ಗುಂಪು ಘರ್ಷಣೆ: 15ರವರೆಗೆ ನಿಷೇಧಾಜ್ಞೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 12
ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದ ಪರಿಣಾಮ ಹಳೆಹುಬ್ಬಳ್ಳಿ ಬಾಣತಿಕಟ್ಟಾ ಪ್ರದೇಶದಲ್ಲಿ ಎರಡು ಗುಂಪುಗಳ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ನಾಲ್ಕು ವಾಹನಗಳು ಜಖಂಗೊಂಡಿವೆಯಲ್ಲದೆ, 10ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಕಲ್ಲು ತೂರಾಟದಲ್ಲಿ ಶಿವಾಜಿ ಭಾವಚಿತ್ರ ಹೊತ್ತಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ಲಾರಿ ಸೇರಿದಂತೆ ಒಟ್ಟು ಮೂರು ವಾಹನಗಳು ಹಾಗೂ ಒಂದು ಬೈಕ್ ಜಖಂಗೊಂಡಿದೆ. ಘಟನೆಯಲ್ಲಿ ಡಿಸಿಪಿ ಶ್ರೀನಾಥ ಜೋಶಿ, ಎಸಿಪಿ ಜಿ.ಎಂ. ದೇಸೂರ ಸೇರಿದಂತೆ 8-10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರಲ್ಲದೇ, ಶ್ರೀಸಾಮಾನ್ಯರೂ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಘು-ಲಾಠಿ ಪ್ರಹಾರ ನಡೆಸಿ ನೆರೆದಿದ್ದ ಜನರನ್ನು ಚದುರಿಸಿದ್ದಾರೆ.
ಶಿವಾಜಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆದ ಪರಿಣಾಮ ಇಡೀ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ ಪರಿಣಾಮ ಎರಡೂ ಕೋಮಿನ ಜನರು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ದೌಡಾಯಿಸಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ತಿಳಿಸಿದರು.
ಸುದ್ದಿ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಧಾವಿಸಿ, ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಹಳೆಹುಬ್ಬಳ್ಳಿ ಹಾಗೂ ಕಸಬಾಪೇಟೆ ಠಾಣೆ ವ್ಯಾಪ್ತಿಯಲ್ಲಿ ಕೆಎಸ್ಆರ್ಪಿ ತುಕಡಿಗಳನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.
ನಡೆದಿದ್ದೇನು..?: ಹಳೆಹುಬ್ಬಳ್ಳಿ ಬಾಣತಿಕಟ್ಟಾ ಪ್ರದೇಶದಿಂದ ಇದೇ ಮೊದಲ ಬಾರಿಗೆ ಶಿವಾಜಿ ಜಯಂತಿ ಮೆರವಣಿಗೆ ಸಾಗುತ್ತಿತ್ತು. ಮೆರವಣಿಗೆಯಲ್ಲಿ ಅತಿ ಜೋರಾಗಿ ಧ್ವನಿವರ್ಧಕ ಹಚ್ಚಲಾಗಿದ್ದನ್ನು ಮತ್ತೊಂದು ಗುಂಪಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸುತ್ತಲೂ ಇದ್ದ ಬಿಲ್ಡಿಂಗ್ನಿಂದ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹಿಂದೂ ಕೋಮಿನ ಮುಖಂಡರು ಪೊಲೀಸರ ಎದುರು ದೂರಿದ್ದಾರೆ. ಇದರಿಂದ ರೊಚ್ಚಿಗೆದ್ದ ಮತ್ತೊಂದು ಗುಂಪಿನ ಜನರು ಕಲ್ಲು ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ಬಿಗಡಾಯಿಸಿತ್ತೆನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲೇ ಉಪಸ್ಥಿತರಿದ್ದ ಪೊಲೀಸ್ ಸಿಬ್ಬಂದಿ ಸೇರಿದಂತೆ ಜನರಿಗೂ ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ.
