ಸರ್ಕಾರಿ ನೌಕರಿಗೆ ಮೈದುನನ್ನೇ ಗಂಡ ಎಂದ ಅತ್ತಿಗೆ!
ಕ.ಪ್ರ. ವಾರ್ತೆ , ಹುಬ್ಬಳ್ಳಿ , ಮೇ 14
ಅನುಕಂಪದ ಆಧಾರದ ಮೇಲೆ ನೌಕರಿ ಗಿಟ್ಟಿಸಿಕೊಳ್ಳಲು ಮಹಿಳೆಯೊಬ್ಬಳು ಮೈದುನನ್ನೇ ತನ್ನ ಗಂಡ ಎಂದು ಸಾಬೀತು ಪಡಿಸುವ ದಾಖಲೆ ಸೃಷ್ಟಿಸಿದ್ದಲ್ಲದೇ ನೌಕರಿಯನ್ನೂ ಗಿಟ್ಟಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಖೊಟ್ಟಿ ದಾಖಲೆ ಸೃಷ್ಟಿಸಿದ ಈ ಪ್ರಕರಣ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
1982ರಲ್ಲಿ ಹುಬ್ಬಳ್ಳಿ ಸಮೀಪದ ಕರಡಿಕೊಪ್ಪ ಗ್ರಾಮದ ವಿರಪಯ್ಯ ಹಿರೇಮಠ ಎಂಬವರು ಕಾರವಾರ ಜಿಲ್ಲೆ ಶಿರಸಿಯ ಹೆಸ್ಕಾಂ ಅಧೀಕ್ಷಕರ ಕಚೇರಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸಕ್ಕೆ ಸೇರಿದ್ದರು. ಬಳಿಕ ವಿರಪಯ್ಯ “t’ ದರ್ಜೆ ನೌಕರನಾಗಿ ಕೆಲಸ ಕಾಯಂ ಆಗಿತ್ತು. ಹೀಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಣ್ಣ ಬಸವಣ್ಣಯ್ಯ ಹಾಗೂ ಅತ್ತಿಗೆ ನೀಲವ್ವಳನ್ನು ಕರೆ ತಂದು ಶಿರಸಿಯ ತಮ್ಮ ಮನೆಯಲ್ಲಿರಿಸಿಕೊಂಡಿದ್ದರು.
ದಿನ ಕಳೆದಂತೆ ಮಾನಸಿಕ ಅಸ್ವಸ್ಥರಾಗಿ ವಿರಪಯ್ಯ ಶಿರಸಿ ಬಿಟ್ಟು ಹೋಗುತ್ತಾರೆ. ಈ ವೇಳೆ ತಮ್ಮನ ಅನುಪಸ್ಥಿತಿಯಲ್ಲಿ ಅಣ್ಣ ಬಸವಣ್ಣಯ್ಯ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ವೇತನವನ್ನೂ ಪಡೆಯಲು ಶುರು ಮಾಡುತ್ತಾನೆ. ಅಧಿಕಾರಿಗಳೂ ಬಡವ ಎಂಬ ಕಾರಣಕ್ಕೆ ಸಹಕರಿಸುತ್ತಾರೆ. ತರುವಾಯ ಬಸವಣ್ಣಯ್ಯ ಆಕಸ್ಮಾತ್ ಆಗಿ ಮರದ ಮೇಲಿಂದ ಬಿದ್ದು ಕಣ್ಣಿಗೆ ಪೆಟ್ಟಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಾಗುತ್ತಾನೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪುತ್ತಾನೆ. ಈ ಬಗ್ಗೆ ಮುಂದಾಲೋಚನೆ ಮಾಡಿದ್ದ ಬಸವಣ್ಣಯ್ಯನ ಪತ್ನಿ ನೀಲವ್ವ ಕಿಮ್ಸ್ನಲ್ಲಿ ದಾಖಲಾತಿ ವೇಳೆ ತನ್ನ ಗಂಡನ ಹೆಸರನ್ನು ವಿರಪಯ್ಯ ಉರ್ಫ್ ಬಸವಣ್ಣಯ್ಯ ಎಂದು ಬರೆಯಿಸಿರುತ್ತಾಳೆ. ಜೊತೆಗೆ ಕಿಮ್ಸ್ನಿಂದ ತನ್ನ ಗಂಡ ವಿರಪಯ್ಯ ಮೃತಪಟ್ಟಿದ್ದಾನೆಂದು ಮರಣ ದಾಖಲೆಯನ್ನೂ ಪಡೆಯುತ್ತಾಳೆ. ಬಳಿಕ ಶಿರಸಿಗೆ ಮರಳಿ ಹೆಸ್ಕಾಂ ಕಚೇರಿಯಲ್ಲಿ ವಿರಪಯ್ಯ ಮೃತಪಟ್ಟಿದ್ದು ಅನುಕಂಪದ ಆಧಾರದ ಮೇಲೆ ಆತನ ಪತ್ನಿಯಾದ ತನಗೆ ಸರ್ಕಾರಿ ಕೆಲಸ ನೀಡಬೇಕೆಂದು ದಾಖಲೆ ನೀಡಿ 1992ರಲ್ಲಿ ಕೆಲಸಕ್ಕೂ ಸೇರಿಕೊಳ್ಳುತ್ತಾಳೆ. ಖೊಟ್ಟಿ ದಾಖಲೆ ಸೃಷ್ಟಿಸಿದ್ದರಿಂದ ನೀಲವ್ವ, ವಿರಪಯ್ಯನ ಅತ್ತಿಗೆ ಎಂಬ ವಾಸ್ತವಾಂಶ ಬಯಲಿಗೆ ಬರುವುದೇ ಇಲ್ಲ.
