ಹುಬ್ಬಳ್ಳಿಯಲ್ಲೂ ದಂಡುಪಾಳ್ಯ ಶೈಲಿ ದರೋಡೆ!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 10
ಕೆಲವು ವರ್ಷಗಳ ಹಿಂದೆ ರಾಜ್ಯದ ರಾಜಧಾನಿ ಬೆಂಗಳೂರನ್ನು ನಡುಗಿಸಿದ್ದ ದಂಡುಪಾಳ್ಯ ಗ್ಯಾಂಗ್ನ ದರೋಡೆ ಶೈಲಿ ಇದೀಗ ಹುಬ್ಬಳ್ಳಿಗೂ ಕಾಲಿಟ್ಟಂತಾಗಿದೆ?
ಹೌದು! ಇಂತಹದ್ದೊಂದು ಪ್ರಶ್ನೆ ಸಹಜವಾಗಿ ಶುಕ್ರವಾರ ಬೆಳಗ್ಗೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರನಾಥ ನಗರದಲ್ಲಿ ನಡೆದ ಒಂಟಿ ಮಹಿಳೆಯ ಮೇಲೆ ನಡೆದ ಹಲ್ಲೆ ಮತ್ತು ದರೋಡೆಯಿಂದ ಹುಬ್ಬಳ್ಳಿ ನಾಗರಿಕರ ಮನಸ್ಸಿನಲ್ಲಿ ಒಂದು ಕ್ಷಣ ಮೂಡಿ ಮರೆಯಾಗುವಂತೆ ಮಾಡಿದೆ.
ಚಂದ್ರನಾಥ ನಗರದ ಗಣಪತಿ ದೇವಸ್ಥಾನದ ಬಳಿ ಇರುವ ರಾಧಾಬಾಯಿ ಆಚಾರಿ ಅವರು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗುವ ಸಂದರ್ಭದಲ್ಲಿ ಅಡುಗೆ ಮಾಡುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ರಾಧಾಬಾಯಿ ಅವರ ಕುಟುಂಬದ ಸದಸ್ಯರೊಬ್ಬರು, ಕಾರ್ಪೆಂಟರ್ ಕೆಲಸ ಮಾಡುತ್ತಿರುವ ಮಂಜುನಾಥ ಆಚಾರಿ ಅವರು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಗಂಡಸರು ಹೊರಗೆ ಹೋಗುತ್ತಿದ್ದಂತೆಯೇ ದುಷ್ಕರ್ಮಿಗಳು ಮನೆಗೆ ಕಾಲಿರಿಸಿದ್ದಾರೆ. ದರೋಡೆಗೆ ಮುನ್ನ ರಾಧಾಬಾಯಿ ಅವರ ಸೊಸೆ ಸ್ನಾನ ಮಾಡುತ್ತಿದ್ದಳು. ಇವಳು ಬಚ್ಚಲು ಮನೆಯಿಂದ ಹೊರಗೆ ಬಂದು ಗಲಾಟೆ ಮಾಡಬಾರದು ಎಂದು ಬಚ್ಚಲು ಮನೆ ಬಾಗಿಲನ್ನು ಹೊರಗಿನ ಚಿಲಕ ಹಾಕಿದ್ದಾರೆ. ಅಡುಗೆ ಮಾಡುತ್ತಿದ್ದ ವೃದ್ಧೆ ರಾಧಾಬಾಯಿ ಆಚಾರಿ ಅವರ ತಲೆಗೆ ಬಲವಾದ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿ ಅವರ ಕೊರಳಲ್ಲಿದ್ದ ಎರಡು ತೊಲೆ ಚಿನ್ನದ ಸರ ಮತ್ತು ಕೈಗಳಲ್ಲಿದ್ದ ಬಳೆ ತೆಗೆದುಕೊಂಡು ಪರಾರಿಯಾಗಿದ್ದಾರೆ.
ರಾಧಾಬಾಯಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ದರೋಡೆಕೋರರ ತಂಡ ಅಂದಾಜು 40 ಗ್ರಾಂ ಚಿನ್ನದ ಎರಡು ಬಳೆ ಮತ್ತು ಒಂದು ಚಿನ್ನದ ಸರ ದೋಚಿದೆ. ಘಟನೆ ನಂತರ ಬಚ್ಚಲು ಮನೆಯಲ್ಲಿದ್ದ ಮಾಧವಿ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದು, ಪಕ್ಕದ ಮನೆಯ ಬಾಲಕಿಯೊಬ್ಬಳು ಬಂದು ಬಚ್ಚಲು ಮನೆಯ ಬಾಗಿಲು ತೆಗೆದಿದ್ದಾಳೆ. ಇದಾದ ನಂತರವೇ ಪೊಲೀಸ್ ಠಾಣೆಗೆ ಮಾಹಿತಿ ದೊರೆತು ತಕ್ಷಣ ಹಲ್ಲೆಗೆ ಒಳಾಗಿದ್ದ ವೃದ್ಧೆ ರಾಧಾಬಾಯಿ ಅವರನ್ನು ಕಿಮ್ಸ್ಗೆ ದಾಖಲಿಸಲಾಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಧಾಬಾಯಿಗೆ ಕಿಮ್ಸ್ನ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ. ಆದರೆ ಅವರಿಗೆ ಇನ್ನೂ ಪ್ರಜ್ಞೆ ಮರುಕಳಿಸಿಲ್ಲ.
ಅವಳಿನಗರ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ಹಾಡಹಗಲೇ ಮಹಿಳೆಯರ ಕೊರಳಲ್ಲಿನ ಚಿನ್ನಾಭರಣ ದೋಚುವಿಕೆ, ಒಂಟಿ ಮಹಿಳೆಯರ ಮಹಿಳೆಯರ ಮೇಲೆ ಹಲ್ಲೆ ಹೆಚ್ಚಾಗುತ್ತಿರುವ ಪ್ರಕರಣಗಳಲ್ಲಿ ಜನರಲ್ಲಿ ಆತಂಕ ಮೂಡಿಸಿದೆ.
ಕೆಲವು ದಿನಗಳ ಹಿಂದೆಯಷ್ಟೆ ಜನತಾ ಕಾಲನಿಯಲ್ಲಿನ ಒಂಟಿ ಮಹಿಳೆಯನ್ನು ಅಪರಿಚಿತ ಯುವಕನೊಬ್ಬ ಕೈಕಾಲು ಕಟ್ಟಿ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಹೆಚ್ಚುತ್ತಿರುವ ಬೈಕ್ ಕಳ್ಳತನ: ಚಿನ್ನಾಭರಣ, ನಗದು ಕಳ್ಳತನದ ಜೊತೆಗೆ ಅವಳಿ ನಗರದ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳೂ ಹೆಚ್ಚುತ್ತಿದ್ದು, ಬೈಕ್ ಸವಾರರಿಗೆ ಎಲ್ಲಿ ತಮ್ಮ ಬೈಕ್ ಮಾಯವಾದಿತೊ ಎನ್ನುವ ಆತಂಕ ಸದಾಕಾಲ ಕಾಡುವಂತೆ ಮಾಡಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಮೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, ಧಾರವಾಡ ನಗರದ ವ್ಯಾಪ್ತಿಯಲ್ಲಿ ಮೂರು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.
'ಶೀಘ್ರ ಸಮಾಜ ಕಂಟಕರಿಗೆ ಸೆರೆವಾಸ'
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ, ಎರಡು ಮೂರು ದಿನಗಳಿಂದ ಇತ್ತೀಚೆಗೆ ಕೆಲವೊಂದು ಸಮಾಜಘಾತುಕ ಶಕ್ತಿಗಳು ಕ್ರಿಯಾಶಿಲವಾಗಿರುವ ಸಾಧ್ಯತೆ ಗೋಚರಿಸುತ್ತಿದ್ದು, ಚಂದ್ರನಾಥ ನಗರದ ವೃದ್ಧೆಯ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಲ್ಲೆ ಮತ್ತು ದರೋಡೆ ಪ್ರಕರಣ ಪತ್ತೆ ಹಚ್ಚುವುದಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಪರಾಧ ವಿಭಾಗದ ಡಿಸಿಪಿ, ಗುಪ್ತಚರ ಸಿಬ್ಬಂದಿಯನ್ನು ಆರೋಪಿಗಳ ಪತ್ತೆಗೆ ನಿಯೋಜಿಸಲಾಗಿದ್ದು, ಶೀಘ್ರ ಹೊಸತಾಗಿ ತಲೆ ಎತ್ತಿರುವ ಸಮಾಜ ಕಂಟಕರನ್ನು ಮಟ್ಟ ಹಾಕುವುದಕ್ಕೆ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

