ಧಾರವಾಡ

ಮತ್ತೆ ಕಾಡುತ್ತಿದೆ ವಿದ್ಯುತ್ ಕಣ್ಣಾಮುಚ್ಚಾಲೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 17
ವಿದ್ಯುತ್ ಕಣ್ಣು ಮುಚ್ಚಾಲೆಯಾಟ ಮತ್ತೆ ಶುರುವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಇಲ್ಲದ ವಿದ್ಯುತ್ ಅಭಾವ ಈಗ ಎದುರಾಗಿದೆ!
ಚುನಾವಣೆ ನಿಮಿತ್ತ ಮತದಾರರ ಓಲೈಕೆಗೆ ಆಡಳಿತಾರೂಢ ಬಿಜೆಪಿ ಸರ್ಕಾರ ವಿದ್ಯುತ್ ಕೈಕೊಡದಂತೆ ನೋಡಿಕೊಂಡಿತು. ಆದರೂ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ಚುನಾವಣೆ ಮುಗಿಯುತ್ತಿದ್ದಂತೆ ಲೋಡ್ ಶೆಡ್ಡಿಂಗ್ ಭೂತ ಜನರ ಎದುರಿಗೆ ಪ್ರತ್ಯಕ್ಷವಾಗಿದೆ. ರಾಜ್ಯದ ವಿದ್ಯುತ್ ವಿತರಣಾ ಕೇಂದ್ರಗಳೂ ರಾಜಕೀಯ ಪಕ್ಷಗಳ ದಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಹೊಸತೇನಲ್ಲ.
ಚುನಾವಣೆ ಫಲಿತಾಂಶ ಕಂಡ ತಕ್ಷಣದಿಂದ ಲೋಡ್ ಶೆಡ್ಡಿಂಗ್ ಮಿತಿಮೀರಿದೆ. ಮೊದಲೇ ಬಿಸಿಲಿನ ತಾಪಕ್ಕೆ ಸಾಕಾಗಿ ಹೋದ ಜನತೆ ವಿದ್ಯುತ್ ಸಮಸ್ಯೆಯಿಂದ ಮತ್ತಷ್ಟು ರೋಸಿಹೋಗಿದ್ದಾರೆ. ಬೇಕಾಬಿಟ್ಟಿ ವಿದ್ಯುತ್ ಕಡಿತದಿಂದ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ, ಕೈಗಾರಿಕೆಗಳಿಗೆ ತೊಂದರೆಯಾಗಿದೆ.
ಪಿಯುಸಿ ಪರೀಕ್ಷೆಗಳು ಆರಂಭವಾಗಿದೆ. ಇಂತಹ ಸಮಯದಲ್ಲೂ ವಿದ್ಯುತ್ ಕಡಿತ ಬೇಕಿತ್ತಾ ಎಂಬ ಪ್ರಸ್ನೆ ಸಾರ್ವಜನಿಕರದ್ದು.  ಹೆಸ್ಕಾಂ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಗಲಲ್ಲಿ ಬರೀ ನಾಲ್ಕು ಗಂಟೆ ತ್ರೀಫೇಸ್ ವಿದ್ಯುತ್ ನೀಡುತ್ತಿದೆ. ಕೊಟ್ಟ ನಾಲ್ಕು ಗಂಟೆಯಲ್ಲೇ ಆಗಾಗ ವಿದ್ಯುತ್ ಕಡಿತ ಸಾಮಾನ್ಯ. ಗ್ರಾಮಗಳಲ್ಲಿ ಸಂಜೆ 7ಕ್ಕೆ ಅಥವಾ 8ಕ್ಕೆ ವಿದ್ಯುತ್ ಕಡಿತ ಮಾಡಲಾಗುತ್ತದೆ. ಒಂದೊಂದು ದಿನವಂತೂ ಗ್ರಾಮೀಣ ಜನ ಕತ್ತಲಲ್ಲೇ ಕಾಲ ಕಳೆಯಬೇಕಾದ ಸ್ಥಿತಿ. ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ, ಮೇಲಧಿಕಾರಿಗಳ ಆದೇಶದಂತೆ ಕೆಲಸ ನಿರ್ವಹಿಸುತ್ತಿದ್ದವೆ ಎಂಬ ಹಾರಿಕೆ ಉತ್ತರ ಸಿದ್ಧವಿರುತ್ತದೆ.
ವಿದ್ಯಾರ್ಥಿಗಳ ಗೋಳು: ಪಿಯುಸಿಯೊಂದಿಗೆ ಇನ್ನು ಶಾಲಾ-ಕಾಲೇಜುಗಳ ವಾರ್ಷಿಕ ಪರೀಕ್ಷೆಗಳೂ ಪ್ರಾರಂಭಗೊಂಡಿವೆ. ವಿದ್ಯಾರ್ಥಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದುವ ದಿನಗಳಿವು. ರಾತ್ರಿಯಿಡೀ ಅಧ್ಯಯನ ಅನಿವಾರ್ಯ. ಆದರೆ, ರಾತ್ರಿ ವೇಳೆ ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಚಿಂತೆ ಆವರಿಸಿದೆ. ಭವಿಷ್ಯ ನಿರ್ಧರಿಸುವ ಪರೀಕ್ಷಾ ಸಮಯದಲ್ಲೂ ಸಮರ್ಪಕವಾಗಿ ವಿದ್ಯುತ್ ನೀಡದಿರುವುದು ಸರ್ಕಾರದ ವೈಫಲ್ಯವೇ ಸರಿ.
ಸಂಜೆ ಹಾಗೂ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಚಿಮಣಿಗಳ ಮೊರೆ ಹೋಗಬೇಕಿದೆ. ಆದರೆ, ಚಿಮಣಿ ಬೆಳಕಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಅಕ್ಷರಗಳು ಸರಿಯಾಗಿ ಕಾಣುವುದಿಲ್ಲ. ಸೀಮೆಎಣ್ಣೆ ಸುಡುವುದರಿಂದ ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಆಗುತ್ತದೆ. ಇದು ಶ್ವಾಸಕೋಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ವಿದ್ಯಾರ್ಥಿಗಳ ಆರೋಗ್ಯ ಕೆಡಿಸುತ್ತದೆ.
ನಗರ ಪ್ರದೇಶದಲ್ಲಿ ವಿದ್ಯುತ್ ಅವಲಂಬಿತ ಅನೇಕ ವ್ಯಾಪಾರಗಳು ನಡೆಯುತ್ತವೆ. ಈಗ ವ್ಯಾಪಾರವೂ ಕಡಿಮೆ. ಆರ್ಥಿಕವಾಗಿ ಸಬಲರಿದ್ದವರು ಮಳಿಗೆಗಳಲ್ಲಿ ವಿದ್ಯುತ್‌ಗೆ ಪರ್ಯಾಯವಾಗಿ  ಬ್ಯಾಟರಿ, ಜನರೇಟರ್, ಉತ್ತಮ ಗುಣಮಟ್ಟದ ಯುಪಿಎಸ್ ಖರೀದಿಸಿ ಬಳಸುತ್ತಿದ್ದಾರೆ. ಇನ್ನು ವಿದ್ಯುತ್ ಅವಲಂಬಿತರದು ಅಧೋಗತಿ. ವಿದ್ಯುತ್ ಕಡಿತದ ಸಮಸ್ಯೆಗೆ ಯಾವಾಗ ಪರಿಹಾರ ಸಿಗುವುದೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ವರದಿ: ಕಲ್ಮೇಶ ಪಟ್ಟಣದವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.