ಧಾರವಾಡ

ಮುನೇನಕೊಪ್ಪಗೆ ತೀವ್ರ ಹಿನ್ನಡೆ...

Published On :

ನವಲಗುಂದ ಮತ್ತು ಅಣ್ಣಿಗೇರಿ ಪುರಸಭೆಯ ಚುನಾವಣಾ ಫಲಿತಾಂಶ ಸೂಕ್ಷ್ಮವಾಗಿ ಗಮನಿಸಿದರೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಮಂದಿನ ವಿಧಾನಸಭಾ ಚುನಾವಣೆಗೆ ಇದು ಎಚ್ಚರಿಕೆ ಗಂಟೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ಎರಡು ಪುರಸಭೆಗಳಲ್ಲಿ ಸಾಕಷ್ಟು ಕೆಲಸಗಳಾದರೂ ಸಹ ಬಿಜೆಪಿ ಮುಗ್ಗರಿಸಿದ್ದು, ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಎರಡು ಪುರಸಭೆಯ 46 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಬರೀ 11 ಸ್ಥಾನಗಳಲ್ಲಿ ಮಾತ್ರ ಗೆಲವು ಸಾಧಿಸಿದ್ದು ಬಿಜೆಪಿಗೆ ತೀರಾ ಮುಖಭಂಗವಾಗಿದೆ. ಇನ್ನು, ಜೆಡಿಎಸ್‌ನ ಸಾಧನೆ ಹೆಚ್ಚೇನು ಹೇಳಿಕೊಳ್ಳುವಂತಿಲ್ಲ. ಆದರೆ, ಕಾಂಗ್ರೆಸ್‌ಗೆ ಮಾತ್ರ ಈ ಎರಡು ಪುರಸಭೆಗಳ ಫಲಿತಾಂಶ, ಬಯಸದೇ ಬಂದ ಭಾಗ್ಯ.

ಬಲ ತೋರದ ಕೆಜೆಪಿ: ಕುಂದಗೋಳ ಪಟ್ಟಣ ಪಂಚಾಯ್ತಿಯು ಶಾಸಕ ಎಸ್.ಐ. ಚಿಕ್ಕನಗೌಡ್ರ ಕೈಯಲ್ಲಿದ್ದರೂ ಸಹ ತಮ್ಮ ಬಲಾಬಲ ತೋರಲಾಗಲಿಲ್ಲ. ಕೆಜೆಪಿಯಿಂದ ಬರೀ ಎರಡು ಸ್ಥಾನಗಳು ಬಂದರೂ ಚಿಕ್ಕನಗೌಡ್ರು ಬಿಜೆಪಿಯು ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಅಡ್ಡಗಾಲು ಹಾಕಿದ್ದು ಮಾತ್ರ ನಿಜ. ಈ ಪಟ್ಟಣ ಪಂಚಾಯ್ತಿಯಲ್ಲೂ ಕಾಂಗ್ರೆಸ್ ಕೈ ಚಳಕ ತೋರಿದ್ದು, ಕೆಜೆಪಿ ಮುಖಂಡ ಚಿಕ್ಕನಗೌಡ್ರ ಮುಂದಿನ ಎಂಎಲ್‌ಎ ಚುನಾವಣೆಗೆ ಸಾಕಷ್ಟು ಕಸರತ್ತು ಮಾಡುವ ಅಗತ್ಯವಿದೆ.

ಮಣ್ಣು ಮುಕ್ಕಿದ ಬಿಜೆಪಿ: ಶಾಸಕ ಸಂತೋಷ ಲಾಡ್ ಅವರ ಕ್ಷೇತ್ರ ಕಲಘಟಗಿ ಹಾಗೂ ಅಳ್ನಾವರದಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ಒಟ್ಟು 28 ಸ್ಥಾನಗಳಲ್ಲಿ ಎರಡು ಸ್ಥಾನಗಳಲ್ಲಿ ಮಾತ್ರ ಗುದ್ದಾಡಿ ಗೆದ್ದಿದ್ದು, ಲಾಡ್ ಸಾಹೇಬ್ರು ಎರಡು ಕಡೆ ಕೈ ಚಳಕ ತೋರಿದ್ದಾರೆ. ಬಿಜೆಪಿ ಈ ಹಿಂದಿನಿಂದಲೂ ಈ ಎರಡು ಕ್ಷೇತ್ರಗಳಲ್ಲಿ ತೀರಾ ದುರ್ಬಲವಾಗಿದ್ದು, ಈ ಚುನಾವಣೆ ಫಲಿತಾಂಶ ನೋಡಿದರೆ ಇನ್ನೂ ದುರ್ಬಲವಾಗಿದೆ ಎನ್ನುವಂತಿದೆ. ಒಟ್ಟಿನಲ್ಲಿ ಜಿಲ್ಲೆಯ ಎರಡು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ಕಳಪೆ ಸಾಧನೆ ತೋರಿದ್ದು, ಜೆಡಿಎಸ್ ಸಮಾಧಾನ ಹಾಗೂ ಕಾಂಗ್ರೆಸ್ ಭರ್ಜರಿ ಬ್ಯಾಟಿಂಗ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.