ಪಪ್ಪಿ ರಾಯನಗೌಡರ ಆರೋಪ ಸತ್ಯಕ್ಕೆ ದೂರ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 13
ಕಾಂಗ್ರೆಸ್ಸಿನ ಹಿರಿಯ ಸಜ್ಜನ ಮುಖಂಡ, ವೀರಣ್ಣ ಮತ್ತಿಕಟ್ಟಿ ವಿರುದ್ಧ ಪಾಲಿಕೆ ಸದಸ್ಯ ಪ್ರಫುಲ್ಚಂದ್ರ ರಾಯನಗೌಡ್ರ ಆಧಾರ ರಹಿತ ಹೇಳಿಕೆ ನೀಡಿದ್ದು ಖಂಡನೀಯ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಎಂ. ಚೌಧರಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತಿಕಟ್ಟಿ ಅವರು ಅಕ್ರಮವಾಗಿ ಜಿ ಕೆಟಗರಿ ನಿವೇಶನಗಳನ್ನು ಪಡೆದಿದ್ದಾರೆ ಎಂತೆಲ್ಲಾ ರಾಯನಗೌಡ್ರ ಅಸಂಬಂದ್ಧ ಹೇಳಿಕೆ ನೀಡಿದ್ದಾರೆ. ಚುನಾವಣೆ ಮುಂಚೆಯೂ ಇದೇ ರೀತಿ ಸುದ್ದಿ ಹಬ್ಬಿಸಲಾಯಿತು. ಈಗ ಕಾಂಗ್ರೆಸ್ ಬಹುಮತ ಪಡೆದಿದ್ದು, ಮತ್ತಿಕಟ್ಟಿ ಅವರಿಗೆ ಸಚಿವ ಸ್ಥಾನ ದೊರೆಯಬಾರದೆಂಬ ಉದ್ದೇಶದಿಂದ ಸುಖಾಸುಮ್ಮನೆ ದಾಖಲೆ ರಹಿತ ಆರೋಪಗಳನ್ನು ಮಾಡಿದ್ದಾರೆ. ಆದ್ದರಿಂದ ರಾಯನಗೌಡ್ರ ಮೇಲೆ ನಾವು ಪಕ್ಷದ ಮುಖಂಡರಿಗೆ ದೂರು ನೀಡುವುದು ಮಾತ್ರವಲ್ಲದೇ, ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಚೌಧರಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ಸಿನ ಇನ್ನೋರ್ವ ಮುಖಂಡ, ವಕೀಲರಾದ ಸಿದ್ಧಲಿಂಗೇಶ ಮಾತನಾಡಿ, ಪಕ್ಷದಲ್ಲಿ ಅನೇಕ ಸ್ಥಾನಗಳನ್ನು ಅತ್ಯುತ್ತಮವಾಗಿ ನಿಭಾಯಿಸಿ ಕಳೆದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ದುಡಿದ ಕಾರಣ ವಿಧಾನ ಪರಿಷತ್ ಸದಸ್ಯ ಮತ್ತಿಕಟ್ಟಿ ಅವರ ಶ್ರಮದಿಂದ ಪಕ್ಷ ಬಹುಮತ ಸಾಧಿಸಿದೆ. ನಮ್ಮದೇ ಪಕ್ಷದವರಾದ ರಾಯನಗೌಡ್ರ ಯಾರ ಕುಮ್ಮಕ್ಕಿನಿಂದ ಈ ರೀತಿ ಮಾತನಾಡಿದ್ದಾರೆ ಗೊತ್ತಿಲ್ಲ. ಆದರೆ, ಅವರ ಹೇಳಿಕೆ ಆಧಾರ ರಹಿತ. ಕೂಡಲೇ ಪಕ್ಷ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಹೈಕಮಾಂಡ್ಗೆ ಒತ್ತಾಯಿಸಿದರು.
ನವಲೂರು: 23ರಿಂದ 25ರ ವರೆಗೆ ದಿಂಡಿ ಉತ್ಸವ
ಹುಬ್ಬಳ್ಳಿ: ಧಾರವಾಡ ಸಮೀಪದ ನವಲೂರಿನ ಶ್ರೀ ಪಾಂಡುರಂಗ ರುಕ್ಮಾಯಿ ಹರಿಮಂದಿರದಲ್ಲಿ ಮೇ 23ರಿಂದ 25ರ ವರೆಗೆ ಶ್ರೀ ವಿಠ್ಠಲ ರುಖುಮಾಯಿ ದೇವರ 17ನೇ ವರ್ಷದ ದಿಂಡಿ ಉತ್ಸವ ಹಾಗೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ 23ರಂದು ಸಂಜೆ 6ಕ್ಕೆ ಭದ್ರಾವತಿ ಗೋದಿಮಠದ ಶ್ರೀ ನಾಮದೇವಾನಂದ ಸ್ವಾಮೀಜಿ ಅವರಿಂದ ಪೋತಿ ಸ್ಥಾಪನೆ, ಮೇ 24ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ತುಮಕೂರು ಜಿಲ್ಲೆ ಗುಬ್ಬಿ ಗ್ರಾಮದ ಶ್ರೀ ತುಕಾರಾಮ ಸ್ವಾಮೀಜಿ ಅವರಿಂದ ಶ್ರೀ ಜ್ಞಾನೇಶ್ವರಿ ಪಾರಾಯಣ ನಡೆಯುವುದು. ಸಂಜೆ 4.30 ರಿಂದ 6ರ ವರೆಗೆ ಮತ್ತು ರಾತ್ರಿ 7ರಿಂದ 9ರ ವರೆಗೆ ಕೀರ್ತನೆ, ಭಜನೆ ಜರುಗುವುದು. ಮೇ 25ರಂದು ಬೆಳಗ್ಗೆ ಪಾಲಕಿ ದಿಂಡಿ ಉತ್ಸವ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ ಜರುಗಲಿವೆ. ಸಾಮೂಹಿಕ ವಿವಾಹದಲ್ಲಿ ವಿವಾಹ ಮಾಡಿಕೊಳ್ಳಲಿಚ್ಛಿಸುವವರು ಮಾಹಿತಿಗೆ ಪಿ.ಎಲ್. ಮಾನೆ ಮೊ. 98452 62143, ಎಸ್.ಎಂ. ಬಾಗಿಲದ (88616 60331) ಸಂಪರ್ಕಿಸಿ.
