ಕೈ ಗುದ್ದಾಟಕ್ಕೆ ಪಾಲಿಕೆ ಕಮಲ ಅಪ್ಪಚ್ಚಿ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 9
ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಕೈಯಿಂದ ಇದೀಗ ಮಹಾನಗರ ಪಾಲಿಕೆಯೂ ಕೈತಪ್ಪಿ ಹೋಗುವ ಎಲ್ಲ ಸಾಧ್ಯತೆಗಳು ಗೋಚರವಾಗಲಾರಂಭಿಸಿವೆ.
ರಾಜ್ಯದ ಆಡಳಿತ ಚುಕ್ಕಾಣಿ ತಮ್ಮ ಕೈಯಲ್ಲಿದ್ದಾಗಲೂ ಇತ್ತೀಚಿಗಷ್ಟೆ ನಡೆದ ಪಾಲಿಕೆ ಚುನಾವಣೆಯಲ್ಲಿ ಕೇವಲ 33 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದ ಬಿಜೆಪಿ, ಮತ್ತೊಂದು ಅವಧಿಗೆ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಪಕ್ಷಕ್ಕಾದ ಹಾನಿ ತುಂಬಿಸಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿತ್ತು.
ಆದರೆ, ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಗಳು ಕಮಲ ಪಕ್ಷದ ನಾಯಕರುಗಳ ಎಲ್ಲೆ ಲೆಕ್ಕಾಚಾರಗಳನ್ನು ತೆಲೆ ಕೆಳಗಾಗುವಂತೆ ಮಾಡಿದೆ.
ಬಹುಮತ ಸಾಬೀತಿಗೆಷ್ಟು?: ಮಹಾನಗರ ಪಾಲಿಕೆಗೆ ಒಟ್ಟು 67 ಸದಸ್ಯರು ಚುನಾಯಿತ ಸದಸ್ಯರಾಗಿದ್ದಾರೆ. ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುವ ಪಕ್ಷ ಕನಿಷ್ಠ ಪಕ್ಷ 34 ಸದಸ್ಯರ ಸಂಖ್ಯಾ ಬಲ ಹೊಂದಿರಬೇಕಾಗುತ್ತದೆ. ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 33 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 22 ಸ್ಥಾನಗಳಲ್ಲಿ ತೃಪ್ತಿ ಪಟ್ಟುಕೊಂಡಿತ್ತು. ಜೆಡಿಎಸ್ 09 ಸ್ಥಾನಗಳಿಸಿದ್ದರೆ, 02 ಪಕ್ಷೇತರ ಅಭ್ಯರ್ಥಿಗಳು ಹಾಗೂ ಒಬ್ಬ ಕೆಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದರು.
ತಿರುವು-ಮುರುವು: ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಮಹಾನಗರದಲ್ಲಿ ನಾಲ್ವರು ಶಾಸಕರು, ಒಬ್ಬ ಸಂಸದ ಹಾಗೂ ಇದೀಗ ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ವಿಧಾನಪರಿಷತ್ ಸದಸ್ಯರನ್ನು ಹೊಂದಿತ್ತು. ಇವರೆಲ್ಲರ ಸಹಕಾರದಿಂದ ಬಿಜೆಪಿಯ ಸಂಖ್ಯಾಬಲ 39ಕ್ಕೆ ಏರಲಿದ್ದು, ಇದರಿಂದ ಪಾಲಿಕೆ ಆಡಳಿತ ಸಹಜವಾಗಿಯೇ ಮತ್ತೆ ಬಿಜೆಪಿ ಕೈಗೆ ಬರಲಿದೆ ಎಂಬ ಕಮಲ ಪಾಳೆಯ ಲೆಕ್ಕಾಚಾರ ಇದೀಗ ಸಂಪೂರ್ಣ ತಿರುವು-ಮುರುವು ಆಗಿದೆ. ಚುನಾವಣೆ ನಂತರ ಮಹಾನಗರದಲ್ಲಿ ಬಿಜೆಪಿಯ ಇಬ್ಬರೇ ಶಾಸಕರಿದ್ದು ಒಬ್ಬ ಸಂಸದರಿದ್ದಾರೆ. ಇದರಿಂದಾಗಿ ಬಿಜೆಪಿ ಸಂಖ್ಯಾಬಲ ಅಬ್ಬಬ್ಬಾ ಎಂದರೂ 36 ದಾಟುವುದಿಲ್ಲ.
ಕಾಂಗ್ರೆಸ್-ಜೆಡಿಎಸ್: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಮತದಾರನ ತೀರ್ಪಿನಂತೆ, ಕಾಂಗ್ರೆಸ್-ಜೆಡಿಎಸ್ ಒಪ್ಪಂದ ಮಾಡಿಕೊಂಡಲ್ಲಿ ಬಿಜೆಪಿಗಿಂತ ಹೆಚ್ಚು ಅಂದರೆ 38ರಷ್ಟು ಸಂಖ್ಯಾಬಲ ಹೊಂದಲು ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದಾಗಿಯೇ ಕಾಂಗ್ರೆಸ್ಸೇ ಈ ಬಾರಿ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ. ಪಾಲಿಕೆಯಲ್ಲಿ 22 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್, ಇಬ್ಬರು ಶಾಸಕರು ಹಾಗೂ ಇಬ್ಬರು ವಿಧಾನಪರಿಷತ್ ಸದಸ್ಯರನ್ನು ಹೊಂದಿದೆ. 09 ಸದಸ್ಯರನ್ನು ಹೊಂದಿರುವ ಜೆಡಿಎಸ್, ಒಬ್ಬ ವಿಧಾನಪರಿಷತ್ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಪ್ಪಂದ ಮಾಡಿಕೊಂಡಲ್ಲಿ ಈ ಸಂಖ್ಯಾಬಲ 38ಕ್ಕೆ ಏರಿಕೆಯಾಗುತ್ತದೆ.
