ತಂದೆ-ಮಗನನ್ನು ಬೇರೆ ಮಾಡಿದ ಮತದಾರ ಪಟ್ಟಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 5
ಒಂದೇ ಮನೆ, ಒಂದೇ ಕುಟುಂಬ, ಆದರೆ, ಮತದಾನ ಮಾಡಬೇಕಾದ ವಾರ್ಡ್ಗಳು ಮಾತ್ರ ಬೇರೆ ಬೇರೆ. ಒಟ್ಟಿನಲ್ಲಿ ಮತದಾರರ ಪಟ್ಟಿ ತಂದೆ-ಮಗನನ್ನು ಬೇರೆ ಮಾಡಿದೆ.
ಇದು ಚುನಾವಣಾ ಆಯೋಗ ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿನ ಒಂದು ಅವಾಂತರವಷ್ಟೇ. ಇದಕ್ಕಿಂತ ಹೆಚ್ಚಾಗಿ ಅನೇಕರ ಹೆಸರುಗಳು ಎರಡೂ ವಾರ್ಡ್ಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಕಳೆದ ಹಲವಾರು ವರ್ಷಗಳಿಂದ 19ನೇ ವಾರ್ಡಿನಲ್ಲಿರುವ ಶಕ್ತಿನಗರದ ಹುಬ್ಬಳ್ಳಿ ಕುಟುಂಬವೀಗ, ಮತದಾರರ ಪಟ್ಟಿಯಲ್ಲಿ ಛಿದ್ರವಾಗಿದೆ. ತಂದೆ ಬಸಪ್ಪ ಹುಬ್ಬಳ್ಳಿ ಹಾಗೂ ತಾಯಿ ಗಿರಿಜಾ ಹುಬ್ಬಳ್ಳಿ 22ನೇ ವಾರ್ಡಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ, ಮಗ ಸಂಗಮೇಶ ಹುಬ್ಬಳ್ಳಿ 19ನೇ ವಾರ್ಡಿನಲ್ಲೇ ಉಳಿದುಕೊಂಡಿದ್ದಾರೆ. ಶಕ್ತಿನಗರ, ಡ್ರೈವರ್ಸ್ ಕಾಲೋನಿ ಹಾಗೂ ಬಂಡೆಮ್ಮ ವಸಾಹತುಗಳಲ್ಲಿ ಹತ್ತಾರು ಮತದಾರರ ಹೆಸರುಗಳು 19 ಹಾಗೂ 22ನೇ ವಾರ್ಡಿನಲ್ಲಿ ಕಾಣಿಸಿಕೊಂಡಿವೆ. ಆದ್ದರಿಂದ ಈ ಮತದಾರರು ಯಾವ ವಾರ್ಡ್ನಲ್ಲಿ ಮತ ನೀಡಬೇಕೆಂಬ ಗೊಂದಲದಲ್ಲಿದ್ದಾರೆ.
ಇನ್ನು, ಇದೇ ಸ್ಥಿತಿ 1ನೇ ವಾರ್ಡಿನಲ್ಲೂ ಇದೆ. ಈ ಮುಂಚೆ 1ನೇ ವಾರ್ಡಿನಲ್ಲಿ ವಿನಾಯಕ ನಗರ, ಚೈತನ್ಯ ನಗರ, ರೆವಿನ್ಯೂ ಕಾಲೋನಿ, ವಿಜಯಾನಂದ ನಗರದ ಸಾವಿರಾರು ಮತದಾರೀಗ 13ನೇ ವಾರ್ಡಿನ ಅಭ್ಯರ್ಥಿಗೆ ಮತ ನೀಡುವ ಸ್ಥಿತಿ. ಈ ಗೊಂದಲದಿಂದ ಮತದಾರರು ಮಾತ್ರವಲ್ಲದೇ, ಚುನಾವಣಾ ಸ್ಪರ್ಧಿಸಿದ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗೆ ಇನ್ನು 48 ಗಂಟೆಗಳು ಮಾತ್ರ ಬಾಕಿ. ಎಲ್ಲ ಅಭ್ಯರ್ಥಿಗಳು ಕೊನೆ ಕಸರತ್ತು ನಡೆಸಿದ್ದಾರೆ. ಇನ್ನು ಮತದಾರರು ಯಾರಿಗೆ ಮತ ನೀಡಬೇಕು ಅನ್ನೋದನ್ನ ಈಗಾಗಲೇ ನಿರ್ಧರಿಸಿಬಿಟ್ಟಿದ್ದಾರೆ. ಈ ಮಧ್ಯೆ ಈ ಗೊಂದಲ ಉಂಟಾಗಿದ್ದು, ಈ ಕುರಿತು ಮತದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಕೊಟ್ಟಿದ್ದಾರೆ. ಈ ಕುರಿತು 19ನೇ ವಾರ್ಡಿನ ಮತದಾರರ ಸತೀಶ ನಾಯ್ಕರ್ ಪತ್ರಿಕೆಯೊಂದಿಗೆ ಮಾತನಾಡಿ, ಪಾಲಿಕೆಯ ವಾರ್ಡ್ ನಕ್ಷೆಯಲ್ಲಿ 19ನೇ ವಾರ್ಡಿನಲ್ಲಿಯೇ ಇದ್ದೇವೆ. ಆದರೆ, ಮತದಾರರ ಪಟ್ಟಿಯಲ್ಲಿ ಮಾತ್ರ ಬದಲಾವಣೆಯಾಗಿದೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಎರಡೂವರೆ ತಿಂಗಳ ಹಿಂದೆಯೇ ಮತದಾರರ ಪಟ್ಟಿ ಪರಿಷ್ಕರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಈ ವೇಳೆ ಪಟ್ಟಿಯ ಬಗ್ಗೆ ಗೊಂದಲಗಳಿದ್ದರೆ, ಕೂಡಲೇ ದೂರು ನೀಡಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಮತದಾನದ ಸಂದರ್ಭದಲ್ಲಿ ಸಮಸ್ಯೆ ಹೇಳಿಕೊಂಡರೆ ಏನೂ ಮಾಡಲಾಗುವದಿಲ್ಲ ಎಂದು ಉತ್ತರಿಸಿದರು. ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

