ವಿಧಾನಸಭೆ ಚುನಾವಣೆ ಘೋಷಣೆ ರಾಜಕೀಯ ವಲಯದಲ್ಲಿ ಸಂಚಲನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 20
ಧುತ್ತೆಂದು ಎದುರಾಗಿರುವ ವಿಧಾನಸಭೆ ಚುನಾವಣೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಹೌದು, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಮುಗಿಸಿ ಈಗಷ್ಟೇ ನಿರಾಳವಾಗಿದ್ದ ರಾಜಕೀಯ ಪಕ್ಷಗಳ ಮುಖಂಡರು ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದರಿಂದ ನಿದ್ದೆಯಿಂದ ಎದ್ದಂತಾಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ವಿಧಾನಸಭೆ ಚುನಾವಣೆಯ ಕನವರಿಕೆಯಲ್ಲಿದ್ದವರಿಗೆ ಅನಿರೀಕ್ಷಿತವಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಬೇಕಾಯಿತು. ಅನಿವಾರ್ಯ ಅಗತ್ಯತೆ ಎನ್ನುವ ರೀತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯನ್ನು ಮುಗಿಸಿ ಸಮಾಧಾನಿಸಿಕೊಳ್ಳುತ್ತಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದರೂ ಅಧ್ಯಕ್ಷ-ಉಪಾಧ್ಯಕ್ಷ, ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಏತನ್ಮಧ್ಯೆ ಕೇಂದ್ರ ಚುನಾವಣಾ ಆಯೋಗ ದಿಢೀರನೆ ವಿಧಾನಸಭೆ ಚುನಾವಣೆ ಘೋಷಿಸಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ಬಿರುಗಾಳಿ ಎದ್ದಂತಾಗಿದೆ.
ಸಮಯದ ಅಭಾವ: ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾದ ಕಾಲದಲ್ಲಿಯೂ ರಾಜಕೀಯ ಪಕ್ಷಗಳಿಗೆ ಅತ್ಯಂತ ಕಡಿಮೆ ಕಾಲಾವಕಾಶ ನೀಡಲಾಗಿತ್ತು. ಹೀಗಾಗಿ ರಾಜಕೀಯ ಪಕ್ಷಕ್ಕೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು. ತರಾತುರಿಯಲ್ಲಿ ಚುನಾವಣಾ ಪ್ರಚಾರ ಇತ್ಯಾದಿ ಕಾರ್ಯವನ್ನು ಮುಗಿಸಿದ್ದವು. ಇದೇ ಸ್ಥಿತಿ ವಿಧಾನಸಭೆ ಚುನಾವಣೆಗೂ ಎದುರಾದಂತಿದೆ. ಎಲ್ಲ ರಾಜಕೀಯ ಪಕ್ಷಗಳ ಲೆಕ್ಕಾಚಾರದ ಪ್ರಕಾರ ಮೇ ತಿಂಗಳ ಅಂತ್ಯಕ್ಕೆ ಚುನಾವಣೆ ಎದುರಾಗಬಹುದೆಂದಿತ್ತು. ಆದರೆ, ಅನಿರೀಕ್ಷಿತ ಎಂಬಂತೆ ಮೇ 5ರಂದು ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಯಾವ ರಾಜಕೀಯ ಪಕ್ಷಗಳಿಗೂ ಹೆಚ್ಚಿನ ಸಮಯಾವಕಾಶ ಇಲ್ಲವಾದಂತಿದೆ.
ಮೇಲ್ನೋಟಕ್ಕೆ ಒಂದುವರೆ ತಿಂಗಳ ಕಾಲಾವಕಾಶವಿದ್ದರೂ ಚುನಾವಣಾ ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡರೆ ಈ ಸಮಯ ಯಾವುದಕ್ಕೂ ಸಾಲದು.
