ವಿನಯ ಕುಲಕರ್ಣಿ ಮಂತ್ರಿ ಆಗ್ತಾರಾ?
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 12
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಒಟ್ಟು 13 ಚುನಾವಣೆಗಳನ್ನು ಕಂಡಿದ್ದರೂ ಈ ಕ್ಷೇತ್ರದಿಂದ ಆಯ್ಕೆಯಾದ ಯಾವೊಬ್ಬ ಶಾಸಕರೂ ಮಂತ್ರಿಯಾಗಿಲ್ಲ.
ಈ ಕೊರಗು ನೀಗಿಸಲು 2ನೇ ಬಾರಿಗೆ ಆಯ್ಕೆಯಾದ ವಿನಯ ಕುಲಕರ್ಣಿ ದೆಹಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಭಗೀರಥ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ಮಾತ್ರ ಕ್ಷೇತ್ರಕ್ಕೆ ಗೂಟದ ಕಾರು ಸಿಗುತ್ತದೆ.
ಈ ಕ್ಷೇತ್ರದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕ್ಷೇತ್ರದಿಂದ ಆಯ್ಕೆಯಾದ ಶಾಸಕರ ಪಕ್ಷವೇ ಅನೇಕ ಬಾರಿ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದರೂ ಕಾರಣಾಂತರಗಳಿಂದ ಯಾರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬಾರಿ ಕಾಂಗ್ರೆಸ್ಸಿನ ವಿನಯ ಕುಲಕರ್ಣಿ 18 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಕಾಂಗ್ರೆಸ್ಗೂ ಪೂರ್ಣ ಬಹುಮತ ಸಿಕ್ಕಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ವಿನಯ ಕುಲಕರ್ಣಿಗೆ ಮಂತ್ರಿ ಸ್ಥಾನ ಸಿಕ್ಕರೆ, ಕ್ಷೇತ್ರದ ಬರ ನೀಗುತ್ತದೆ ಎನ್ನುವುದು ಜನತೆ ಆಶಯ.
1967ರಲ್ಲಿ ಈ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಸ್.ವಿ. ಅಗ್ನಿಹೋತ್ರಿ ಗೆದ್ದಿದ್ದರು. ಅವರದೇ ಪಕ್ಷ ಅಧಿಕಾರದಲ್ಲಿದ್ದರೂ ಮಂತ್ರಿಯಾಗುವ ಭಾಗ್ಯ ಸಿಗಲಿಲ್ಲ. ಅಲ್ಲಿಂದ ಹಿಡಿದು 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾದ ಸೀಮಾ ಮಸೂತಿ ವರೆಗೂ ಮಂತ್ರಿ ಪದವಿ ಕನಸಾಗಿಯೇ ಉಳಿಯಿತು.
ಕಾಂಗ್ರೆಸ್ಸಿನ ಸುಮತಿ ಮಡಿಮನ್ (1972, 1978) ಹಾಗೂ ಸಿ.ವಿ. ಪುಡಕಲಕಟ್ಟಿ (1981-1983) ಅವರ ನಂತರ ಮೂರು ದಶಕಗಳ ಬಳಿಕ ಎರಡನೇ ಬಾರಿ ಶಾಸಕರಾಗಿ ವಿಧಾನಸೌಧದ ಮೆಟ್ಟಿಲೇರುತ್ತಿರುವ ವಿನಯ ಕುಲಕರ್ಣಿ ಮಂತ್ರಿ ಪದವಿ ನಿರೀಕ್ಷೆ ಮೂಡಿಸಿದ್ದಾರೆ.
1985ರಲ್ಲಿ ಎ.ಬಿ. ದೇಸಾಯಿ (ಜನತಾ ಪಕ್ಷ), 1989ರಲ್ಲಿ ಬಾಬಾಗೌಡ ಪಾಟೀಲ (ರಾಜ್ಯ ರೈತ ಸಂಘ), 1990ರಲ್ಲಿ ಪ್ರೊ ಎಂ.ಡಿ. ನಂಜುಂಡಸ್ವಾಮಿ (ರಾಜ್ಯ ರೈತ ಸಂಘ), 1994ರಲ್ಲಿ ಶ್ರೀಕಾಂತ ಅಂಬಡಗಟ್ಟಿ (ಕಾಂಗ್ರೆಸ್), 1998ರಲ್ಲಿ ಶಶಿಧರ ಅಂಬಡಗಟ್ಟಿ (ಕಾಂಗ್ರೆಸ್), 1999ರಲ್ಲಿ ಶಿವಾನಂದ ಅಂಬಡಗಟ್ಟಿ (ಪಕ್ಷೇತರ), 2004ರಲ್ಲಿ ವಿನಯ ಕುಲಕರ್ಣಿ (ಪಕ್ಷೇತರ), 2008ರಲ್ಲಿ ಸೀಮಾ ಮಸೂತಿ (ಬಿಜೆಪಿ) ಇಲ್ಲಿ ಶಾಸಕರಾಗಿದ್ದಾರೆ. ಆದರೆ, ಯಾರೂ ಮಂತ್ರಿಯಾಗಿಲ್ಲ.
ಹಾಗೆ ನೋಡಿದರೆ, ಧಾರವಾಡ ಜಿಲ್ಲೆಯ ಉಳಿದ ಆರು ಕ್ಷೇತ್ರಗಳ ಶಾಸಕರು ಮಂತ್ರಿ ಸ್ಥಾನ ಪಡೆದಿದ್ದಾರೆ. ಹು-ಧಾ ಪಶ್ಚಿಮದಿಂದ ಎಸ್.ಆರ್. ಮೋರೆ, ಹು-ಧಾ ಪೂರ್ವದಿಂದ ಎ.ಎಂ. ಹಿಂಡಸಗೇರಿ, ಜಬ್ಬಾರಖಾನ ಹೊನ್ನಳ್ಳಿ, ಹು-ಧಾ ಸೆಂಟ್ರಲ್ನಿಂದ ಎಸ್.ಆರ್. ಬೊಮ್ಮಾಯಿ, ಗೋಪೀನಾಥ ಸಾಂಡ್ರಾ, ಜಗದೀಶ ಶೆಟ್ಟರ್, ನವಲಗುಂದದಿಂದ ಕೆ.ಎನ್. ಗಡ್ಡಿ, ಕಲಘಟಗಿಯಿಂದ ಪಿ.ಸಿ. ಸಿದ್ದನಗೌಡರ, ಕುಂದಗೋಳದಿಂದ ಎಂ.ಎಸ್. ಕಟಗಿ ಸಚಿವರಾಗಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿ ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಸಚಿವ ಸಂಪುಟದಲ್ಲಿ ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಗೆ ಮಣೆ ಹಾಕುವರೇ?
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

