ತಾರಕಕ್ಕೇರಿದ ಅತಿಥಿ ಉಪನ್ಯಾಸಕರ ಮುಷ್ಕರ
ಧಾರವಾಡ: 8 ದಿನಗಳಿಂದ ಅವ್ಯಾಹತವಾಗಿ ನಡೆಸುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅಧೀನ ಮಹಾವಿದ್ಯಾಲಯಗಳ ಅತಿಥಿ ಹಾಗೂ ಸಹಾಯಕ ಉಪನ್ಯಾಸಕರ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರ ತಾರಕಕ್ಕೆ ಏರಿತು.
ವಿಶ್ವವಿದ್ಯಾಲಯದ ಉನ್ನತ ಆಧಿಕಾರಿಗಳು ಯಾವ ಕಾರಣಕ್ಕೂ ಮುಷ್ಕರ ನಿರತ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸದೇ ಇದ್ದ ಕಾರಣ ವೇದಿಕೆಯ ಎಲ್ಲ ಸದಸ್ಯರು ಸರದಿ ಉಪವಾಸ ಮಾಡುವುದಾಗಿ ನಿರ್ಣಯ ತೆಗೆದುಕೊಂಡರು. ಈ ಕುರಿತು ವಿವಿ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಕುಲಸಚಿವ ಪ್ರೊ. ಜಿ.ಬಿ. ನಂದನ ಅವರಿಗೆ ವೇದಿಕೆ ಅಧ್ಯಕ್ಷ ಡಾ. ಜೆ. ಶ್ಯಾಮಸುಂದರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ತಮ್ಮ ಬೇಡಿಕೆಗಳು ಈಡೇರುವ ತನಕ ಯಾವ ಕಾರಣಕ್ಕೂ ತಾವು ಮುಷ್ಕರವನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾನಿರತ ಉಪನ್ಯಾಸಕರು, ಸೋಮವಾರ ಮಾ. 25 ರಿಂದ ಮಾ.30ರ ವರೆಗೆ ಸರದಿ ಉಪವಾಸ ಹಾಗೂ ಏ.1ರಿಂದ ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ ನಿರ್ಣಯ ತೆಗೆದುಕೊಳ್ಳಲಾಯಿತು. ಮೊದಲ ದಿನದ ಸರದಿ ಉಪವಾಸ ಡಾ. ಮನೋಹರ ಪತ್ತಾರ ಹಾಗೂ ನಾಗರಾಜ ಪಾಟೀಲ ಅವರ ಮುಂದಾಳತ್ವದಲ್ಲಿ ನಡೆಯಲಿದೆ.
ಮನವಿ ಸ್ವೀಕರಿಸಿದ ಕುಲಸಚಿವ ಪ್ರೊ. ಜಿ.ಬಿ. ನಂದನ, ತಮ್ಮ ಬೇಡಿಕೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾನಿರತ ಉಪನ್ಯಾಸಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದು, ವಿಶ್ವವಿದ್ಯಾಲಯ ತಮಗೆ ವೇತನ ಕೊಡುತ್ತದೆ. ಇಲ್ಲಿ ಸರ್ಕಾರ ಯಾವ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ. ಸಿಂಡಿಕೇಟ್ ಸದಸ್ಯರ ಪರವಾನಗಿ ಮೇಲೆ ಕುಲಪತಿಗಳು ವೇತನ ಹೆಚ್ಚಳ ಮಾಡುವ ಬಗ್ಗೆ, 12 ತಿಂಗಳು ವೇತನ ಕೊಡುವ ಬಗ್ಗೆ ಹಾಗೂ ಸಂದರ್ಶನ ರದ್ದು ಮಾಡುವ ಕುರಿತು ಕೂಡಲೆ ತುರ್ತು ಸಿಂಡಿಕೇಟ್ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಎಸ್.ಪಿ. ಡಾಂಗಿ, ಸಿ.ಎಸ್. ಪಾಟೀಲ, ಇಂದಿರಾ ಕಟ್ಟಿ, ವಾಣಿ ಜೋಶಿ, ಡಾ. ಹಸೀನಾ ಬಾನು, ವಿಫುಲಾ ಮಹೇಂದ್ರಕರ, ಸುಮಂಗಲಾ, ಸರ್ವಮಂಗಳ, ಸೌಮ್ಯ ಕೆ., ಎಸ್.ಎಸ್. ಇಂಗಳಹಳ್ಳಿ, ಡಾ. ಎಂ.ವೈ. ಬ್ಯಾಲಾಳ, ಡಾ. ಶೈಲಾ ಅಮರಶೆಟ್ಟಿ, ಡಾ. ನೀಲಾಂಬಿಕಾ ಪಾಟೀಲ, ಡಾ. ನಾರಾಯಣಕರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

