ಧಾರವಾಡ

ರೂಲ್ಸ್ ಬ್ರೇಕ್ ಮಾಡಿದ್ರೆ ಜೋಕೆ..!

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 9
ಮಹಾನಗರದ ಜನಗಳೇ... ಟ್ರಾಫಿಕ್ ಸಿಗ್ನಲ್ ಪಾಯಿಂಟ್ನಲ್ಲಿ ಪೊಲೀಸ್ ಸಿಬ್ಬಂದಿ ಕಾಣುತ್ತಿಲ್ಲ ಎಂದೇನಾದರೂ ಸಿಗ್ನಲ್ ಜಂಪ್ ಮಾಡಲು ಯತ್ನಿಸಿದರೆ ಜೋಕೆ...!
- ಸುಗಮ ಸಂಚಾರ ಹಾಗೂ ಅಪರಾಧ ಪ್ರಕರಣಗಳಿಗೆ ತಡೆಯೊಡ್ಡಲು ಮಹಾನಗರ ಪೊಲೀಸ್ ಇಲಾಖೆ ಅವಳಿ ನಗರದಾದ್ಯಂತ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಇದೀಗ ಹದ್ದಿನ ಕಣ್ಣಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಅಪರಾಧವೆಸಗಿ ಸಲೀಸಾಗಿ ಪಾರಾಗಲು ಯತ್ನಿಸಿದರೆ 'ದಂಡ-ಶಿಕ್ಷೆ' ಕಟ್ಟಿಟ್ಟ ಬುತ್ತಿ!
ಅವಳಿ ನಗರದ ಸುಮಾರು 150ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಇಲಾಖೆ ಅಳವಡಿಸಿದ್ದರಿಂದ ಮಹಾನಗರದಲ್ಲಿ ಸ್ವಲ್ಪ ಮಟ್ಟಿಗೆ ಸರಗಳ್ಳತನ, ಮನೆಗಳ್ಳತನ ಹಾಗೂ ಸರಗಳ್ಳತನದ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ. ಶೀಫ್ರದಲ್ಲೇ ಇನ್ನೂ 400-450 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ನೆಮ್ಮದಿಯಿಂದ ಬದುಕಲು ಅನುಕೂಲ ಮಾಡಿಕೊಡುವ ಸಿದ್ಧತೆಯಲ್ಲಿ ಇಲಾಖೆ ತೊಡಗಿಸಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ನೀವಿರುವಲ್ಲೇ ಎಫ್ಐಆರ್?: ಸಿಗ್ನಲ್ ಪಾಯಿಂಟ್ಗಳಲ್ಲಿ ಪೊಲೀಸ್ ಸಿಬ್ಬಂದಿ ಕಾಣುತ್ತಿಲ್ಲ ಎಂದೇನಾದರೂ ತಿಳಿದು ಸಿಗ್ನಲ್ ಜಂಪ್ ಮಾಡಿ ಹೋಗುವವರು ಸಿಸಿ ಕ್ಯಾಮೆರಾದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದ ಸ್ಥಳ, ದಿನಾಂಕ ಹಾಗೂ ವೇಳೆ ಎಲ್ಲವೂ ಈ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುತ್ತದೆ.
ಆದ್ದರಿಂದ, ಸಂಚಾರಿ ನಿಯಮ ಉಲ್ಲಂಫಿಸಿದವರು ತಾವು ಆ ಪ್ರದೇಶದಿಂದ ಹೋಗಿಯೇ ಇಲ್ಲ ಎಂದು ಅನ್ಯಥಾ ವಾದಿಸಲು ಸಾಧ್ಯವಾಗುವುದಿಲ್ಲ. ಇದು ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡಿದರೂ ಸುಗಮ ಸಂಚಾರ ವ್ಯವಸ್ಥೆ ದೃಷ್ಟಿಯಲ್ಲಿ ದಿಟ್ಟ ಹೆಜ್ಜೆಯೇ ಆಗಿದೆ.