ಪ್ರಾರ್ಥನಾ ಮಂದಿರಕ್ಕೆ: ಮೆರವಣಿಗೆ ಪ್ರಾರ್ಥನಾ ಮಂದಿರದ ಬಳಿ ಸಾಗಿಬರುತ್ತಿದ್ದಂತೆಯೇ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದುವೇ ಗುಂಪು ಘರ್ಷಣೆಗೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ಮೌಖಿಕ ಹೇಳಿಕೆಯಲ್ಲಿ ತಿಳಿಸಿದ್ದು, ಆದರೆ, ಗುಂಪು ಘರ್ಷಣೆ ಸಂಭವಿಸಲು ನಿಖರವಾದ ಕಾರಣ ಏನು ಎಂಬುದು ಮಾತ್ರ ಪೊಲೀಸ್ ತನಿಖೆಯಿಂದಲೇ ತಿಳಿದು ಬರಬೇಕಿದೆ. ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದ ಪರಿಣಾಮ ಎರಡು ಲಾರಿ, ಒಂದು ಟಂಟಂ ವಾಹನ ಸೇರಿದಂತೆ ಒಂದು ಬೈಕ್ ಘಟನೆಯಲ್ಲಿ ಜಖಂಗೊಂಡಿವೆ.
ಆತಂಕಕ್ಕೆ ಕಾರಣ: ಏಕಾಏಕಿ ಕಲ್ಲು ತೂರಾಟ ನಡೆದ ಪರಿಣಾಮ ಬಾಣತಿಕಟ್ಟಾ ಸೇರಿದಂತೆ ಅಕ್ಕಪಕ್ಕದಲ್ಲಿ ಅಂಗಡಿ ಮುಂಗಟ್ಟು ಹೊಂದಿದ್ದ ವ್ಯಾಪಾರಿಗಳು, ಜನತೆ ಏನೂ ತಿಳಿಯದಂತಾಗಿ ಆತಂಕಕ್ಕೆ ಒಳಗಾಗಿ ಅತ್ತಿಂದಿತ್ತ ಓಡಾಡಿದರು. ಇದರಿಂದಾಗಿ ಕೆಲಕಾಲ ಈ ಪ್ರದೇಶದಲ್ಲಿ ವಾಹನ ಸಂಚಾರವೂ ಸ್ಥಗಿತಗೊಂಡು ಜನರು ತೀವ್ರ ಯಾತನೆ ಅನುಭವಿಸುವಂತಾಯಿತು.
ಬಂಧನ, ನಿಷೇಧಾಜ್ಞೆ
ಕೋಮುಗಲಭೆಗೆ ಕಾರಣರಾದ 30ಕ್ಕೂ ಹೆಚ್ಚು ಜನರನ್ನು ಪೊಲೀಸರು ಭಾನುವಾರ ರಾತ್ರಿವರೆಗೆ ಬಂಧಿಸಿದ್ದು, ಬಂಧಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಮೇ 15ರ ಬೆಳಗ್ಗೆ 6ರವರೆಗೆ ಹಳೆಹುಬ್ಬಳ್ಳಿ ಹಾಗೂ ಕಸಬಾಪೇಟ ಠಾಣೆ ವ್ಯಾಪ್ತಿಯಲ್ಲಿ ಕಲಂ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಆದೇಶ ಹೊರಡಿಸಿದ್ದಾರೆ. ಕಲ್ಲು ತೂರಾಟ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ರಾತ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಮುಂದಾದ ಪ್ರಸಂಗವೂ ನಡೆಯಿತು.
ಶಿವಾಜಿ ಮೆರವಣಿಗೆ ತೆರಳುತ್ತಿರುವ ಮಾರ್ಗ ಮಧ್ಯದಲ್ಲಿರುವ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಒಂದು ಕೋಮಿನ ಜನರು ಹೇಳುತ್ತಿದ್ದರೆ ಮತ್ತೊಂದು ಕೋಮಿನ ಜನರು, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಈ ಕುರಿತಂತೆ ಸೂಕ್ತ ತನಿಖೆ ನಡೆಸಲಾಗುವುದು. ಕಲ್ಲು ತೂರಾಟದ ನಂತರ ಹಳೆಹುಬ್ಬಳ್ಳಿ ಹಾಗೂ ಕಸಬಾಪೇಟ ಠಾಣೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರಿ ಬಂದೊಬಸ್ತ್ ಏರ್ಪಡಿಸಲಾಗಿದೆ. ಮೇ 15ರವರೆಗೆ ಕಲಂ 144ರ ವ್ಯಾಪ್ತಿಯಡಿಯಲ್ಲಿ ಈ ಎರಡೂ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.
-ಬಿ.ಎ. ಪದ್ಮನಯನ ಪೊಲೀಸ್ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

