ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗುಂಪು ಘರ್ಷಣೆ
ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿ ನಗರದ ರಮೇಶ ಭವನದ ಪಕ್ಕದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಓರ್ವ ಗಂಭೀರ ಸ್ಥಿತಿಯಲ್ಲಿದ್ದಾನೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಸರು, ವಿಳಾಸ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸಿಪಿ ಎ.ಆರ್. ಬಡಿಗೇರ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿ ನಿಯಂತ್ರಿಸಿದರು. ಅಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಘರ್ಷಣೆಗೆ ಹಳೆಯ ದ್ವೇಷ ಕಾರಣ ಎಂದು ಹೇಳಲಾಗುತ್ತಿದ್ದರೂ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಪೊಲೀಸ್ ತನಿಖೆ ಬಳಿಕ ಬೆಳಕಿಗೆ ಬರಲು ಸಾಧ್ಯ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗವೇ ನಾಟಕ ಶಾಲೆ
ಧಾರವಾಡ: ಜಗವೇ ಒಂದು ನಾಟಕ ಶಾಲೆ. ಪ್ರತಿಯೊಂದು ಜೀವಿಯೂ ಅದರಲ್ಲಿ ಪಾತ್ರಧಾರಿಗಳು. ನಮ್ಮ ನಮ್ಮ ಬದುಕಿನ ಪಾತ್ರವನ್ನು ತಿದ್ದಿ ತೀಡಿಕೊಂಡು ಅಭಿನಯಿಸಿ ಬದುಕಲು ನಾಟಕ ಒಂದು ಉತ್ತಮ ಮಾಧ್ಯಮ ಎಂದು ಶಿಕ್ಷಣ ಇಲಾಖೆ ಸಹನಿರ್ದೇಶಕ ಸಿದ್ಧರಾಮ ಮನಹಳ್ಳಿ ಹೇಳಿದರು.
ಡೆ.ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಏರ್ಪಡಿಸಿದ್ದ ಮಕ್ಕಳ ನಾಟಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೋಧನೆಯು ಪರಿಣಾಮಕಾರಿಯಾಗಬೇಕಾದರೆ ಶಿಕ್ಷಕರಿಗೆ ನಾಟಕದ ಜ್ಞಾನ ಅವಶ್ಯ. ಆ ದಿಶೆಯಲ್ಲಿ ಶಿಕ್ಷಕರು ನಾಟಕಗಳ ಮೊರೆ ಹೋಗಬೇಕೆಂದು ಹೇಳಿದರು. ನಾಟಕೋತ್ಸವವನ್ನು ಉದ್ಘಾಟಿಸಿದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ, ಕಳೆದ ಹದಿನೇಳು ವರ್ಷಗಳಿಂದ ಪ್ರತಿಷ್ಠಾನ ಪಠ್ಯಾಧಾರಿತ ನಾಟಕೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ನಾಟಕ ತರಬೇತಿ ಶಿಕ್ಷಕರಿಗೆ ಅವಶ್ಯ. ಶಿಕ್ಷಣ ಇಲಾಖೆ ಶಿಕ್ಷಕರಿಗೆ ನಾಟಕ ತರಬೇತಿ ನೀಡಲು ಮುಂದಾದರೆ ಅಕಾಡೆಮಿ ಕೂಡಾ ಮುಂದಿನ ದಿನಮಾನಗಳಲ್ಲಿ ಕೈ ಜೋಡಿಸುವ ಭರವಸೆ ನೀಡಿದರು. ಡಯಟ್ ಉಪಪ್ರಾಚಾರ್ಯ ಎಂ.ಎಫ್. ಕುಂದಗೋಳ, ನಾಟಕೋತ್ಸವ ಸಂಯೋಜಕ ಕೆ.ಎಚ್. ನಾಯಕ ಮಾತನಾಡಿದರು. ಪ್ರತಿಷ್ಠಾನದ ಗೌರವ ನಿರ್ದೇಶಕ ಎಸ್.ಕೆ. ಕಲ್ಲಯ್ಯನವರ, ಕೆ. ಜಗುಚಂದ್ರ, ಹಿರಿಯ ಉಪನ್ಯಾಸಕ ಆರ್.ಎಚ್. ಶಿವಳ್ಳಿ, ನಿಂಗಣ್ಣ ಕುಂಟಿ, ರಾಮಚಂದ್ರ ಪಾಟಿ, ದತ್ತಿದಾನಿ ಸುಶೀಲಾ ದಾಸರ, ಎಂ.ಜೆ. ಚೆನ್ನಿ, ಪಿ.ಎನ್. ಜೋಶಿ, ಸುನಂದಾ ಬೆನ್ನೂರ, ಅರುಣ ಹುಯಿಲಗೋಳ, ವಿಠ್ಠಲ ಕೊಪ್ಪದ, ಸಿ.ಜಿ. ಹೊನ್ನಪ್ಪನವರ, ಸುಧಾಕರ ಮಾಳಗಿ ಇದ್ದರು. ನಂತರ ವಿವಿಧ ಸರ್ಕಾರಿ ಶಾಲಾ ಮಕ್ಕಳಿಂದ ಮಳಿ ಬೇಕ್ರಿ ಮಳಿ, ನಿಜವಾದ ಗೆಳೆತನ, ಹಕ್ಕಿ ಹಾಡು ಸ್ವರ್ಗದ ಕನಸು ನಾಟಕಗಳು ಪ್ರದರ್ಶನ ಕಂಡವು.
