ಕೈ ಕೊಟ್ಟ ಮತಯಂತ್ರ
ಧಾರವಾಡ: ವಿಧಾನಸಭಾ ಚುನಾವಣೆಯ ಮತದಾನ ದಿನ ಭಾನುವಾರ ಬೆಳಗ್ಗೆ ಹು-ಧಾ ಪಶ್ಚಿಮ ಕ್ಷೇತ್ರದ ಕೆಲವು ಬೂತ್ಗಳಲ್ಲಿ ಮತ ಹಾಕುವ ಯಂತ್ರ ಕೆಲ ಹೊತ್ತು ಕೈ ಕೊಟ್ಟಿತ್ತು. ವಾರ್ಡ್ ನಂ. 14ರ ವನವಾಸಿ ರಾಮಮಂದಿರ 127ನೇ ಬೂತ್ನಲ್ಲಿ ಬೆಳಗ್ಗೆ 7ಕ್ಕೆ ಆರಂಭವಾಗಬೇಕಿದ್ದ ಮತದಾನ ಮತ ಯಂತ್ರದ ಸಮಸ್ಯೆಯಿಂದ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಬೂತ್ ನಂ. 122ರಲ್ಲಿ ಒಂದೂವರೆ ಗಂಟೆ ತಡವಾಗಿ ಅಂದರೆ ಬೆಳಗ್ಗೆ 8.30ಕ್ಕೆ ಶುರುವಾಯಿತು. ಇನ್ನೂ ಕೆಲವೆಡೆ ಇಂಥ ಸಮಸ್ಯೆ ಆಗಿತ್ತು. ಮತದಾರರು ಕಾದು ನಿಂತು ಬಳಿಕ ತಮ್ಮ ಹಕ್ಕು ಚಲಾಯಿಸಿದರು.
ತಿರಸ್ಕಾರ ಮತಕ್ಕೆ ಅಡ್ಡಿ
ಧಾರವಾಡ: ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರೂ ಯೋಗ್ಯ ಎನಿಸದಿದ್ದರೆ ತಿರಸ್ಕಾರ ಮತ ಹಾಕಲು ಚುನಾವಣೆ ನಿಯಮ 49 (ಓ)ದಲ್ಲಿ ಅವಕಾಶವಿದೆ. ಆದರೆ, ಅಂಥ ಅಧಿಕಾರ ಚಲಾಯಿಸಲು ಮತದಾರನಿಗೆ ಮತಗಟ್ಟೆ ಅಧಿಕಾರಿಯೇ ಅಡ್ಡಿಪಡಿಸಿದ್ದಾರೆ. ನಗರದ ಅತ್ತಿಕೋಳ ಬಡಾವಣೆಯ 135ನೇ ಮತಗಟ್ಟೆಯಲ್ಲಿ ಸಂಪತ್ ರಾಥೋಡ ಎಂಬ ಯುವಕ ತಿರಸ್ಕಾರ ಮತ ಚಲಾಯಿಸಲು ಮುಂದಾದಾಗ ಅದಕ್ಕೆ ಮತಗಟ್ಟೆ ಅಧಿಕಾರಿ ನಾಗೇಶ್ ನಿರ್ಬಂಧ ವಿಧಿಸಿ, ಪೊಲೀಸರು, ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ, ವಿನಾಕಾರಣ ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ನಿಯಮಕ್ಕೆ ಅಧಿಕಾರಿಗಳೇ ವಿರೋಧಿಸಿದರೆ, ಕಿಮ್ಮತ್ತೆಲ್ಲಿದೆ ಎನ್ನುವುದು ಮತದಾರ ಸಂಪತ್ ಪ್ರಶ್ನೆಯಾಗಿತ್ತು.
ಅಕ್ರಮ ಹಣ ವಶ
ಧಾರವಾಡ: ಕಲಘಟಗಿ ತಾಲೂಕಿನ ವೀರಾಪುರ ಬಳಿ ಪಕ್ಷೇತರ ಅಭ್ಯರ್ಥಿ, ಬೋಗೆನಾಗರಕೊಪ್ಪ ಗ್ರಾಮದ ಶಿವಪ್ಪಾ ಯಲ್ಲಪ್ಪ ಅಕ್ಕಿ ಮತ್ತು ಕೇಶ್ವಾಪುರದ ರಮೇಶ ಪ್ರಭು ಧಾರವಾಡ ಎಂಬುವರು ಕಾರಿನಲ್ಲಿ (ಕೆಎ-25 ಡಿ-4135) ಸಾಗಿಸುತ್ತಿದ್ದ ರು. 49,325 ಹಣ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ವಿಚಕ್ಷಣಾ ದಳದ ಅಧಿಕಾರಿ ಚಂದ್ರಶೇಖರಪ್ಪಾ ಸಂತೆಬೆನ್ನೂರ, ವೀರಾಪುರ-ರಾಮಾಪುರ ಮಧ್ಯೆ ರಸ್ತೆಯಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಹಣ ಪತ್ತೆಯಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಕರ್ತರ ಮಧ್ಯೆ ಕಿರಿಕಿರಿ
ಧಾರವಾಡ: ನಗರದ ಮಾಳಮಡ್ಡಿ ಬಡಾವಣೆಯಲ್ಲಿ ಮತದಾನ ವೇಳೆ ಬಿಜೆಪಿ, ಎಸ್ಯುಸಿಐ ಕಮ್ಯೂನಿಸ್ಟ್ ಸಂಘಟನೆ ಕಾರ್ಯಕರ್ತರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಎಸ್ಯುಸಿಐ ಸಂಘಟನೆ ಕಾರ್ಯಕರ್ತರು ಕೊರಳಲ್ಲಿ ಸಂಘಟನೆ ಹೆಸರಿನ ಬ್ಯಾಜ್ ಧರಿಸಿ ಮತಗಟ್ಟೆ ಬಳಿ ಸಂಚರಿಸುತ್ತಿದ್ದರು. ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ. ಕಾರ್ಯಕರ್ತರು ಮತಗಟ್ಟೆ ಬಳಿ ಕರಪತ್ರಗಳನ್ನು ಹಂಚುತ್ತಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಸ್ಥಳಕ್ಕೆ ಬಂದ ವಿದ್ಯಾಗಿರಿ ಪೊಲೀಸರು ವಿಚಾರಿಸಿ, ಕೊರಳಲ್ಲಿನ ಬ್ಯಾಜ್ಗಳನ್ನು ತೆಗೆದು ಹಾಕುವಂತೆ ಸೂಚಿಸಿದರು. ಆಗ ಎಸ್ಯುಸಿಐ ಸಂಘಟನೆ, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

