಗ ಮಾತ್ರ ಆತ ಭವಿಷ್ಯದಲ್ಲಿ ಉತ್ತಮ ಕಾರ್ಯ ಮಾಡಲು ಸಾಧ್ಯ. ಕ್ಷೇತ್ರದ ಬಗ್ಗೆ ಜ್ಞಾನವೇ ಇಲ್ಲದಿದ್ದರೆ ಆತ ಅದ್ಹೇಗೆ ಜನ ಸೇವೆ ಮಾಡುತ್ತಾನೆ?
ಕೈಗೆಟುಕುವಂತಿರಬೇಕು: ನಾವು ಆಯ್ಕೆ ಮಾಡುವ ಜನಪ್ರತಿನಿಧಿ ಸಾಮಾನ್ಯ, ಸರಳವಾಗಿ ಕೈಗೆಟಕುವಂತಿರಬೇಕು. ಬಹುತೇಕ ಸದಸ್ಯರು ಚುನಾವಣೆಗೂ ಮುನ್ನ ಅಥವಾ ಮತ ಕೋರುವಾಗ ತಗ್ಗಿ ಬಗ್ಗಿ ನಡೆಯುತ್ತಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇ ತಡ, ಮತದಾರನ ಬಗ್ಗೆ ಕಾಳಜಿಯೂ ಕಡಿಮೆಯಾಗುತ್ತದೆ. ಕ್ಷೇತ್ರದ ಬಗ್ಗೆ ಕಾಳಜಿಯೂ ಇಲ್ಲವಾಗುತ್ತದೆ. ಸಮಸ್ಯೆ ಎಂದು ಹೇಳಿಕೊಂಡು ಬರುವವರನ್ನು ನಿರ್ಲಕ್ಷ್ಯದಿಂದ ಕಾಣುತ್ತಾರೆ. ಹೀಗಾಗಿ ತಕ್ಷಣಕ್ಕೆ ಸ್ಪಂದಿಸುವ ಸದಸ್ಯನನ್ನು ಆಯ್ಕೆ ಮಾಡಬೇಕು.
ಪಾಲ್ಗೊಳ್ಳುವಿಕೆ ಅಗತ್ಯ: ಸದಸ್ಯನಾಗಬೇಕಾದ ವ್ಯಕ್ತಿ ವಾರ್ಡ್ ಸೇರಿದಂತೆ ಸುತ್ತಮುತ್ತಲ ಜನರೊಂದಿಗೆ ಸೌಜನ್ಯದಿಂದ ಬೆರೆಯುವ ಗುಣವಿಶೇಷತೆ ಹೊಂದಿರಬೇಕು. ಸಭೆ, ಸಮಾರಂಭವಾಗಲಿ ಇನ್ನಿತರ ಅಭಿವೃದ್ಧಿ ಕಾರ್ಯದ ವಿಷಯದಲ್ಲೇ ಆಗಲಿ ಜಾತಿ, ಭೇದ ಮಾಡಬಾರದು. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಎಲ್ಲರನ್ನೂ ಸಮಾನ ದೃಷ್ಟಿಕೋನ ಹೊಂದಿರಬೇಕು.
ಮೂಲಸೌಕರ್ಯಕ್ಕೆ ಒತ್ತು: ಪಾಲಿಕೆ ಸದಸ್ಯ ಪ್ರಪ್ರಥಮವಾಗಿ ವಾರ್ಡ್ನ ಅಭಿವೃದ್ಧಿಗೆ ಒತ್ತು ನೀಡಬಹುದೋ ಇಲ್ಲವೋ ಎನ್ನುವುದರ ಬಗ್ಗೆ ಪರಿಶೀಲಿಸಬೇಕು. ಸದಸ್ಯನಾದವನು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಾರ್ಡ್ ಸದಸ್ಯನಿಂದ ಜನರು ಹೆಚ್ಚೇನೂ ನಿರೀಕ್ಷಿಸುವುದಿಲ್ಲ. ಈ ನಿಟ್ಟಿನಲ್ಲಾದರೂ ಸದಸ್ಯನಾದವನು ಪ್ರಾಮಾಣಿಕವಾಗಿ ಕೆಲಸ ಮಾಡುವಂತಿರಬೇಕು.
ಸಮಸ್ಯೆ ಪರಿಹರಿಸಲಿ: ವಾರ್ಡ್ನೊಂದಿಗೆ ಜನಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. ಪರಿಣಾಮ ಸಮಸ್ಯೆಯೂ ಹೆಚ್ಚುತ್ತಾ ಹೋಗುತ್ತದೆ. ಹೀಗಿದ್ದಾಗ ಈ ಸಮಸ್ಯೆಗಳನ್ನು ಪರಿಹರಿಸುವುದು ಸದಸ್ಯನ ಜವಾಬ್ದಾರಿ. ಇಂತಹ ಸಮಸ್ಯೆ ಪರಿಹರಿಸಲು ಪ್ರಾಮಾಣಿಕತೆ, ಕಳಕಳಿ ತೋರುವ ವ್ಯಕ್ತಿ ಆಯ್ಕೆ ಮಾಡಬೇಕು.