ಪ್ರತಿಭಟನಾ ಮೆರವಣಿಗೆ
ಹುಬ್ಬಳ್ಳಿ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಎನ್ಎಸ್ಯುಐ (ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ) ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಿಮ್ಸ್ನ ಗಾಂಧಿ ವೃತ್ತದಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೂ ಮೆರವಣಿಗೆಯಲ್ಲಿ ತೆರಳಿದ ವಿದ್ಯಾರ್ಥಿನಿಯರು, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಎಸ್ಎಸ್ಯುಐ ರಾಷ್ಟ್ರೀಯ ಪ್ರತಿನಿಧಿ ರಜತ ಉಳ್ಳಾಗಡ್ಡಿಮಠ, ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಅತ್ಯಾಚಾರಕ್ಕೊಳಗಾದವರಿಗೆ ಸಾಂತ್ವನ ಹಾಗೂ ಧೈರ್ಯ ನೀಡುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ದೂರಿದರು. ಎನ್ಎಸ್ಯುಐ ರಾಜ್ಯ ಪದಾಧಿಕಾರಿಗಳಾದ ತಾಯಪ್ಪ ಪವಾರ, ಸ್ವಾತಿ ಮಳಗಿ, ಜಿಲ್ಲಾ ಪದಾಧಿಕಾರಿಗಳಾದ ಕರಣ ಅಗ್ರವಾಲ, ಮಂಜೇಶ ಲೋಕರೆ, ಆಯಾಜ ಇಟಗಿ, ಹುಸೇನ ಹಾಜಿ ಹಾಜರಿದ್ದರು.
ಪರಿಹಾರ ನೀಡಲು ಆಗ್ರಹ
ಧಾರವಾಡ: ತಾಲೂಕಿನ ತಡಕೋಡದಲ್ಲಿ ಕಳೆದ ತಿಂಗಳು ಕಲುಷಿತ ನೀರು ಕುಡಿದು ಸಂಭವಿಸಿದ ವಾಂತಿ-ಭೇದಿಯಿಂದ ಮೂರು ವರ್ಷದ ಮಗು ಮನೋಜ್ ರವಳೋಜಿ ಹಾಗೂ 75ರ ವೃದ್ಧ ಅಲ್ಲಾಭಕ್ಷ ತೀರಿಕೊಂಡಿದ್ದು, ತಕ್ಕ ಪರಿಹಾರ ಕೊಡಬೇಕೆಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಹಾಗೂ ರೈತ ಕೃಷಿ ಕಾರ್ಮಿಕರ ಸಂಘಟನೆಗಳು ಹಾಗೂ ತಡಕೊಡ ಗ್ರಾಮದ ಜನತೆ ಜಿಲ್ಲಾಡಳಿತ ಒತ್ತಾಯಿಸಿವೆ. ಮಗು ಕಲುಷಿತ ನೀರು ಕುಡಿದು ತೀರಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಜನರನ್ನು ಗೊಂದಲಕ್ಕಿಡು ಮಾಡಿದ್ದಾರೇ, ಕಲುಷಿತ ನೀರಿನಿಂದಲೇ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಬಾಲಕನ ತಾಯಿ ಗೌರವ್ವ ರವಳೋಜಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಇಡೀ ಘಟನೆಯನ್ನು ವಿವರಿಸಿದ್ದಾರೆ. ಇದೀಗ ಆ ಮಹಿಳೆಯ ಕುಟುಂಬ ತೀವ್ರ ಬಡತನದಲ್ಲಿದ್ದು, ಕೂಡಲೇ ಜಿಲ್ಲಾಡಳಿತ ಪರಿಹಾರ ಧನ ಮಂಜೂರು ಮಾಡಬೇಕು. ಸಿಎಂ ಶೆಟ್ಟರ್ ವಾರದ ಹಿಂದೆಯೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಈವರೆಗೂ ಪರಿಹಾರವಿಲ್ಲ ಎಂದರು. ಗೌರವ್ವ ರವಳೋಜಿ, ಎಚ್.