ಮನಸ್ಸಿದ್ದಲ್ಲಿ ಮಾರ್ಗ: ಅಧಿಕಾರಿ ವರ್ಗ ಮನಸ್ಸು ಮಾಡಿದರೆ ಆಡಳಿತ ವ್ಯವಸ್ಥೆಯಲ್ಲಿ ಎಂತಹ ಸುಧಾರಣೆ ತರಲು ಸಾಧ್ಯ ಎಂಬುದಕ್ಕೆ ಮಹಾನಗರ ಪೊಲೀಸ್ ಇಲಾಖೆ, ಸಂಚಾರಿ ನಿಯಮ ಪಾಲನೆ ಹಾಗೂ ಅಪರಾಧ ತಡೆಗೆ ಕಂಡುಕೊಂಡಿರುವ ಮಾರ್ಗೋಪಾಯ ಜೀವಂತ ಸಾಕ್ಷಿ.
ಇದೇ ರೀತಿ ಸರಗಳ್ಳತನ, ಮನೆಗಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ನಾಗರಿಕ ಪೊಲೀಸರು ಹರಸಾಹಸಪಟ್ಟರೂ, ಇಂತಹ ಪ್ರಕರಣಗಳು ಸಂಭವಿಸಿದಾಗ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದ್ದ ಆಕ್ರೋಶ ಶಮನಗೊಳಿಸಲು ಸಾಧ್ಯವಾಗುತ್ತಿರಲಿಲ್ಲ.
ಇದೀಗ ಸಂಚಾರಿ ನಿಯಮ ಪಾಲನೆ ಹಾಗೂ ಕಳ್ಳಕಾಕರ ವಿರುದ್ಧ 'ಹದ್ದಿನ' ಕಣ್ಣಿರಿಸಲು ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಸಮಾಜಘಾತುಕ ಶಕ್ತಿಗಳು, ಕಳ್ಳಕಾಕರರು ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಜನರಲ್ಲಿ ಸಾಕಷ್ಟು ಭಯ ಮೂಡಿಸಿದ್ದಂತೂ ಸುಳ್ಳಲ್ಲ.
ಎರಡನೇ ರಾಜಧಾನಿಯಲ್ಲೇ: ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಲ್ಪಡುವ ಹು-ಧಾ ಮಹಾನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಮಹಾನಗರ ಪೊಲೀಸ್ ಕಮೀಷ್ನರೇಟ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮವಾಗಿಯಲ್ಲದೆ, ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಸಿಬ್ಬಂದಿಗೂ ಸಾಕಷ್ಟು ಅನುಕೂಲವಾಗಿದೆ.
150ಕ್ಕೂ ಹೆಚ್ಚು: ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಎಂದು ಪೊಲೀಸ್ ಇಲಾಖೆ ಗುರುತಿಸಿರುವ 150ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅವಳಿನಗರ ಒಟ್ಟು 600-700 ಪ್ರದೇಶಗಳಲ್ಲಿ ಈ ಕ್ಯಾಮೆರಾ ಅಳವಡಿಸುವ ಗುರಿ ಇಲಾಖೆ ಹೊಂದಿದೆ.
ಪ್ರತಿಯೊಂದು ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವುದು ಅಸಾಧ್ಯದ ಮಾತು. ಯಾವುದೊಂದು ಪ್ರದೇಶದಲ್ಲಿ ಅಪಘಾತವಾಗಲಿ ಅಥವಾ ಮತ್ತ್ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ ಈ ಸಿಸಿ ಕ್ಯಾಮೆರಾ ಮೂಲಕ ಪೊಲೀಸ್ ಸಿಬ್ಬಂದಿ ಕ್ಷಣಾರ್ಧದಲ್ಲಿ ಮಾಹಿತಿ ಪಡೆದು ಕಾರ್ಯೋನ್ಮುಖರಾಗಲು ಈ ತಂತ್ರಜ್ಞಾನ ಸಾಕಷ್ಟು ಪ್ರಯೋಜನಕಾರಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.