ಪಿಎಚ್ಡಿ ಪದವಿ ಪ್ರದಾನ (ಸುದ್ದಿ ಸಂಕ್ಷೇಪ)
ಹುಬ್ಬಳ್ಳಿ: ಧಾರವಾಡದ ಎಸ್ಡಿಎಂ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ವ್ಯವಸ್ಥಾಪನಾ ಅಧ್ಯಯನ (ಎಂಬಿಎ) ಅಧ್ಯಯನ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮುಕುಂದ ಮುಂಡರಗಿ ಮಂಡಿಸಿದ ಪ್ರಬಂಧಕ್ಕೆ ಪುಣೆಯ ಭಾರತಿ ವಿದ್ಯಾಪೀಠ ಸ್ವಾಯತ್ತ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರದಾನ ಮಾಡಿದೆ. 'ಮೈಕ್ರೋ-ಫೈನಾನ್ಸಿಂಗ್ ಥ್ರೋ ಸೆಲ್ಫ್ ಹೆಲ್ಪ್ ಗ್ರುಪ್ಸ್ (ಎಸ್ಎಚ್ಜಿ) -ಬ್ಯಾಂಕ್ ಲಿಂಕೇಜ್-ಎ ಕೇಸ್ ಸ್ಟಡಿ ಅಫ್ ಧಾರವಾಡ ಡಿಸ್ಟ್ರಿಕ್ಟ್ ಇನ್ ಕರ್ನಾಟಕ' ವಿಷಯ ಕುರಿತು ಮುಕುಂದ ಪ್ರಬಂಧ ಮಂಡಿಸಿದ್ದರು. ಕೊಲ್ಲಾಪುರದ ಎಂಬಿಎ ಮಹಾವಿದ್ಯಾಲಯದ ನಿರ್ದೇಶಕ ಡಾ.ವಿ.ಎಂ. ಚವ್ಹಾಣ ಮಾರ್ಗದರ್ಶನ ನೀಡಿದ್ದರು.
ತೋಟಪ್ಪಗೌಡ ಆಯ್ಕೆ
ಹುಬ್ಬಳ್ಳಿ: ಹಿಂದೂ ಸಾದರು ಸಮಾಜ ಕುಂದಗೋಳ ತಾಲೂಕು ಬೆಟದೂರು ಗ್ರಾಮ ಘಟಕದ ಅಧ್ಯಕ್ಷರಾಗಿ ತೋಟಪ್ಪಗೌಡ ಪಾಟೀಲ ಆಯ್ಕೆಗೊಂಡಿದ್ದಾರೆ. ಘಟಕದ ಉಪಾಧ್ಯಕ್ಷರಾಗಿ ಅಂದಾನೆಪ್ಪ ಕೊಪ್ಪದ, ಕಾರ್ಯದರ್ಶಿಯಾಗಿ ಈಶ್ವರ ಕೊಪ್ಪದ, ಖಜಾಂಚಿಯಾಗಿ ಚನ್ನಪ್ಪ ಹಾದಿಮನಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ 17 ಜನ ಆಯ್ಕೆಗೊಂಡಿದ್ದಾರೆ.
11 ಹೊಸ ಬಸ್ಗಳಿಗೆ ಸಿಎಂ ಚಾಲನೆ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗಕ್ಕೆ ಪ್ರಸಕ್ತ ವರ್ಷ ಖರೀದಿಸಲಾದ 11 ಹೊಸ ಬಸ್ಗಳಿಗೆ ಸಿಎಂ ಜಗದೀಶ ಶೆಟ್ಟರ್, ಭಾನುವಾರ ಹಳೆಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು. ಪ್ರಸಕ್ತ ವರ್ಷ ಈ ವಿಭಾಗದಲ್ಲಿ ಖರೀದಿಸಲಾದ 50 ಬಸ್ಗಳ ಪೈಕಿ 11 ಬಸ್ಗಳನ್ನು ಸಾಂಕೇತಿಕವಾಗಿ ಸಿಎಂ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ವ್ಯವಸ್ಥಾಪಕ ನಿರ್ದೇಶಕ ಮನೋಜ ಜೈನ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಚಂದ್ರಕಾಂತ ಬೆಲ್ಲದ, ನಿಗಮ ಮಂಡಳ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ರಂಗಾ ಬದ್ದಿ, ಲಿಂಗರಾಜ ಪಾಟೀಲ, ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.
