ಬಿಜೆಪಿ ಪರ ಅಲೆ ಕಂಡು ಹತಾಶರಾದ ರಾಹುಲ್ ಗಾಂಧಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 1
ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯನ್ನು ಕಂಡು ಕಾಂಗ್ರೆಸ್ಸಿನ ಯುವ ಮುಖಂಡ ರಾಹುಲ್ ಗಾಂಧಿ ಹತಾಶರಾಗಿ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.
ಬುಧವಾರ ತಾಲೂಕಿನ ಹೆಬ್ಬಳ್ಳಿಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೀಮಾ ಮಸೂತಿ ಅವರ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಈವರೆಗೆ ನಡೆದ ಚುನಾವಣೆಗಳಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಕಾಲಿಟ್ಟಿದ್ದಾರೆ. ಅಲ್ಲೆಲ್ಲ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿದೆ. ಅವರು ರಾಜ್ಯದ ಇನ್ನಷ್ಟು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರೆ, ಇನ್ನು ಒಳ್ಳೆಯದೇ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರಾಹುಲ್ ಮೊದಲು ತಮ್ಮ ಪಕ್ಷದ ನೇತೃತ್ವದ ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನೆನಪು ಮಾಡಿಕೊಳ್ಳಲಿ. ನಿನ್ನೆಯಷ್ಟೇ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಯನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಸುಪ್ರಿಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿರುವುದನ್ನು ಇಷ್ಟು ಬೇಗ ಮರೆತು ಬಿಟ್ಟರೆ ಕೇವಲ 42ನೇ ವಯಸ್ಸಿನಲ್ಲಿಯೇ ರಾಹುಲ್ಗೆ ಮರುವಿನ ಕಾಯಿಲೆ ಅಂಟಿಕೊಂಡಿದೆಯೇ ಎಂದು ಜೋಶಿ ಲೇವಡಿ ಮಾಡಿದರು.
ನಮ್ಮ ಪಕ್ಷಗಳಲ್ಲಿ ಸಣ್ಣ ಪುಟ್ಟ ಆರೋಪಗಳು ಇರಬಹುದು. ಆ ಸಂದರ್ಭದಲ್ಲಿ ನಾವು ದಿಟ್ಟ ನಿಲುವನ್ನು ತೆಗೆದುಕೊಂಡಿದ್ದೇವೆ. ಲೋಕಾಯುಕ್ತ ವರದಿ ಬಂದಾಗ ಅದರಲ್ಲಿ ನಮ್ಮ ಮುಖ್ಯಮಂತ್ರಿ ಹೆಸರು ಕೇಳಿಬಂದು, ಕಳಂಕದ ಆರೋಪ ಎದುರಿಸುವವರು ಅಧಿಕಾರದಲ್ಲಿ ಇರಬಾರದೆಂದು ತಕ್ಷಣ ಅವರನ್ನು ಅಧಿಕಾರದಿಂದ ಕೆಳಗಿಸಿದ್ದೇವೆ. ಆದರೆ, ನೀವೇನು ಮಾಡಿದ್ದೀರಿ. 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿಯನ್ನು ರಕ್ಷಿಸಿದಿರಿ. ಕಲ್ಲಿದ್ದಲು ಹಗರಣದಲ್ಲಿ ಪ್ರಧಾನ ಮಂತ್ರಿಗಳನ್ನು ಸಹ ರಕ್ಷಿಸಲು ಯತ್ನಿಸಿದ್ದಿರಿ. ಹೀಗೆ ನಿಮ್ಮ ಮನೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ನಮ್ಮ ಮನೆಯಲ್ಲಿ ನೋಣ ಸತ್ತು ಬಿದ್ದಿರುವುದನ್ನು ಎತ್ತಿ ತೋರಿಸಲು ಹೊರಟಿದ್ದಿರಿ ಎಂದು ಕಾಂಗ್ರೆಸ್ ಮುಖಂಡರಿಗೆ ಮಾತಿನ ಮೂಲಕ ಚಾಟಿ ಬೀಸಿದರು.
ಬಿಜೆಪಿ ಕುರಿತು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಧನಂಜಯಕುಮಾರ ಮಾಡಿರುವ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿಲು ನಿರಾಕರಿಸಿದ ಜೋಶಿ, ನಾನು ಈ ಹಿಂದೆ ಹೇಳಿದಂತೆ ಅವರ ಯಾವುದೇ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ, ಅವರೊಬ್ಬ ಲೂಸ್ ಟಾಕ್ರ ಎಂದರು.
ಈಶ್ವರ ಶಿವಳ್ಳಿ, ಶಶಿ ಕುಲಕರ್ಣಿ, ಸುಮಂಗಲಾ ಕೌದೆಣ್ಣವರ, ಸಹದೇವ ಹಾವೇರಿ, ಹೂವಪ್ಪ ಅಸಂಗಿ, ಪಿ.ಎಸ್. ಸಾಗರ, ಕಲಂದರ ಮುಲ್ಲಾ, ಅರವಿಂದ ಏಗನಗೌಡರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