ಜಿ. ದೇಸಾಯಿ, ಮಲ್ಲವ್ವ ಬೋಸ್ಲೆ, ಬಾಳಪ್ಪ ಬೆಂಡಿಗೇರಿ, ಮಲ್ಲವ್ವ ಬೆಂಡಿಗೇರಿ, ಮಲ್ಲೇಶ ಮಾಳಗಿ, ಮಡಿವಾಳಪ್ಪ ಕುಸೋಜಿ, ಮಲ್ಲೇಶ ಕಟಗಿ ಮನವಿ ಈ ಸಂದರ್ಭದಲ್ಲಿದ್ದರು. ಮನವಿಪತ್ರ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಈ ಕೂಡಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕಳಿಸಿ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಕೇಳಿಕೊಳ್ಳುವುದಾಗಿ ಭರವಸೆ ನೀಡಿದರು.
ಅಪಘಾತ: ಓರ್ವ ಸಾವು
ಹುಬ್ಬಳ್ಳಿ: ದ್ವಿಚಕ್ರ ವಾಹನ ಹಾಗೂ ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ರಸ್ತೆ ಅಪಫಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಕುಸುಗಲ್ ಗ್ರಾಮದ ಇಮಾಮಸಾಬ ಬುದಗಿ ಎಂಬುವರೇ ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಇಷ್ಟಲಿಂಗ ಪೂಜೆ
ಧಾರವಾಡ: ರಾಷ್ಟ್ರೀಯ ಬಸವ ದಳ ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕ, ಅಕ್ಕಮಹಾದೇವಿ ಅನುಭಾವ ಜಂಟಿಯಾಗಿ ಮಹಾ ಶಿವರಾತ್ರಿ ಅಂಗವಾಗಿ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಮಾ. 10ರ ಬೆಳಗ್ಗೆ 8.30ಕ್ಕೆ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿದೆ.
ಮಹಿಳಾ ದಿನಾಚರಣೆ
ಕಲಘಟಗಿ: ಇಂದಿನ ಸಮಾಜದಲ್ಲಿ ಮಹಿಳೆಯರು ಕುಟುಂಬದ ಪರಿಧಿಯೊಳಗಿಂದ ಹೊರಗೆ ಬಂದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಎಲ್ಲ ಸೇವಾ ಸೌಲಭ್ಯಗಳ ಸದಾವಕಾಶವಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಾಚಾರ್ಯರಾದ ಎ.ಆರ್. ಗಾಣಿಗೇರ ಹೇಳಿದರು. ಶುಕ್ರವಾರ ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ಏರ್ಪಡಿಸಿದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆರ್.ಎಸ್. ದೇಶಪಾಂಡೆ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಂ. ಪುರದನಗೌಡ್ರ ಮಾತನಾಡಿದರು. ಕವಿ, ಪ್ರೊ. ಶಂಕರಗೌಡ ಸಾತ್ಮಾರ ವಿದ್ಯಾರ್ಥಿಗಳ ಬರಹವನ್ನು ಗಮನಿಸಿ, ಮೆಚ್ಚಿದರು. ಮಹಿಳಾ ಸಾಧಕರ ಕುರಿತು ಸುಭಾಷ ಚೌಹಾಣ ಉಪನ್ಯಾಸ ನೀಡಿದರು. ಮುಖ್ಯೋಪಾಧ್ಯಾಯ ಎಂ.ಎ. ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್. ಸುಣಗದ, ಪಿ.ಪಿ. ರಾಯ್ಕರ, ಎಸ್.ವೈ. ಜೆಟ್ಟೆಣ್ಣವರ, ಗುರುನಾಥ ಸಿದ್ರಾಮಣ್ಣವರ, ಜ್ಯೋತಿ ಮೇಟಿ ಭಾಗವಹಿಸಿದ್ದರು. ಕುಮಾರ್ ಭಟ್ ಸ್ವಾಗತಿಸಿದರು. ಎಂ.ಆರ್. ದೇಶಪಾಂಡೆ ನಿರೂಪಿಸಿದರು. ಎಂ.ಎಸ್. ಕಾಟೆ ವಂದಿಸಿದರು.