ನವಲಗುಂದ: ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅವರಾದಿ ರಾಜಿನಾಮೆ
ನವಲಗುಂದ: ಸ್ಥಳೀಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೂಪ್ಪ ಸೋಲಿಗೆ ನೈತಿಕ ಹೊಣೆ ಹೊತ್ತು ತಾಲೂಕು ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಅವರಾಧಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕ್ಷೇತ್ರದ ಮತದಾರರು ಅಭಿವೃದ್ಧಿ ಪರ ಆಡಳಿತವನ್ನು ತಿರಸ್ಕರಿಸಿ ಬೇರೆ ಪಕ್ಷಕ್ಕೆ ಕೊಟ್ಟ ಜನಾದೇಶವನ್ನು ಸ್ವೀಕರಿಸುವುದಾಗಿ ತಿಳಿಸಿರುವ ಅವರು, ಬಿಜೆಪಿ ಪರವಾಗಿ ಮತ ಚಲಾವಣೆ ಮಾಡಿದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
17ಕ್ಕೆ ಸಾಮೂಹಿಕ ವಿವಾಹ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಆನಂದನಗರದ ವಿಶ್ವ ಹಿಂದೂ ವೀರಶೈವ ಸಮಾಜ ಸಂಘಟನಾ ಸೇವಾ ಸಮಿತಿ ವತಿಯಿಂದ ಮೇ 17ರಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದ ದ್ವಿತೀಯ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆನಂದನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಬಯಸುವವರು ಸಮಿತಿ ಪದಾಧಿಕಾರಿಗಳ ಬಳಿ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಬೇಕು. ಮಾಹಿತಿಗೆ ಮೊ. 99013 94266 ಅಥವಾ 91416 65358 ಸಂಪರ್ಕಿಸಿ.
ಬಸ್, ಟ್ರ್ಯಾಕ್ಟರ್ ಡಿಕ್ಕಿ: ಮಹಿಳೆ ಸಾವು
ಕುಂದಗೋಳ: ಸಾರಿಗೆ ಬಸ್ ಮತ್ತು ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ತಾಲೂಕಿನ ಹರ್ಲಾಪುರ ಕ್ರಾಸ್ ಬಳಿ ಸೋಮವಾರ ರಾತ್ರಿ 8.30ರ ಸುಮಾರಿಗೆ ಸಂಭವಿಸಿದೆ.
ಮೃತಳು ಶಿಗ್ಗಾಂವಿ ತಾಲೂಕು ಜಕ್ಕನಕಟ್ಟಿ ತಾಂಡಾದ ಕಮಲವ್ವ ಲಮಾಣಿ (45). ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಐವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ಇನ್ನುಳಿದ ಗಾಯಾಳುಗಳನ್ನು ಸಮೀಪದ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಜಕ್ಕನಕಟ್ಟಿ ತಾಂಡಾದ ನಾಗಪ್ಪ ಡಾಕಪ್ಪ ಲಮಾಣಿ ಎಂಬುವವರ ಮಗನ ನಿಶ್ಚತಾರ್ಥಕ್ಕಾಗಿ ಗದಗ ಜಿಲ್ಲಾ ರೋಣ ತಾಲೂಕಿನ ನರೆಗಲ್ ತಾಂಡಾಕ್ಕೆ 30ಕ್ಕೂ ಹೆಚ್ಚು ಜನರು ಟ್ರಾಕ್ಟರ್ನಲ್ಲಿ ತೆರಳಿದ್ದರು. ನಿಶ್ಚಿತಾರ್ಥ ಮುಗಿಸಕೊಂಡು ಲಕ್ಷ್ಮೇಶ್ವರದಲ್ಲಿ ಬಟ್ಟೆ ಖರೀದಿಸಿ ಗುಡಗೇರಿ ಮಾರ್ಗವಾಗಿ ಸ್ವಗ್ರಾಮಕ್ಕೆ ತೆರಳುವಾಗ ಹರ್ಲಾಪುರ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