ನಗರದ ಆರೋಗ್ಯಕ್ಕೆ ಒತ್ತು: ನಗರದ ಸ್ವಾಸ್ಥ್ಯ ಕಾಪಾಡುವುದು ಸದಸ್ಯನ ಪ್ರಮುಖ ಕರ್ತವ್ಯ. ನಗರ ಆರೋಗ್ಯಯುತವಾಗಿ, ಸ್ವಚ್ಛತೆಯಿಂದಿರಿಸಿದರೆ ಮಾತ್ರ ನಗರದ ನಿವಾಸಿಗಳು ಆರೋಗ್ಯದಿಂದಿರುತ್ತಾರೆ. ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸಮಸ್ಯೆಯಾಗಿದ್ದು, ಇದನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟ ಮಾಹಿತಿಯುಳ್ಳ ಹಾಗೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಉಳ್ಳ ಸದಸ್ಯನನ್ನು ಆಯ್ಕೆ ಮಾಡಿದರೆ ಒಳಿತು.
ಕೈಗೊಂಬೆ ಬೇಕಿಲ್ಲ: ಪ್ರಸ್ತುತ ದಿನಮಾನದಲ್ಲಿ ಹೆಚ್ಚಿನ ಜನಪ್ರತಿನಿಧಿಗಳು ಯಾರದ್ದೋ ಕೈಗೊಂಬೆಗಳಾಗಿರುತ್ತಾರೆ. ಅವರು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಇದರ ವ್ಯತಿರಿಕ್ತ ಪರಿಣಾಮ ಅಭಿವೃದ್ಧಿ ಕಾಮಗಾರಿಗಳ ಮೇಲಾಗುತ್ತದೆ. ಹೆಚ್ಚಾನು ಹೆಚ್ಚು ಕಡೆಗಳಲ್ಲಿ ಹೆಂಡತಿಯ ಹೆಸರಲ್ಲಿ ಗಂಡ ರಾಜಕಾರಣ ಮಾಡುತ್ತಿರುತ್ತಾನೆ. ಇಂಥವರನ್ನು ಯಾವುದೇ ಕಾರಣಕ್ಕೂ ಮಣೆ ಹಾಕಬಾರದು.
ಭ್ರಷ್ಟರು ಬೇಡ: ನಾವು ಆಯ್ಕೆ ಮಾಡುವ ಸದಸ್ಯ ಯಾವುದೇ ಕಾರಣಕ್ಕೂ ಭ್ರಷ್ಟನಾಗಿರಬಾರದು. ಮತವನ್ನು ಹಣದಿಂದ ಖರೀದಿಸುವವನೂ ಆಗಿರಬಾರದು. ಹಣ ಕೊಟ್ಟು ಮತ ಖರೀದಿಸುವ ವ್ಯಕ್ತಿ ಮುಂದೊಂದು ದಿನ ಹಣಕ್ಕಾಗಿ ಮತದಾರರಿಗೆ ಮೋಸ ಮಾಡುವುದಿಲ್ಲ ಎನ್ನುವುದು ಯಾವ ಗ್ಯಾರಂಟಿ? ಹೀಗಾಗಿ ಭ್ರಷ್ಟಾಚಾರಿಗಳು ಅಧಿಕಾರಕ್ಕೆ ಬರದಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಮತದಾರರಿಗೆ. ಈ ವಿಷಯದಲ್ಲಿ ಮತದಾರರು ಜಾಗೃತಿ ವಹಿಸಲೇಬೇಕು.
ಸಮಾಜ ಘಾತುಕರನ್ನು ದೂರವಿಡಿ: ಸದಸ್ಯನಾಗುವ ವ್ಯಕ್ತಿ ಸಮಾಜ ಘಾತುಕನಾಗಿರಬಾರದು. ಸಮಾಜದ ಅಭ್ಯುದಯಕ್ಕೆ ಹೋರಾಡುವ, ಕೆಲಸ ಮಾಡುವ ಗುಣ ಹೊಂದಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಜಗಳ, ಹೊಟೆದಾಟ ಮಾಡುವವರು, ರೌಡಿಗಳು ಜನಪ್ರತಿನಿಧಿ ಪಟ್ಟಕ್ಕೇರುತ್ತಿರುವುದನ್ನು ಕಾಣುತ್ತಿದ್ದೇವೆ. ತಮ್ಮ ಕೆಟ್ಟ ಕಾಯದಿಂದ ಬಚಾವಾಗಲು ಖಾದಿ ಸೋಗು ಹಾಕಿಕೊಂಡಿರುತ್ತಾರೆ. ಇಂತವರು ನಮ್ಮ ಜನಪ್ರತಿನಿಧಿಗಳಾಗದಿರುವಂತೆ ನಿಗಾ ವಹಿಸಬೇಕು.
ವ್ಯಕ್ತಿಗೆ ಒತ್ತು ನೀಡಿ: ಸ್ಥಳೀಯ ಸಂಸ್ಥೆ ಚುನಾವಣೆ ವ್ಯಕ್ತಿಯಾಧಾರಿತವಾಗಿ ನಡೆಯುತ್ತದೆ. ಆತ ಯಾವ ಪಕ್ಷದಲ್ಲಿದ್ದಾನೆ ಎಂಬುದಕ್ಕಿಂತ ಮುಖ್ಯವಾಗಿ ಹೇಗಿದ್ದಾನೆ ಎಂಬ ಅಂಶದತ್ತ ಗಮನ ಹರಿಸಬೇಕು. ಆತ ವಾರ್ಡ್ನ ಅಭಿವೃದ್ಧಿಗೆ ಸೂಕ್ತ, ಸಜ್ಜನ, ಸಮಸ್ಯೆಗೆ ಸ್ಪಂದಿಸುವ ಮನೋಧರ್ಮ ಹೊಂದಿದ್ದಾನೆಂದರೆ ಅಂತಹ ವ್ಯಕ್ತಿಯನ್ನು ಖಂಡಿತವಾಗಿ ಆಯ್ಕೆ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