ಮಹಿಳೆ ಕಾನೂನು ಅರಿವು ಹೊಂದಿರಲಿ: ಸುಣಗಾರ
ಕಲಘಟಗಿ: ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎನ್. ಸುಣಗಾರ ಮಾತನಾಡಿದರು. ಅಧ್ಯಕ್ಷತೆಯನ್ನು ವಕೀಲ ಸಂಘದ ಅಧ್ಯಕ್ಷ ಮಂಜುನಾಥ ಚೌಧರಿ ವಹಿಸಿದ್ದರು.
ಹಿರಿಯ ವಕೀಲರಾದ ಜಿ.ಬಿ. ಕರ್ಲಟ್ಟಿ, ಬಿ.ವಿ. ಪಾಟೀಲ, ಎಸ್.ಜಿ. ಕುಲಕರ್ಣಿ, ಎ.ಟಿ. ಓಲೇಕಾರ, ಎಂ.ಕೆ. ಕಂಪ್ಲಿ, ಎಸ್.ಬಿ. ನೇಸರಗಿ, ಎಸ್.ಟಿ. ತೆಗ್ಗಿಹಳ್ಳಿ ಉಪನ್ಯಾಸ ನೀಡಿದರು. ವಿ.ಬಿ. ಶಿವನಗೌಡರ ಸ್ವಾಗತಿಸಿದರು. ಎಂ.ಎಸ್. ಧನಿಗೊಂಡ ನಿರೂಪಿಸಿದರು. ವಿ.ಎಂ. ಖಾನಾಪುರ ವಂದಿಸಿದರು.
ಆತ್ಮಬಲ ವೃದ್ಧಿಸಿಕೊಳ್ಳಿ
ಕಲಘಟಗಿ: ಎಲ್ಲ ರಂಗಗಳಲ್ಲಿ ಮಹಿಳೆಯರಿಗೆ ವಿಫುಲವಾದ ಅವಕಾಶಗಳಿದ್ದು, ಪ್ರಯತ್ನಶೀಲರಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದರಿಂದ ಆತ್ಮಬಲ ವೃದ್ಧಿಸಿ ಉತ್ತುಂಗಕ್ಕೆರಲು ಸಾಧ್ಯ ಎಂದು ಹಿರಿಯ ಉಪನೊಂದಣಾಧಿಕಾರಿ ಡಾ. ಪ್ರತಿಮಾ ಬಿಳೇಹಾಳ ನುಡಿದರು. ಸ್ಥಳೀಯ ಗುಡ್ನ್ಯೂಸ್ ಸ್ಕೂಲ್ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಸಂಸ್ಥೆಯ ರೇ.ಬ್ರ. ಹೃದಯ ಮೈಕಲ್ ವಹಿಸಿದ್ದರು. ಮಹಿಳಾ ವೇದಿಕೆ ಕಾರ್ಯಾಧ್ಯಕ್ಷೆ ಪ್ರೊ. ಶಾಂತಲಾ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಪ್ರೊ. ಎಂ.ಎಸ್. ಮುರುಗೋಢಮಠ, ಕಾಲೇಜು ಒಕ್ಕೂಟದ ಅಧ್ಯಕ್ಷೆ ಪ್ರೊ. ಅನಿತಾ ಭಟ್ ಇದ್ದರು.
ಡಾ. ವಿ.ಆರ್. ಬೆಟಗಾರ, ಪ್ರೊ. ಎಂ.ಪಿ. ಹಿರೇಮಠ, ಡಾ. ಬಿ.ಜಿ. ಬಿರಾದರ, ಪ್ರೊ. ಶಿವಯೋಗಪ್ಪ ಯಮ್ಮಿ, ಪ್ರೊ. ಜಿ.ಆರ್. ಸೂಳಿಬಾವಿ, ಎನ್.ಕೆ. ಚನ್ನಪ್ಪಗೌಡ ಇದ್ದರು. ಕುಮಾರಿ ಭಾರ್ಗವಿ ಪೂಜಾರ ಸ್ವಾಗತಿಸಿದರು. ದೀಪಾ ಸಾದರ ಕಾರ್ಯಕ್ರಮ ನಿರೂಪಿಸಿದರು. ಸುನಂದಾ ಲಮಾಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

