ಧಾರವಾಡ

ನೊಂದವರಿಗೆ ನೆರಳಾದ ಮಹಾ ಮಾತೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 7
ಸಾಧಿಸುವ ಛಲ, ಪರಿಶ್ರಮ, ಮಾನಸಿಕ ದೃಢತೆ, ನಿಷ್ಠೆ ಇದ್ದರೆ ಸಾಧನೆಯ ಹಾದಿಯೇ ಹೂವಿನ ಹಾಸಿಗೆ. ಈ ಸಾಲಿನಲ್ಲಿ ನಿಲ್ಲುತ್ತಾರೆ ಧಾರವಾಡದ ಜಯಶ್ರೀ ಬೆಳಲದವರ.
ದುಡಿಯುವ, ಹಣ ಗಳಿಸುವ ಯಾವ ಅನಿವಾರ್ಯತೆಯೂ ಇವರಿಗಿರಲಿಲ್ಲ. ಪತಿ ವೃತ್ತಿಯಿಂದ ಎಂಜಿನಿಯರ್. ನೊಂದ ಮಹಿಳೆಯರಿಗೆ ಸಹಾಯದ ಹಸ್ತ ಚಾಚುವ ಉದ್ದೇಶದಿಂದ ಆರಂಭಗೊಂಡು, ಯಶಸ್ಸಿನ ಮೆಟ್ಟಿಲೇರುತ್ತ ಹತ್ತು ವರ್ಷದಲ್ಲಿ ಜಯಶ್ರೀ ಬೆಳಲದವರ ಓರ್ವ ಯಶಸ್ವಿ ಉದ್ಯಮಿ ಎನಿಸಿದ್ದು, 20 ಜನ ಅಸಹಾಯಕ ಮಹಿಳೆಯರಿಗೆ ಆಧಾರವಾಗಿದ್ದಾರೆ.
ಅದು ಮಾವಿನಕಾಯಿ ಬರುವ ಸಂದರ್ಭ. ಮಾರುಕಟ್ಟೆಗೆ ಹೋಗಿ ರು. 75 ಕೊಟ್ಟು ಮಾವಿನಕಾಯಿ ತಂದೇಬಿಟ್ಟರು. ಮಾವಿನಕಾಯಿ ಉಪ್ಪಿನಕಾಯಿ ತಯಾರಾಯ್ತು. ಕೆಲಸ ಕೇಳಿ ಬಂದ ಹೆಣ್ಮಕ್ಕಳು ಜೊತೆಯಾದರು. ರು. 100 ಬಂಡವಾಳದಿಂದ ಆರಂಭಗೊಂಡ ಉಪ್ಪಿನಕಾಯಿ ವ್ಯಾಪಾರ, ಪ್ರಸ್ತುತ ತಿಂಗಳಿಗೆ ಲಕ್ಷ ದಾಟಿದೆ.
ಜಯಶ್ರೀ ಮೂಲತಃ ಶಿರಸಿಯ ಹತ್ತಿರದ ಇಸಳೂರಿನವರು. ಮದುವೆಯಾಗಿ ಧಾರವಾಡಕ್ಕೆ ಬಂದು ನೆಲಸಿದವರು. ಉಪ್ಪಿನಕಾಯಿ ವ್ಯಾಪಾರದಿಂದ ಆರಂಭಗೊಂಡ ಇವರ ಪಯಣ ಮೆಣಸಿನಕಾಯಿ ಬಾಳಕ, ಸಂಡಿಗೆ ಮಾಡುವತ್ತ ಸಾಗಿತು. ವ್ಯಾಪಾರಕ್ಕೆ ಮಗಳು ವಿದ್ಯಾ ಕೈಜೋಡಿಸಿದಳು. ವ್ಯಾಪಾರದಿಂದ ಬಂದ ಲಾಭದಿಂದಲೇ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಖರೀದಿಸಿ ಉತ್ಪಾದನಾ ಪ್ರಮಾಣ ಹೆಚ್ಚಿಸಲಾಯಿತು. ಈಗ ಪ್ರತಿ ತಿಂಗಳು 50 ಟನ್ ಉಪ್ಪಿನಕಾಯಿ ಉತ್ಪಾದನೆಯಾಗುತ್ತಿದೆ. ಈ ಸಾಧನೆಯ ಹಾದಿಗೆ ತಗುಲಿದ್ದು ಬರೋಬ್ಬರಿ 10 ವರ್ಷ. ಈ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಅಸಹಾಯಕ ಮಹಿಳೆಯರು ಎನ್ನುವುದು ವಿಶೇಷ.
ಜಯಶ್ರೀ ಸಾಹಿತಿ ಹಾಗೂ ಪರಿಸರ ಪ್ರೇಮಿಯೂ ಹೌದು. ಓದಿದ್ದು ಕೇವಲ ಮುಲ್ಕಿ ಪರೀಕ್ಷೆ. ತಮ್ಮ ಅನುಭವಗಳನ್ನೇ ಅಕ್ಷರವಾಗಿಸಿ, ನಾವು ನಮ್ಮ ಮಕ್ಕಳು, ಜೇನು ಹನಿ, ದೊಡ್ಡಾಲದ ಮರ ಸೇರಿದಂತೆ 12 ಕೃತಿ ರಚಿಸಿದ್ದಾರೆ. ಜೊತೆಗೆ ಮನೆಯ ಮೇಲಿನ ಮಹಡಿಯಲ್ಲಿ 500 ರಿಂದ 600 ವಿವಿಧ ಬಗೆಯ ಕ್ಯಾಕ್ಟಸ್ ಗಿಡ ಬೆಳೆಸಿದ್ದಾರೆ.
ಪ್ರಸ್ತುತ ಮಹಿಳಾ ಪರ ಧ್ವನಿಗಳು ಸಮಾಜದಲ್ಲಿ ಎಷ್ಟೇ ಎದ್ದರೂ ಆಕೆಗೆ ಭದ್ರತೆ ಇಲ್ಲ. ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭ ಜಯಶ್ರೀ ಅವರಂಥವರು ಅಸಹಾಯಕ ಮಹಿಳೆಯರಿಗೆ ಪ್ರೇರಣೆಯಾದರೆ ಸಾಕು.
- ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.