ಮತದಾರ ಪಟ್ಟಿಯಲ್ಲಿ ಗೊಂದಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 7
ಸತ್ತಂವ್ ಬದುಕಿದ್ದ... ಬದುಕಿದಂವ್ ಸತ್ತಿದ್ದ..!
ಇದು ಮತದಾರರ ಪಟ್ಟಿಯಿಂದಾದ ಗೊಂದಲ. ಹೌದು, ಮಹಾನಗರ ಪಾಲಿಕೆಯ 67 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆ ಸಂದರ್ಭದಲ್ಲಿ ಇಂತಹ ನೂರಾರು ಉದಾಹರಣೆಗಳು ಬೆಳಕಿಗೆ ಬಂದವು. ಇದು ಚುನಾವಣಾ ಆಯೋಗ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯ ದಕ್ಷತೆಯನ್ನು ಅಣಿಕಿಸುವಂತಿತ್ತು.
ಬದುಕಿದಂವ್ ಸತ್ತಿದ್ದ!: ಚುನಾವಣಾ ಆಯೋಗ ತಯಾರಿಸಿಕೊಂಡಿದ್ದ ಯಾದಿಯಲ್ಲಿ ಸತ್ತ ವ್ಯಕ್ತಿಗಳು ಜೀವಂತವಾಗಿದ್ದರು. ಜೀವಂತವಾಗಿದ್ದವರು ಮೃತಪಟ್ಟಿದ್ದರು. ಇದು ಮತದಾರರ ಆಕ್ರೋಶಕ್ಕೆ ಕಾರಣವಾಯಿತು. ಮತದಾರರು ಮತದಾನದ ಗುರುತಿನ ಚೀಟಿ ಹೊಂದಿದ್ದರೂ ಸಿಬ್ಬಂದಿ ಕೊನೆಯವರೆಗೂ ಅವರಿಗೆ ಹಕ್ಕು ಚಲಾಯಿಸಲು ಅವಕಾಶ ಒದಗಿಸಿಕೊಡಲಿಲ್ಲ.
ಇದರಿಂದ ರೊಚ್ಚಿಗೆದ್ದ ಜನತೆ, ಮತಗಟ್ಟೆ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದು ಬಹುತೇಕ ಕಡೆಗಳಲ್ಲಿ ಕಂಡು ಬಂದಿತು. ವಾರ್ಡ್ ನಂ. 57ರಲ್ಲಂತೂ 600ಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಯಾದಿಯಿಂದ ಕೈಬಿಡಲಾಗಿತ್ತು. ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದ ಮತದಾರ, ಚುನಾವಣೆ ಗುರುತಿನ ಚೀಟಿ ಸೇರಿದಂತೆ ಮತ್ತಿತರ ಆವಶ್ಯಕ ದಾಖಲಾತಿ ಹೊಂದಿದ್ದರೂ ಮತ ಚಲಾಯಿಸಲು ಅವಕಾಶ ನೀಡಿದಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಇದೇ ರೀತಿ ಹಳೆಹುಬ್ಬಳ್ಳಿ ವ್ಯಾಪ್ತಿಯ ಪ್ರಿಯದರ್ಶಿನಿ ಕಾಲೇಜ್ನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿಯೂ ಬದುಕಿರುವ ಮತದಾರರನ್ನು ಸಾಯಿಸಲಾಗಿತ್ತು.
ವೀರಾಪುರ ಓಣಿಯ ಮತಗಟ್ಟೆ ಕೇಂದ್ರವೊಂದರಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಬಸಯ್ಯ ಹುಲಗೂರಮಠ ಸಾವನ್ನಪಿದ್ದಾರೆಂದು ಹೆಸರು ಡಿಲಿಟ್ ಮಾಡಲಾಗಿತ್ತು. ಇದರಿಂದ ಜನತೆ ಆಕ್ರೋಶ ವ್ಯಕ್ತಪಡಿಸಿ ಚುನಾವಣಾ ಆಯೋಗ, ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ರಸ್ತೆ ತಡೆ: ಹಳೆಹುಬ್ಬಳ್ಳಿ ಪ್ರದೇಶದ ವಾರ್ಡ್ ನಂ. 60ರಲ್ಲಿ ಸುಮಾರು 200ರಷ್ಟು ಮತದಾರರ ಹೆಸರನ್ನು ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಆರೋಪಿಸಿ ಮಾಜಿ ಉಪಮಹಾಪೌರ ಹಾಗೂ ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರ ಹಾಗೂ ಕಾರ್ಯಕರ್ತರು ದುರ್ಗದಬೈಲ್ನ ಮತಕೇಂದ್ರದ ಬಳಿ ರಸ್ತೆ ತಡೆ ನಡೆಸಿದರು.
ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿಯೇ ಈ ಭಾಗದ ಸುಮಾರು 175 ರಿಂದ 200 ಜನ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆ ನಂ. 5ರಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹಳ್ಳೂರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಿಳಿದಿರುವ ಸುದ್ದಿ ತಿಳಿಯುತ್ತಿದಂತೆಯೇ ಡಿಸಿಪಿ ಶಂಕರ ಎಸ್. ಪ್ರತಾಪನ್, ಕಸಬಾಪೇಟ ಠಾಣೆ ಇನ್ಸ್ಪೆಕ್ಟರ್ ಎಚ್.ಕೆ. ಪಠಾಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