ನಾಮಪತ್ರ ಸಲ್ಲಿಕೆಗೆ ಏ. 17 ಕೊನೆಯ ದಿನವಾಗಿರುವುದರಿಂದ ಈ ಅವಧಿಯೊಳಗಾಗಿ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಬೇಕಾಗುತ್ತದೆ. ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವುದು ಪಕ್ಷಗಳ ಪಾಲಿಗೆ ಒಂದು ರೀತಿಯ ಪ್ರಸವ ವೇದನೆಯೇ ಸರಿ.
ಒಂದೇ ಹಂತ: ಕಳೆದ 2008ರ ವಿಧಾನಸಭೆ ಚುನಾವಣೆ ರಾಜ್ಯಾದ್ಯಂತ ಮೂರು ಹಂತದಲ್ಲಿ ನಡೆದಿತ್ತು. ಆದರೆ, ಈ ಭಾರಿ ಮೇ 5ರಂದು ಒಂದೇ ಹಂತದಲ್ಲಿ ನಡೆಯಲಿದೆ. ಒಂದು ವೇಳೆ ಮೂರು ಅಥವಾ ಎರಡು ಹಂತದಲ್ಲಿ ಚುನಾವಣೆ ನಡೆದಿದ್ದೇಯಾದರೆ ಅಭ್ಯರ್ಥಿಗಳಿಗೆ ಹಾಗೂ ಪಕ್ಷಗಳಿಗೆ ಒಂದಿಷ್ಟು ಹೆಚ್ಚು ಕಮ್ಮಿ ಕಾಲಾವಕಾಶ ಸಿಗುತ್ತಿತ್ತು. ಆದರೆ, ಇದಕ್ಕೆ ಚುನಾವಣಾ ಆಯೋಗ ಅವಕಾಶ ನೀಡಿಲ್ಲ.
ಕುತೂಹಲ ಮನೆ: ವಿಧಾನಸಭೆ ಚುನಾವಣೆ ದಿಢೀರನೆ ಎದುರಾಗಿರುವುದರಿಂದ ರಾಜಕೀಯ ಪಕ್ಷದಲ್ಲಿ ಸಂಚಲನ ಮೂಡಿಸಿದ್ದರೆ, ಮತದಾರ ವಲಯದಲ್ಲಿ ಕುತೂಹಲ ಮನೆ ಮಾಡಿದೆ. ಚುನಾವಣೆ ದಿನ ನಿಗದಿಯಾಗಿದ್ದೇ ತಡ ಅಲ್ಲಲ್ಲಿ ಚುನಾವಣೆಯ ಕುರಿತಾಗಿ ಚರ್ಚೆ ನಡೆದಿದೆ. ಚುನಾವಣೆ ದಿಢೀರನೆ ಘೋಷಣೆಯಾಗಿರುವುದರಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆ, ಯಾವ ಪಕ್ಷಕ್ಕೆ ಹಿನ್ನೆಡೆಯಾಗುತ್ತದೆ ಎಂಬಿತ್ಯಾದಿ ಕುತೂಹಲ ಭರಿತ ತರಹೇವಾರಿ ಚರ್ಚೆ ನಡೆದಿದೆ.
ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿ ಚುನಾವಣಾ ಆಯೋಗ ಮೇ ಮೊದಲ ವಾರದಲ್ಲಿ ಚುನಾವಣೆ ಘೋಷಣೆ ಮಾಡಿರುವ ಬೆನ್ನಲ್ಲೇ ವಿಧಾನಸಭೆ ಚುನಾವಣೆಗೆ ಧುಮುಕಲು ರಾಜಕೀಯ ಪಕ್ಷಗಳು ಅಣಿಯಾಗಿವೆ. ಹೋಳಿಯ ಹೊಸ್ತಿಲಲ್ಲೇ ಚುನಾವಣೆ ಘೋಷಣೆಯಾಗಿರುವುದರಿಂದ ಹೋಳಿಯ ರಂಗಿನೊಂದಿಗೆ ಚುನಾವಣೆಯ ರಂಗು ರಂಗಿನ ಆಟ ನೋಡುವ ಅವಕಾಶ ಮತದಾರರಿಗೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