ಸತ್ತವ ಎದ್ದು ಬಂದಾಗ: ಇನ್ನು, ಕರಡಿಕೊಪ್ಪದಲ್ಲಿನ ಸಂಬಂಧಿಕರಿಗೆ ನೀಲವ್ವ ಕಟ್ಟು ಕಥೆಯೊಂದನ್ನು ಹೇಳುತ್ತಾಳೆ. ವಿರಪಯ್ಯ ಊರು ಬಿಟ್ಟು ಹೋಗಿ ಎಲ್ಲೋ ಮೃತಪಟ್ಟಿದ್ದಾನೆ. ಅಲ್ಲದೇ ತನ್ನ ಗಂಡ ಮಾನಸಿಕ ಅಸ್ವಸ್ಥನಾಗಿ ತನ್ನನ್ನು ಬಿಟ್ಟು ಹೋಗಿದ್ದಾಗಿ ಸುದ್ದಿ ರವಾನಿಸುತ್ತಾಳೆ. ಸಂಬಂಧಿಕರೂ ಸಹ ವಾಸ್ತವ ಅರಿವಿಗೆ ಬಾರದೇ ಸುಮ್ಮನಿರುತ್ತಾರೆ.
ಈ ಮಧ್ಯೆ 2011ರಲ್ಲಿ ವಿರಪಯ್ಯ ತನ್ನ ಊರಾದ ಕರಡಿಕೊಪ್ಪಕ್ಕೆ ಮರಳಿದಾಗ ಮನೆ ಮಂದಿಗೆ ಗರ ಬಡಿದ ಅನುಭವ. ವಿರಪಯ್ಯ ಮೃತಪಟ್ಟಿದ್ದಾಗಿ ನೀಲವ್ವ ತಿಳಿಸಿದ್ದಾಳೆ. ಆದರೆ ವಿರಪಯ್ಯ ಇಲ್ಲಿ ಹೇಗೆ ಪ್ರತ್ಯಕ್ಷನಾದ ಎಂದು ಕಂಗಾಲಾಗುತ್ತಾರೆ.
ಆದರೆ ಮಾನಸಿಕವಾಗಿ ಅಷ್ಟೊಂದು ಸಬಲನಾಗಿರದ ವಿರಪಯ್ಯ ಸತ್ಯಾಂಶ ಬಿಚ್ಚಿಡುವಲ್ಲಿಯೂ ವಿಫಲನಾಗುತ್ತಾನೆ.
ಏತನ್ಮಧ್ಯೆ, ವಿರಪಯ್ಯನ ಸಂಬಂಧಿಕರು ಶಿರಸಿಗೆ ಹೋಗಿ ನೀಲವ್ವಳನ್ನು ವಿಚಾರಿಸಿದರೆ ಆಕೆ ಜಗಳ ಕಾಯುತ್ತಾಳೆ. ಈ ಬಗ್ಗೆ ಸಂಶಯಗೊಂಡು ವಿರಪಯ್ಯನ ಸಂಬಂಧಿ ಸಿ. ಬಿ. ಹಿರೇಮಠ, ಹೆಸ್ಕಾಂನಿಂದ ಮಾಹಿತಿ ಹಕ್ಕು ಆಧಾರದ ಮೇಲೆ ನೀಲವ್ವ ಕೆಲಸ ಗಿಟ್ಟಿಸಿಕೊಂಡ ದಾಖಲೆ ಸೇರಿದಂತೆ ಇನ್ನಿತರ ಮಾಹಿತಿ ಪಡೆದಾಗ, ನೀಲವ್ವ ಮೈದುನನ್ನೇ ತನ್ನ ಗಂಡ ಎಂದು ಸಾಬೀತು ಮಾಡುವ ಖೊಟ್ಟಿ ದಾಖಲೆ ಸೃಷ್ಟಿಸಿ ಅನುಕಂಪ ಆಧಾರದ ಮೇಲೆ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದು ಬಯಲಿಗೆ ಬರುತ್ತದೆ.
ಪ್ರಸ್ತುತ ವಿರಪಯ್ಯನ ಸಂಬಂಧಿಕರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ನೀಲವ್ವಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