ಪಕ್ಷೇತರರೂ: ನಾಡಿನ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಹಿಡಿಯುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಪಾಲಿಕೆಗೆ ಆಯ್ಕೆಯಾಗಿರುವ ಪಕ್ಷೇತರ ಅಭ್ಯರ್ಥಿಗಳಿಬ್ಬರೂ ಕಾಂಗ್ರೆಸ್ನತ್ತ ವಾಲುತ್ತಾರೆ ಎಂಬುದನ್ನು ಬೇರೆಯಾಗಿ ಹೇಳಬೇಕಿಲ್ಲ. ಇದಲ್ಲದೆ, ಕೆಜೆಪಿಯ ಒಬ್ಬ ಸದಸ್ಯರಿದ್ದು ಅವರೂ ಸಮ್ಮಿಶ್ರ ಆಡಳಿತದತ್ತ ತೆರಳಲು ಮನಸ್ಸು ಮಾಡಿದ್ದಲ್ಲಿ ಕಾಂಗ್ರೆಸ್ನ ಸಂಖ್ಯಾಬಲ ಬರೋಬರಿ 41 ಆಗುತ್ತದೆ. ಬಿಜೆಪಿಗರು ಯಾವುದೇ ರೀತಿಯ ರಾಜನೀತಿ ಉಪಯೋಗಿಸಿದರೂ ಇಷ್ಟೊಂದು ದೊಡ್ಡ ಪ್ರಮಾಣದ ಸಂಖ್ಯಾಬಲ ತೋರಿಸಲು ಸಾಧ್ಯವಾಗುವುದಿಲ್ಲ ಎಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ನವರ ಲೆಕ್ಕಾಚಾರ.
ಕೈಗೆ ಬಂದ ತುತ್ತು: ಈ ಎಲ್ಲ ಸಾಧಕ-ಬಾಧಕಗಳ ಮೇಲೆ ಒಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿದಾಗ ಬಿಜೆಪಿಗೆ ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಐದು ವರ್ಷಗಳ ಕಾಲ ಪಾಲಿಕೆ ಆಡಳಿತ ನಡೆಸಿದ ಬಿಜೆಪಿಗರು ಈ ಎಲ್ಲ ಸಾಧ್ಯಾಸಾಧ್ಯತೆಗಳನ್ನು ಕಲ್ಪಿಸಿಕೊಂಡು ಕೈ ಹಿಸುಕುತ್ತ ಕುಳಿತುಕೊಳ್ಳುವಂತಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಪದವಿ ಪರೀಕ್ಷೆಗಳಾಗಿದ್ದರೆ, ವಿಧಾನಸಭೆ ಚುನಾವಣೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಿದ್ದಂತೆ ಎಂಬ ಅನುಭವ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿಗರಿಗೆ ಆಗಿರಲಿಕ್ಕೆ ಸಾಕು. ಪದವಿ ಪರೀಕ್ಷೆಯಲ್ಲಿ ಸಾಧನೆಗೈದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಮಾಡುವುದಿರಲಿ ಪಾಸ್ ಆಗಲು ಸಾಧ್ಯವಿಲ್ಲ ಎಂಬಂತೆ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ನೆಲೆಕಚ್ಚಿದೆ.
ದೇಶದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೈಯಲ್ಲಿದ್ದರೆ, ರಾಜ್ಯದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಸ್ವತಂತ್ರವಾಗಿ ಹಿಡಿಯಲಿದೆ. ಮಹಾನಗರದ ಅಭಿವೃದ್ಧಿಯೊಂದಿಗೆ ರಾಜಕೀಯವಾಗಿ ಗಟ್ಟಿಯಾಗಿ ನೆಲೆ ನಿಲ್ಲಬೇಕೆಂಬ ಉದ್ದೇಶ ಹೊಂದಿರುವವ ಕಾಂಗ್ರೆಸ್ ಹಾಗೂ ಜೆಡಿಎಸ್ ಒಪ್ಪಂದ ಮಾಡಿಕೊಳ್ಳುವುದು ಅತ್ಯಂತ ಸಮಂಜಸವಾಗಿದೆ ಎಂಬ ಲೆಕ್ಕಾಚಾರದ ಮಾತುಗಳು ಅವಳಿನಗರದಾದ್ಯಂತ ಕೇಳಿಬರುತ್ತೀವೆ. ಮಾತ್ರವಲ್ಲದೇ, ಈ ಎರಡೂ ಪಕ್ಷಗಳೊಂದಿಗೆ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಕೆಜೆಪಿ ಅಭ್ಯರ್ಥಿಯೂ ಕೈ ಜೋಡಿಸಿದ್ದಲ್ಲಿ ಕಾಂಗ್ರೆಸ್ಗೆ ಆನೆಬಲ ತಂದುಕೊಟ್ಟಂತಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಗೊಂಡ ನಂತರ, ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುವ ಕಾರ್ಯಕ್ಕೆ ಚುರುಕು ಮುಟ್ಟಲಿದ್ದು ಅಲ್ಲಿಯವರೆಗೂ, ಈ ವಿಷಯ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದ್ದು ಸುಳ್ಳಲ್ಲ.
-ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

