ಧಾರವಾಡ

6ನೇ ದಿನಕ್ಕೆ ಕವಿವಿ ಅತಿಥಿ ಉಪನ್ಯಾಸಕರ ಮುಷ್ಕರ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 21
ಕರ್ನಾಟಕ ವಿವಿ ಹಾಗೂ ಅಧೀನ ಕಾಲೇಜುಗಳ ಅತಿಥಿ ಹಾಗೂ ಸಹಾಯಕ ಉಪನ್ಯಾಸಕರ ಅನಿರ್ದಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಮುಂದುವರೆದಿದ್ದು ಗುರುವಾರ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಕಾಯಂ ಉಪನ್ಯಾಸಕರು ಇಲ್ಲದ ಸಂದರ್ಭ ಅತಿಥಿ ಹಾಗೂ ಸಹಾಯಕ ಉಪನ್ಯಾಸಕರನ್ನು ನೇಮಿಸಿ ಅವರಿಗೆ ಸೂಕ್ತ ವೇತನ ಕೊಡದೇ ಇರುವುದು ಸಮಂಜಸವಲ್ಲ. ಕಾಯಂ ಉಪನ್ಯಾಸಕರಂತೆ ದಿನಂಪ್ರತಿ ದುಡಿಯುವ ಇವರ ಬೇಡಿಕೆಗಳು ಪ್ರಸ್ತುತ. ಅವರ ಬೇಡಿಕೆಗಳನ್ನು ಕೂಡಲೆ ಕುಲಪತಿಗಳು ಈಡೇರಿಸಬೇಕು ಎಂದರು.
ವಿವಿಯ ಕೇಂದ್ರಬಿಂದುವಾಗಿ ಕುಲಪತಿಗಳು ಕೆಲಸ ಮಾಡುತ್ತಾರೆ. ವಿವಿಯ ಸಿಂಡಿಕೇಟ್ ಸದಸ್ಯರು ಕುಲಪತಿಗಳ ಮಾತಿಗೆ ಬೆಂಬಲ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಕುಲಪತಿಗಳು ಶೀಘ್ರ ವೇತನ ಹೆಚ್ಚಳದ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಹೊರಟ್ಟಿ ಒತ್ತಾಯಿಸಿದರು.
ಪ್ರತಿಭಟನಾ ನಿರತ ಉಪನ್ಯಾಸಕರ ಎಲ್ಲ ಸಮಸ್ಯೆಗಳನ್ನು ಆಲಿಸಿದ ಹೊರಟ್ಟಿ, ಶಿಕ್ಷಣ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಣಕಾಸು ಕಾರ್ಯದರ್ಶಿ ಅರವಿಂದ ಶ್ರೀವಾತ್ಸವ ಅವರಿಗೆ ದೂರವಾಣಿ ಮೂಲಕ ಬೇಡಿಕೆ ಪರಿಹರಿಸುವಂತೆ ಮನವಿ ಮಾಡಿದರು. ಅಲ್ಲದೇ, ರಾಜ್ಯದ ಹಲವಾರು ವಿವಿಗಳಲ್ಲಿನ ಅತಿಥಿ ಹಾಗೂ ಸಹಾಯಕ ಉಪನ್ಯಾಸಕರಿಗೆ ಕೊಡಮಾಡಲ್ಪಡುವ ವೇತನ ಸಮಂಜಸವಾಗಿದೆ. ಆದರೆ, ಕವಿವಿಯಲ್ಲಿ ಮಾತ್ರ ತೀರಾ ಕಡಿಮೆಯಾಗಿದೆ. ಇದಾವ ನ್ಯಾಯ ಎಂದು ಕುಲಪತಿಗಳಿಗೆ ದೂರವಾಣಿ ಮೂಲಕ ಪ್ರಶ್ನಿಸಿದರು.
ಕವಿವಿ ವಿಶ್ರಾಂತ ಕುಲಪತಿಗಳಾಗಿದ್ದ ಡಾ. ರಾಮೇಗೌಡ, ಡಾ.ಎ.ಎಂ. ಪಠಾನ ಇವರಿದ್ದಾಗ ತಾವು ಸಹ ಸಿಂಡಿಕೇಟ್ ಸದಸ್ಯರಾಗಿ ವಿವಿಯ ಸೇವೆ ಮಾಡಿದ್ದೇನೆ. ಆ ಸಂದರ್ಭ ಖುದ್ದಾಗಿ ಕುಲಪತಿಗಳಿಗೆ ಮನವರಿಕೆ ಮಾಡಿ ಮೂರು ಸಲ ತುರ್ತು ಸಿಂಡಿಕೇಟ್ ಸಭೆ ನಡೆಸಿ ವಿವಿ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ಉಪನ್ಯಾಸಕರು ಈಗೀನ ಸಿಂಡಿಕೇಟ್ ಸದಸ್ಯರಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳಬೇಕು. ಜೊತೆ ಜೊತೆಯಾಗಿ ಕುಲಪತಿಗಳು ಸಹ ಇದಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದರು.
ನೂತನ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಡಾ.ಜೆ. ಶ್ಯಾಮಸುಂದರ, ಡಾ.ಎಂ.ವೈ. ಬ್ಯಾಲಾಳ, ಎಚ್.ಎಸ್. ಸರ್ವಮಂಗಳ, ಡಾ.ರೇಣುಕಾ ಸುದರ್ಶನ, ರಾಜೇಶ್ವರಿ ಸಂಗೊಳ್ಳಿ, ಸೌಮ್ಯ ಆರ್., ಜರೀನಾ ಮುಗಳಗಿ, ಮಹ್ಮದ ರಫೀಕ್‌ನದಾಫ್, ಸಹಾನಾ ಶೆಟ್ಟಿ, ಪ್ರದೀಪ ಕಲ್ಲನಗೌಡರ, ವೀಣಾ ಹೊಳೆಯಣ್ಣವರ, ನಾಗರಾಜ ಮಾಲಿಪಾಟೀಲ, ಡಾ.ಸುಣಗಾರ, ಉಮೇಶ ಆರ್., ಡಾ.ರಾಮಕೃಷ್ಣ ಜಿ., ಡಾ. ಸುರೇಶ ವಾಲ್ಮೀಕಿ ಸೇರಿದಂತೆ ನೂರಾರು ಅತಿಥಿ ಸಹಾಯಕ ಉಪನ್ಯಾಸಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.