ನಾಳೆ ಖಾಲಿ ಗಾಡಾ ಓಡಿಸುವ ಸ್ಪರ್ಧೆ
ಹುಬ್ಬಳ್ಳಿ: ಅಮರಗೋಳ ಗ್ರಾಮದಲ್ಲಿ ಕೊಟ್ಟೂರ ಬಸವೇಶ್ವರ ದೇವಸ್ಥಾನದ ಕಟ್ಟಡದ ಸಹಾಯಾರ್ಥವಾಗಿ ಮಾ. 19ರಂದು ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಊರಿನ ಸ್ಟೇಷನ್ ರಸ್ತೆ ಪಕ್ಕದ ದೇಸಾಯಿ ಅವರ ಹೊಲದಲ್ಲಿ ಬೆಳಗ್ಗೆ 8ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದೆ. ಮೊದಲನೇ ಬಹುಮಾನ 15 ಗ್ರಾಂ ಬಂಗಾರ, ದ್ವಿತೀಯ 12 ಗ್ರಾಂ ಬಂಗಾರ, ತೃತೀಯ 6 ಗ್ರಾಂ ಬಂಗಾರ ಹೀಗೆ 21 ವಿವಿಧ ಬಹುಮಾನಗಳನ್ನು ನೀಡಲಾಗುವುದು. ಹೆಸರು ನೋಂದಾಯಿಸುವವರು ಮಾ. 19ರೊಳಗಾಗಿ ಪ್ರವೇಶ ಶುಲ್ಕ ಭರಿಸಬಹುದು. ಮಾಹಿತಿಗೆ ಮಂಜು ಲದ್ದಿ ಮೊ. 9448773892, ಚಂಬಣ್ಣ ಲದ್ದಿ ಮೊ. 9663421998, ಅಶೋಕ ಚಿಂಚಲಿ ಮೊ. 9880858347ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಮಹಿಳೆ ಮೃತದೇಹ ಪತ್ತೆ
ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಮೃತದೇಹ ಹಳೆಬಸ್ ನಿಲ್ದಾಣದ ಹಿಂಬದಿಯಲ್ಲಿ ಪತ್ತೆಯಾಗಿದೆ. ಮೃತಳನ್ನು ಸಲ್ಮಾ (50) ಎಂದು ಗುರುತಿಸಲಾಗಿದ್ದು, ಕಾಯಿಲೆಯಿಂದ ಬಳಲಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಮೃತಳು 5,4 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಅಗಲು ಹಣೆ, ಉದ್ದ ಮೂಗು, ಮೈಮೇಲೆ ಕೇಸರಿ-ಹಳದಿ ಬಣ್ಣದ ಸೀರೆ, ತಿಳಿ ಹಸಿರು ಬಣ್ಣದ ಬ್ಲೌಸ್ ಧರಿಸಿದ್ದಾಳೆ. ವಾರಸುದಾರರು ಇದ್ದಲ್ಲಿ ಉಪನಗರ ಪೊಲೀಸ್ ಠಾಣೆ ದೂ. ಸಂ. (0836) 2233517ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಮಹಿಳೆ, ಬಾಲಕಿ ಅಪಹರಣ
ಹುಬ್ಬಳ್ಳಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಬಾಲಕಿ ಅಪಹರಣಕ್ಕೊಳಗಾದ ಪ್ರಕರಣಗಳು ನಡೆದಿವೆ. ಇಲ್ಲಿಯ ನೇಕಾರ ನಗರದ ರೂಪಾ ಸಂಗಪ್ಪ ಚಿಮಣಿ (17) ಹಾಗೂ ಹಳೆ ಹುಬ್ಬಳ್ಳಿಯ ಪೂಜಾ ಎಂಬ ಮಹಿಳೆಯೇ ಅಪಹರಣಕ್ಕೊಳಗಾಗಿದ್ದಾರೆ. ಔಷಧಿ ತರಲು ಹೋದಾಗ ರೂಪಾಳನ್ನು ದುಷ್ಕಮಿಗಳು ಅಪಹರಿಸಿದ್ದಾರೆ ಎಂದು ಆಕೆಯ ಪಾಲಕರು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೂಜಾ ಎಂಬ ಮಹಿಳೆ ಮೂತ್ರ ವಿಸರ್ಜಿಸಲು ಹೋದಾಗ ಅಪಹರಿಸಲು ಹೋದಾಗ ಅಪಹರಿಸಲಾಗಿದೆ ಎಂದು ಸಂಬಂಧಿಕರು ದೂರಿದ್ದಾರೆ. ಕಸಾಪಪೇಟ, ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

