ಧಾರವಾಡ

ಉತ್ತಮ ಲೇಖನದಿಂದ ವಿಜ್ಞಾನ, ತಂತ್ರಜ್ಞಾನ ಅರಿವು

Published On :

ಧಾರವಾಡ: ವಿಜ್ಞಾನ ಬರಹಗಾರರಿಗೆ ಶಬ್ದ ಸಂಪತ್ತು ಅವಶ್ಯಕವಾಗಿದ್ದು, ಶಬ್ದ ಸಂಪತ್ತನ್ನು ಹೊಂದಿದ ಲೇಖಕರು ಉತ್ತಮವಾದ ಲೇಖನದ ಮೂಲಕ ಜನಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಸಾಧ್ಯ ಎಂದು ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ ಐದು ದಿನಗಳ ಅಖಿಲ ಕರ್ನಾಟಕ ಉದಯೋನ್ಮುಖ ಜನಪ್ರಿಯ ವಿಜ್ಞಾನ ಲೇಖಕರ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಭಾಷೆಯ ವಿಜ್ಞಾನದ ಲೇಖನಗಳನ್ನು ಇನ್ನೊಂದು ಭಾಷೆಗೆ ಅನುವಾದಿಸುವ ಸಂದರ್ಭದಲ್ಲಿ ನಮ್ಮ ಭಾಷೆಯಲ್ಲಿ ಸಮರ್ಪಕ ಪರ್ಯಾಯ ಶಬ್ದಗಳು ಇಲ್ಲದಿದ್ದಲ್ಲಿ ಮಡಿವಂತಿಕೆ ಅನುಸರಿಸದೇ ನೇರವಾಗಿ ಆ ಭಾಷೆಯ ಶಬ್ದಗಳನ್ನೇ ಬಳಸುವುದು ಸೂಕ್ತ ಎಂದರು.
ಭಾಷಾಂತರ ಮಾಡುವ ಸಂದರ್ಭದಲ್ಲಿ ಸಮಾನಾಂತರ ಹೊಸ ಶಬ್ದ ರಚಿಸುವಾಗ ಮೂಲ ಶಬ್ದದ ಬಾಹ್ಯ ಅರ್ಥವನ್ನಷ್ಟೇ ಅಲ್ಲದೇ ಅಂತರ್ಗತ ಅರ್ಥವನ್ನೂ ಅರಿತುಕೊಂಡು ಆ ವಸ್ತುವಿನ ಗುಣಧರ್ಮಕ್ಕೆ ಹೊಂದಿಕೆಯಾಗುವಂತಹ ಶಬ್ದ ರೂಪಿಸಬೇಕು. ಇಂತಹ ಕಮ್ಮಟಗಳಿಂದ ವಿಜ್ಞಾನ ಲೇಖಕರು ಅಂತಹ ಶಬ್ದ ಸಂಪತ್ತನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.
ಮಂಗಳೂರು ವಿವಿಯ ಹಿಂದಿನ ಕುಲಪತಿ ಪ್ರೊ. ಎಂ.ಐ. ಸವದತ್ತಿ ಮಾತನಾಡಿ, ಪ್ರಸ್ತುತ ಸಾಕಷ್ಟು ವಿಜ್ಞಾನಿಗಳ ವೈಜ್ಞಾನಿಕ ದೃಷ್ಟಿಕೋನ ಇರುವುದಿಲ್ಲ. ಜನಸಾಮಾನ್ಯರಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು ವಿಜ್ಞಾನ ಬರಹಗಾರರ ಪ್ರಮುಖ ಕೆಲಸವಾಗಿದೆ. ಇದಕ್ಕಾಗಿ ವಿಜ್ಞಾನದ ಜ್ಞಾನದ ಜೊತೆ ಅದನ್ನು ಪರಿಣಾಮಕಾರಿಯಾಗಿ ಹೇಳುವ ಕಲೆಯೂ ಅವಶ್ಯ ಎಂದರು.
ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ. ಎಚ್.ಎಸ್. ನಿರಂಜನ ಆರಾಧ್ಯ ಮಾತನಾಡಿ, ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಳ್ಳದೇ ಹೋದರೆ ನಾವೆಲ್ಲರೂ ಮತ್ತೆ ಮೌಢ್ಯಕ್ಕೆ ಒಳಗಾಗಿಬಿಡುವ ಅಪಾಯವಿದೆ. ಸಮೂಹ ಮಾಧ್ಯಮಗಳಲ್ಲಿ ಪ್ರಸ್ತುತ ಶೇ.3ರ ಬದಲಾಗಿ ಕನಿಷ್ಠ ಶೇ.10ರಷ್ಟು ವಿಜ್ಞಾನ ಸುದ್ದಿಗಳನ್ನು ಪ್ರಕಟಿಸಿದಾಗ ಮಾತ್ರ ಜನರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.
ವಸುಂಧರಾ ಭೂಪತಿ ಹಾಗೂ ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಯು.ಎಸ್. ರಾಯಕರ, ಬಿ.ಎಸ್. ಸೊಪ್ಪಿನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.