ಚುನಾವಣೆ ಕರ್ತವ್ಯಕ್ಕೆ ಸಿದ್ಧರಾದ ನೌಕರರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 4
ಶನಿವಾರ ಬೆಳಗ್ಗೆ ಲ್ಯಾಮಿಂಗ್ಟನ್ ಸ್ಕೂಲ್ ಆವರಣ ಮತ್ತು ಗರ್ಲ್ಸ್ ಹೈಸ್ಕೂಲ್ ಆವರಣದತ್ತ ಕಣ್ಣು ಹಾಯಿಸಿದರೆ ಎಲ್ಲಿ ನೋಡಿದಲ್ಲಿ ಪೊಲೀಸ್ ಸಿಬ್ಬಂದಿ, ಸರ್ಕಾರಿ ನೌಕರರು. ಅಲ್ಲಲ್ಲಿ ಸಾಲುಗಟ್ಟಿ ನಿಂತಿರುವ ಬಸ್ಗಳು, ಮ್ಯಾಕ್ಸಿಕ್ಯಾಬ್ಗಳು.
ಮೇ 5ರಂದು ವಿಧಾನಸಭೆ ಚುನಾವಣೆಯ ಮತದಾನದ ಪ್ರಕ್ರಿಯೆಗೆ ನಿಯೋಜಿಸಿರುವ ಸಿಬ್ಬಂದಿ ಅಲ್ಲಲ್ಲಿ ನಿಂತುಕೊಂಡು ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿ ಪಡೆದುಕೊಂಡರು. ಮತದಾನ ವೇಳೆಯಲ್ಲಿ ವಿದ್ಯುನ್ಮಾನ ಯಂತ್ರ ಕೈಕೊಟ್ಟು ಮತದಾರರ ಆಕ್ರೋಶಕ್ಕೆ ತುತ್ತಾಗಬಾರದು ಎಂಬ ಉದ್ದೇಶದಿಂದ ಯಂತ್ರವನ್ನು ಕೂಲಂಕಷವಾಗಿ ಪರಿಶೀಲಿಸುವುದರ ಜೊತೆಗೆ ಶಾಯಿ, ಹೆಬ್ಬೆಟ್ಟು ಹಚ್ಚಲು ಇಂಕ್ ಪ್ಯಾಡ್ ಪರಿಶೀಲಿಸಿ ತಮಗೆ ನಿಗದಿಪಡಿಸಿದ ಬಸ್ನತ್ತ ತೆರಳಿದರು. ಕರ್ತವ್ಯಕ್ಕೆ ನಿಯುಕ್ತಿಯಾಗಿರುವ ಮಹಿಳಾ ಸಿಬ್ಬಂದಿ ತಮ್ಮ ಪತಿ ಮತ್ತು ಚಿಕ್ಕಮಕ್ಕಳೊಂದಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ತೀವ್ರ ನಿಗಾ ವೀಕ್ಷಕರು
ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಚುನಾವಣಾ ಆಯೋಗ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬ್ಯಾಂಕ್ ಸಿಬ್ಬಂದಿ, ಜೀವ ವಿಮಾ ನಿಗಮ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಎಲೆಕ್ಷನ್ ಡ್ಯೂಟಿಗೆ ಹಾಕುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಈ ಸರ್ಕಾರಿ ನೌಕರರು ಚುನಾವಣಾಧಿಕಾರಿ ಉಸ್ತುವಾರಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವುದಿಲ್ಲ ಬದಲಿಗೆ ಕೇಂದ್ರ ಚುನಾವಣಾ ಆಯೋಗದ ಸೂಕ್ಷ್ಮ ವೀಕ್ಷಕರಾಗಿ ಮೇ 5ರಂದು ನಡೆಯುವ ಮತದಾನದ ವೇಳೆ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಕುರಿತು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ಹು-ಧಾ ಸೆಂಟ್ರಲ್ ಕ್ಷೇತ್ರದ ಚುನಾವಣಾಧಿಕಾರಿ ವೈ.ಎಸ್. ಪಾಟೀಲ, ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ 100 ತೀವ್ರ ನಿಗಾ ವೀಕ್ಷಕರು (ಮೈಕ್ರೊ ಅಬ್ಸರ್ವರ್ಸ್) ನೇಮಕ ಮಾಡಲಾಗಿದ್ದು ಇದರಲ್ಲಿ ಏಳು ಸಿಬ್ಬಂದಿ ಮೀಸಲಾಗಿದ್ದರೆ ಉಳಿದವರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಚುನಾವಣಾ ಸಿಬ್ಬಂದಿ ರವಾನೆ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮೇ 5ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಂಡಿರುವ ಚುನಾವಣಾ ಆಯೋಗ ಶನಿವಾರ ಬೆಳಗ್ಗೆಯಿಂದಲೇ ವ್ಯವಸ್ಥಿತವಾಗಿ ಸಿಬ್ಬಂದಿಯನ್ನು ಆಯಾ ಮತಗಟ್ಟೆಗಳಿಗೆ ಕಳುಹಿಸಿಕೊಟ್ಟಿದೆ. ಸಿಬ್ಬಂದಿಯನ್ನು ರವಾನಿಸುವುದಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 23 ಬಸ್ಗಳು, 22 ಮ್ಯಾಕ್ಸಿ ಕ್ಯಾಬ್ಗಳನ್ನು ತೆಗೆದುಕೊಂಡಿದೆ. ಮತದಾನ ವ್ಯವಸ್ಥಿತವಾಗಿ ನಡೆಯುವುದಕ್ಕೆ 1200 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಕ್ಷೇತ್ರದಾದ್ಯಂತ 207 ಮತಗಟ್ಟೆ ಸ್ಥಾಪಿಸಲಾಗಿದೆ. 414 ವಿದ್ಯುನ್ಮಾನ ಮತ ಯಂತ್ರ ಬಳಕೆ ಮಾಡಲಾಗುವುದು. ಮತದಾನ ಪ್ರಕ್ರಿಯೆ ಮೇಲೆ ನಿಗಾವಹಿಸಲು 19 ವೀಕ್ಷಕರನ್ನು ನೇಮಕ ಮಾಡಲಾಗಿದ್ದು ಕ್ಷೇತ್ರದ 19 ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ತಹಸೀಲ್ದಾರ್ ಬಿ. ಫರ್ನಾಂಡಿಸ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಮತದಾನ ಪ್ರಕ್ರಿಯೆಗೆ 856 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಮತಗಟ್ಟೆಗಳಿಗೆ ಸಿಬ್ಬಂದಿ ಕಳುಹಿಸಲು 19 ಬಸ್ಗಳು ಮತ್ತು 21 ಮ್ಯಾಕ್ಸಿಕ್ಯಾಬ್ಗಳನ್ನು ಬಳಸಿಕೊಳ್ಳಲಾಗಿದೆ. ಮತದಾನ 164 ಮತಗಟ್ಟೆಗಳಲ್ಲಿ ನಡೆಯಲಿದ್ದು ಚುನಾವಣಾ ಅಕ್ರಮ ತಡೆಯುವುದಕ್ಕೆ 6 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

