ಧಾರವಾಡ

ಪ್ರಾಥಮಿಕ ಚಿಕಿತ್ಸೆಯೂ ನೀಡದ ಆಸ್ಪತ್ರೆ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 14
ಪಟ್ಟಣದ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಗುಡಗೇರಿ ಮತ್ತು ಲಕ್ಷ್ಮೇಶ್ವರ ಮಧ್ಯೆ ಅಪಘಾತ ಸಂಭವಿಸಿ 12ಕ್ಕೂ ಹೆಚ್ಚು ಜನ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ ಎರಡು ಗಂಟೆಗಳಿಗೂ ಮಿಕ್ಕಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಕರ್ತವ್ಯದ ಮೇಲೆ ಇಲ್ಲದೆ ಇರುವುದರಿಂದ ಗಾಯಾಳುಗಳು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.
ಸೋಮವಾರ ಶಿಗ್ಗಾಂವ ತಾಲೂಕಿನ ಜೆಕ್ಕನಕಟ್ಟಿ ಗ್ರಾಮದ ಲಂಬಾಣಿ ಸಮುದಾಯದ ಹಲವರು ಮದುವೆ ನಿಶ್ಚಿತಾರ್ಥಕ್ಕೆಂದು ಟ್ರ್ಯಾಕ್ಟರ್ ಮೂಲಕ ಶಿರಹಟ್ಟಿ ತಾಲೂಕಿನ ನೆಲೂಗಲ್ಲ ಗ್ರಾಮಕ್ಕೆ ತೆರಳಿದ್ದಾರೆ. ಮದುವೆಯ ನಿಶ್ಚಿತಾರ್ಥ ಕಾರ್ಯಮುಗಿಸಿಕೊಂಡು ಮರಳಿ ಜೆಕ್ಕನಕಟ್ಟಿ ಗ್ರಾಮಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಲಕ್ಷ್ಮೇಶ್ವರ ಗುಡಗೇರಿ ಮಾರ್ಗ ಮಧ್ಯೆ ಟ್ರ್ಯಾಕ್ಟರ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ, ಕಮಲವ್ವ ಲಮಾಣಿ (30) ಎಂಬ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಅಲ್ಲದೆ ಹಲವರು ಗಾಯಗೊಂಡಿದ್ದಾರೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಗಾಯಾಳುಗಳೊಂದಿಗೆ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಆಗಮಿಸಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರೇ ಇರಲಿಲ್ಲ. ಜಿಲ್ಲಾ ಹಾಗೂ ತಾಲೂಕಾ ವೈದ್ಯಾಧಿಕಾರಿಗಳನ್ನು ಪೋನ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇವಲ 4-5 ಜನ ನರ್ಸ್‌ಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ಕಳುಹಿಸಿಕೊಡಲಾಯಿತು.
ಮಾನವೀಯತೆ ಮೆರೆದರು: ಲಕ್ಷ್ಮೇಶ್ವರದಲ್ಲಿ 2 ತುರ್ತು ವಾಹನಗಳನ್ನು ಬಳಸಿ 6 ಜನ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಯಿತು. ಉಳಿದ ಗಾಯಾಳುಗಳನ್ನು ಕರೆದೊಯ್ಯಲು ಅಂಬ್ಯುಲೆನ್ಸ್ ವಾಹನಗಳು ಸಿಗದೆ ಪರದಾಡುವಂತಾಯಿತು. ನಂತರ ಸಾರ್ವಜನಿಕರು ತಮ್ಮ ಸ್ವಂತ ಖರ್ಚಿನಿಂದ ಖಾಸಗಿ ವಾಹನದಲ್ಲಿ ಕಿಮ್ಸಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಗದಗ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಆಸ್ಪತ್ರೆಗೆ ಧಾವಿಸಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ರಾಮನಗೌಡ ತಾರಿಹಾಳ, ಮಂಜುನಾಥಗೌಡ ಕೊರಡೂರ, ರಮೇಶ ತರ್ಲಗಟ್ಟ, ಶಿವನಗೌಡ ಪಾಟೀಲ, ಶಂಕ್ರಣ್ಣ ಆದಿ ಮುಂತಾದವರು ಗಾಯಾಳುಗಳಿಗೆ ನೆರವಾಗಿ, ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ಪಟ್ಟಣದ ಎಸ್‌ಐ ಜೆ. ವೆಂಕಟಸ್ವಾಮಿ ಈ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಧಾವಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಿದರು.

ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.